ಶ್ರೀನಗರ[ಜು.30]: ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ಅರೆಸೇನಾ ಪಡೆಗಳ 10 ಸಾವಿರ ಯೋಧರನ್ನು ಏಕಾಏಕಿ ರವಾನಿಸಿರುವುದು ಆ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಸಂವಿಧಾನದ 370ನೇ ವಿಧಿ ಅಥವಾ 35ಎ ಪರಿಚ್ಛೇದವನ್ನು ರದ್ದುಗೊಳಿಸಲು ಸಿದ್ಧತೆ ನಡೆಸಿರುವ ಕಾರಣ ಬಂದೋಬಸ್‌್ತ ಏರ್ಪಡಿಸಲು ಯೋಧರನ್ನು ಕೇಂದ್ರ ಸರ್ಕಾರ ನಿಯೋಜಿಸಿರಬಹುದು ಎಂಬ ಆತಂಕ ಕಣಿವೆ ರಾಜ್ಯದಲ್ಲಿ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಗುಪ್ತಚರ ಅಧಿಕಾರಿಗಳು, ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ಉಗ್ರರ ದಾಳಿ ನಡೆಯಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಯೋಧರನ್ನು ಜಮಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರ ಕೃತ್ಯ ಎಸಗಲು ಹೊಂಚು ಹಾಕಿದೆ. ಈ ಸಂದರ್ಭದಲ್ಲಿ ನಮ್ಮ ಯೋಧರ ನೈತಿಕ ಸ್ಥೈರ್ಯ ಹೆಚ್ಚಿಸುವ ಸಲುವಾಗಿ 10 ಸಾವಿರ ಯೋಧರನ್ನು ರವಾನಿಸಲಾಗಿದೆ. ಆ.15ಕ್ಕೂ ಮುನ್ನ ಐಎಸ್‌ಐ ದುಸ್ಸಾಹಸವನ್ನು ತಡೆಯುವ ಪ್ರಯತ್ನ ಇದಾಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ.

ಯೋಧರ ಜಮಾವಣೆ ಬಳಿಕ ಕಾಶ್ಮೀರದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ, ರೈಲ್ವೆ ಅಧಿಕಾರಿಯೊಬ್ಬ ಕಿಡಿಗೇಡಿ ಕೆಲಸ ಮಾಡಿದ್ದಾನೆ. ಕಾಶ್ಮೀರದಲ್ಲಿ ತುರ್ತು ಸ್ಥಿತಿ ನಿರ್ಮಾಣವಾಗುತ್ತಿರುವ ಕಾರಣ ಸಾಧ್ಯವಾದಷ್ಟುಪಡಿತರ ಹಾಗೂ ಕುಡಿಯುವ ನೀರು ಶೇಖರಿಸಿಟ್ಟುಕೊಳ್ಳಿ. ಕುಟುಂಬದವರನ್ನು ಕಾಶ್ಮೀರದಿಂದ ಹೊರಗೆ ಅಂದರೆ ಸ್ವಂತ ಊರಿಗೋ ಬಂಧುಗಳ ಮನೆಗೋ ಕಳುಹಿಸಿಬಿಡಿ ಎಂದು ಆದೇಶ ಹೊರಡಿಸಿದ್ದಾನೆ. ಆದರೆ ಆ ಅಧಿಕಾರಿಗೆ ಆದೇಶ ಹೊರಡಿಸುವ ಅಧಿಕಾರವೇ ಇಲ್ಲ. ಅದೊಂದು ನಕಲಿ ಪತ್ರ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.