ಮಡಿವಾಳ ಕೆರೆಯಲ್ಲಿ ಸಾವಿರಾರು ಬಸವನ ಹುಳುಗಳು ಸಾವನ್ನಪ್ಪಿರುವುದು ಸ್ಥಳೀಯರು ಮತ್ತು ವಾಯು ವಿಹಾರಿಗಳ ಆತಂಕಕ್ಕೆ ಕಾರಣವಾಗಿದೆ.
ಮಡಿವಾಳ ಕೆರೆಯಲ್ಲಿ ಸಾವನ್ನಪ್ಪಿದ ಸಾವಿರಾರು ಬಸವನ ಹುಳುಗಳು!
ಬೆಂಗಳೂರು : ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಮಡಿವಾಳ ಕೆರೆಯಲ್ಲಿ ಸಾವಿರಾರು ಬಸವನ ಹುಳುಗಳು ಸಾವನ್ನಪ್ಪಿರುವುದು ಸ್ಥಳೀಯರು ಮತ್ತು ವಾಯು ವಿಹಾರಿಗಳ ಆತಂಕಕ್ಕೆ ಕಾರಣವಾಗಿದೆ.
ಸಮೀಪದಲ್ಲಿಯೇ ಇರುವ ರಾಜಕಾಲುವೆ ನೀರು ಕೆರೆಗೆ ಹರಿಯುತ್ತಿದೆ. ಯತೇಚ್ಛ ಪ್ರಮಾಣದಲ್ಲಿ ಒಳಚರಂಡಿ ತ್ಯಾಜ್ಯ ನೀರು ಹರಿದು ಬಂದಿರುವುದರಿಂದಲೇ ಬಸವನ ಹುಳುಗಳು ಸಾವನ್ನಪ್ಪಲು ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳಿಂದ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ತ್ಯಾಜ್ಯ ನೀರು ಕೆರೆಗಳನ್ನು ಸೇರಿದೆ. ಬಸವನ ಹುಳುಗಳಲ್ಲದೆ, ಮೀನುಗಳು, ವಲಸೆ ಬಂದಿರುವ ಹಕ್ಕಿಗಳು ಕೂಡ ನಾಶವಾಗುತ್ತಿವೆ. ಕಳೆದ 10 ವರ್ಷಗಳಿಂದ ಕೆರೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದೇನೆ. ಈ ರೀತಿಯ ಘಟನೆ ಹಿಂದೆಂದೂ ಕಂಡುಬಂದಿಲ್ಲ. ಇದೇ ಮೊದಲ ಬಾರಿಗೆ ಬಸವನ ಹುಳುಗಳು ಸತ್ತಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ನಯಾಜ್ ಮಾತನಾಡಿ, ಸಾವನ್ನಪ್ಪಿರುವ ಮೀನುಗಳು ಮತ್ತು ಬಸವನ ಹುಳುಗಳನ್ನು ಕೆರೆಯಿಂದ ವಿಲೇವಾರಿ ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕೆರೆಗೆ ಮತ್ತಷ್ಟುಹಾನಿಯಾಗಲಿದೆ. ವಾಯು ವಿಹಾರಿಗಳಿಗೂ ಕಿರಿಕಿರಿಯಾಗಲಿದೆ. ಕಳೆದ 300 ವರ್ಷಗಳ ಇತಿಹಾಸ ಹೊಂದಿರುವ ಮಡಿವಾಳ ಕೆರೆಯು, ಅಂದಾಜು 115 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿತ್ತು. ಇತ್ತೀಚೆಗೆ ಸಾಕಷ್ಟುಪ್ರಮಾಣದಲ್ಲಿ ಒತ್ತುವರಿ ಮಾಡಲಾಗಿದೆ. 1990ರ ವರೆಗೂ ಕೆರೆಯ ನೀರು ಸ್ವಚ್ಛವಾಗಿತ್ತು. ನಂತರ ಕೈಗಾರಿಕೆಗಳ ನೀರು ನಿರಂತರವಾಗಿ ಕೆರೆಗೆ ಸೇರುತ್ತಿರುವುದರಿಂದ ಮಲಿನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆರೆ ಅಂಗಳದಲ್ಲಿ ಹಲವಾರು ಜೀವ ವೈವಿಧ್ಯವಿದೆ. ಕೆರೆಯ ಸಂರಕ್ಷಣೆಗೆ ಎಚ್ಚೆತ್ತುಕೊಳ್ಳದಿದ್ದರೆ, ಬೆಳ್ಳಂದೂರು ಕೆರೆ ಪಟ್ಟಿಗೆ ಮಡಿವಾಳ ಕೆರೆ ಕೂಡ ಸೇರಲಿದೆ. ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆರೆ ಸಂರಕ್ಷಿಸಬೇಕು. ಬೆಳಗ್ಗೆ ಮತ್ತು ಸಂಜೆಯ ವೇಳೆ ವಾಯು ವಿಹಾರಕ್ಕೆ ಉತ್ತಮ ಸ್ಥಳವಾಗಿದೆ. ಇಂದಿಷ್ಟುಸಮಯ ವಿಶ್ರಾಂತಿ ತೆಗೆದುಕೊಳ್ಳಲು ಸಹ ಕೆರೆಯ ವಾತಾವರಣ ಆಹ್ಲಾದವಾಗಿದೆ. ಕೆರೆಗೆ ತ್ಯಾಜ್ಯ ಸೇರಿ ಹಾಳಾಗುತ್ತಿರುವುದು ಆತಂಕಕಾರಿ ವಿಚಾರ ಎಂದು ಸ್ಥಳೀಯ ನಿವಾಸಿ ನವೀನ್ ತಿಳಿಸಿದರು.
ನಿಸರ್ಗದತ್ತವಾಗಿ ಈ ಪ್ರಕ್ರಿಯೆ ನಡೆಯಲಿದೆ. ಹೊಸ ನೀರು ಬಂದಾಗ ವಯಸ್ಸಾದ ಬಸವನ ಹುಳುಗಳಿಗೆ ಸಾವು ಸಂಭವಿಸುವುದು ಸಹಜ ಪ್ರಕ್ರಿಯೆಯಾಗಿದೆ. ಹೊಸದಾಗಿ ಜನ್ಮ ತಾಳಲಿರುವ ಬಸವನ ಹುಳುಗಳು ಬದುಕಲಿವೆ. ಪ್ರತಿ ವರ್ಷ ಇದೇ ರೀತಿ ನಡೆಯಲಿದೆ.
ಅರಣ್ಯ ಇಲಾಖೆ ಅಧಿಕಾರಿಗಳು.
