ಮೊದಲೇ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಕೆರೆಗಳ ಒಡಲು ನೀರಿಲ್ಲದೆ ಬರಿದಾಗಿವೆ. ಆದರೆ ಇಲ್ಲೊಂದು ಕೆರೆಯಲ್ಲಿ ಅಲ್ಪ ಸ್ವಲ್ಪ ನೀರಿದ್ದು , ಸುತ್ತಮುತ್ತಲ ನಾಲ್ಕೈದು ಹಳ್ಳಿಗಳ ಜಾನುವಾರಿಗಳಿಗೆ ಆಧಾರವಾಗಿತ್ತು. ಅಷ್ಟೇ ಅಲ್ದೆ  ವ್ಯಕ್ತಿಯೊಬ್ಬರು ಈ ಕೆರೆಯನ್ನ ಗುತ್ತಿಗೆ ಪಡೆದು, ಕೆರೆಯಲ್ಲಿ  30 ಸಾವಿರ ಮೀನು ಮರಿಗಳನ್ನು ಸಾಕಲು ಬಿಟ್ಟಿದ್ದರು. ಇದನ್ನು ಸಹಿಸದ ದುಷ್ಕರ್ಮಿಗಳು ಕೆರೆಗೆ ವಿಷ ಬೆರೆಸಿ, ಜಲಚರಗಳ ಮಾರಣ ಹೋಮ ನಡೆಸಿದ್ದಾರೆ.

ಆನೇಕಲ್: ಕೆರೆಯ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದರಿಂದಾಗ ಕೆರೆಯಲ್ಲಿನ 30 ಸಾವಿರ ಮೀನುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚನ್ನೇನ ಅಗ್ರಹಾರ ಕೆರೆಯಲ್ಲಿ ನಡೆದಿದೆ. ಮೊದಲೇ ಬರಗಾಲ ತಾಂಡವವಾಡುತ್ತಿದ್ದು, ಈ ಕೆರೆಯಲ್ಲಿ ಅಲ್ಪ ಸ್ವಲ್ಪ ನೀರಿದ್ದರಿಂದ ವೆಂಕಟೇಶ್ ಎಂಬುವರು ಕಳೆದ ವರ್ಷ ಗುತ್ತಿಗೆ ಪಡೆದು ಕೆರೆಯಲ್ಲಿ 30 ಸಾವಿರ ಮೀನು ಮರಿಗಳನ್ನು ಬಿಟ್ಟು ಸಾಕಾಣಿಕೆ ನಡೆಸುತ್ತಿದ್ದರು. ಜೊತಗೆ ಈ ಕೆರೆಯ ನೀರಿನಿಂದ ಚನ್ನೇನ ಅಗ್ರಹಾರ, ಸಬ್'ಮಂಗಲ ಸೇರಿದಂತೆ ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳ ಜಾನುವಾರುಗಳು ಈ ಕೆರೆಯ ನೀರನ್ನು ಕುಡಿದು ಜೀವಿಸುತ್ತಿದ್ದವು. ಆದರೆ ಕಳೆದ ರಾತ್ರಿ ದುಷ್ಕರ್ಮಿಗಳು ಕೆರೆಗೆ ವಿಷ ಬೆರೆಸಿರುವುದರಿಂದ ಸಾವಿರಾರು ಮೀನು ಮರಿಗಳು ಸಾವನ್ನಪ್ಪಿವೆ. ಮೀನುಗಳಷ್ಟೇ ಅಲ್ಲ, ಕೆರೆಯಲ್ಲಿದ್ದ ಹಾವುಗಳು ಸಹ ಸಾವನ್ನಪ್ಪಿವೆ. ಕೆರೆ ಅಂಗಳದಲ್ಲಿ ವಿಷದ ಬಾಟಲಿಗಳು ಪತ್ತೆಯಾಗಿರುವುದು ದುಷ್ಕರ್ಮಿಗಳು ಕೆರೆಯ ನೀರಿಗೆ ವಿಷ ಬೆರೆಸಿರುವುದಕ್ಕೆ ಸಾಕ್ಷಿಯಾಗಿದೆ.

ಆನೇಕಲ್ ತಾಲೂಕಿನಾದ್ಯಂತ ಬರಗಾಲ ತಾಂಡವವಾಡುತ್ತಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ಎಲ್ಲರೂ ನೀರಿಗಾಗಿ ಈ ಕೆರೆಯನ್ನೇ ಅವಲಂಬಿಸಿದ್ದರು. ಆದರೆ ದುಷ್ಕರ್ಮಿಗಳ ಈ ದುಷ್ಕೃತ್ಯದಿಂದ ನಾಲ್ಕೈದು ಗ್ರಾಮಗಳ ಜನರ ಜೀವನಕ್ಕೆ ತೊಂದರೆಯಾಗಿದೆ. ಲಕ್ಷಾಂತರ ರೂ ಖರ್ಚು ಮಾಡಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದ ವೆಂಕಟೇಶ್'ಗೆ ಭಾರಿ ನಷ್ಷವಾಗಿದೆ.

ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- ಮಂಜುನಾಥ್, ಸುವರ್ಣನ್ಯೂಸ್