ಕೊಲ್ಕತ್ತಾ, [ನ.11]:  ಮುಂಬರುವ ಲೋಕಸಭಾ ಚುನಾವಣೆ ಮಮತಾ ಬ್ಯಾನರ್ಜಿಗೆ ಸೋಲಿನ ರುಚಿ ತೋರಿಸಲು ಬಿಜೆಪಿ ಈಗಿನಿಂದಲೇ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ತಯಾರಿ ನಡೆಸಿದೆ. 

ಇದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ಡಿಸೆಂಬರ್‌ 5, 6 ಮತ್ತು 7 ರಂದು 42 ಲೋಕಸಭಾ ಕ್ಷೇತ್ರಗಳಲ್ಲಿಯೂ ರಥಯಾತ್ರೆ ಸಂಚರಿಸಲಿದ್ದು, ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರು ರಥಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. 

ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಕೋಲ್ಕತಾದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದ್ದು, ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದೆ.  ಆದರೆ, ಈ ಬಿಜೆಪಿ ರಥ ಯಾತ್ರೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಾಕೆಟ್‌ ಚಟರ್ಜಿ ವರು ವಿವದಾತ್ಮಕ ಹೇಳಿಕೆ ನೀಡಿದ್ದಾರೆ.

ಇಂದು [ಭಾನುವಾರ] ಕೊಲ್ಕತ್ತಾದ ಮಾಲ್ದಾ ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಘಟಕದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಬಿಜೆಪಿ ರಥ ಯಾತ್ರೆಯನ್ನು ಯಾರಾದರೂ ತಡೆದದ್ದೇ ಆದರೆ ಅವರು ಅದೇ ರಥದ ಕೆಳಗೆ ಸಿಲುಕಿ ಪುಡಿಯಾಗುತ್ತಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. 

ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಉದ್ದೇಶದಿಂದ ರಾಜ್ಯದಲ್ಲಿ ರಥಯಾತ್ರೆಯನ್ನು ಕೈಗೊಳ್ಳಲಾಗಿದ್ದು, ಈ ರಥಯಾತ್ರೆಯನ್ನು ತಡೆಯಲು ಯಾರೇ ಪ್ರಯತ್ನಿಸಿದರೂ ಕೂಡ ಅವರ ತಲೆಯು ಅದೇ ರಥ ಚಕ್ರದ ಕೆಳಗೆ ಸಿಲುಕಿ ಪುಡಿಯಾಗುತ್ತದೆ ಎಂದು ಭಾಷಣದಲ್ಲಿ ಆಕ್ರೋಶ ಭರಿತರಾಗಿ ಹೇಳಿದರು.