ಬೇರೆ ಪಕ್ಷದಿಂದ ಬಂದು ಟಿಕೆಟ್ ಕೇಳಿದವರಿಗೆ ಟಿಕೆಟ್ ಇಲ್ಲ ಎಂದು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಿ, ಪಕ್ಷವನ್ನು ಅಧಿಕಾರಕ್ಕೆ ತನ್ನಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಕರೆ ನೀಡಿದ್ದಾರೆ.
ಬೆಂಗಳೂರು(ಜೂನ್ 12): ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಮಾನದಂಡವೇನು ಎಂಬುದನ್ನು ರಾಹುಲ್ ಗಾಂಧಿ ಸ್ಪಷ್ಟ ಮಾತುಗಳಲ್ಲಿ ಇಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷರು, ಜನನಾಯಕರಿಗಷ್ಟೇ ಈ ಬಾರಿ ಕಾಂಗ್ರೆಸ್ ಟಿಕೆಟ್ ಎಂದು ಹೇಳಿದ್ದಾರೆ.
"ಎಲೆಕ್ಷನ್ ಟಿಕೆಟ್ ಹೆಲಿಕಾಪ್ಟರ್'ನಲ್ಲಿ ಬರಲ್ಲ, ಪೋಸ್ಟ್'ನಲ್ಲೂ ಬರಲ್ಲ... ಜನತೆಯೊಂದಿಗೆ ಗುರುತಿಸಿಕೊಂಡ ಮುಖಂಡರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ. ಎಷ್ಟೇ ಹಿರಿಯರಾಗಿದ್ದರೂ ಜನರ ನಡುವೆ ಇಲ್ಲದಿದ್ದರೆ ಟಿಕೆಟ್ ಇಲ್ಲ," ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಬೇರೆ ಪಕ್ಷದಿಂದ ಬಂದು ಟಿಕೆಟ್ ಕೇಳಿದವರಿಗೆ ಟಿಕೆಟ್ ಇಲ್ಲ ಎಂದು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಿ, ಪಕ್ಷವನ್ನು ಅಧಿಕಾರಕ್ಕೆ ತನ್ನಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಕರೆ ನೀಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಪಡೆಯಲು ಈಗಾಗಲೇ ಬಹಳಷ್ಟು ಕಸರತ್ತು ನಡೆಯುತ್ತಿದೆ. 39 ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರುವ ಸುದ್ದಿ ಕೇಳಿಬರುತ್ತಿರುವ ಬೆನ್ನಲ್ಲೇ ಈಗ ರಾಹುಲ್ ಗಾಂಧಿ ಜನನಾಯಕರಿಗೆ ಮಾತ್ರ ಟಿಕೆಟ್ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ. ಜನರ ಮಧ್ಯೆ ಇಲ್ಲದ ಶಾಸಕರು ಯಾರಾರು ಎಂಬ ವಿಮರ್ಶೆ ಈಗಾಗಲೇ ರಾಜ್ಯ ಕಾಂಗ್ರೆಸ್ಸಿಗರಲ್ಲಿ ಶುರುವಾಗಿರಬಹುದು.
ಸಿದ್ದುಗೆ ರಾಹುಲ್ ಪ್ರಶಂಸೆ:
ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಕಾರ್ಯಗಳನ್ನು ರಾಹುಲ್ ಗಾಂಧಿ ಪ್ರಶಂಸಿಸಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯದ ಧ್ವನಿಯಾಗಿದ್ದಾರೆ. ಎಲ್ಲಾ ಸಮುದಾಯದ ಬಡವರ ಪರ ಅವರ ಸರಕಾರ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಆಡಳಿತದ ಲಕ್ಷಣ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಮತ್ತು ಜಿ.ಪರಮೇಶ್ವರ್ ಅವರು ಬೆಳ್ಳಿ ಖಡ್ಗ ನೀಡಿ ಸನ್ಮಾನ ಮಾಡಿದರು.
