ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿ ಅಮೆರಿಕ ದೇಣಿಗೆಯಿಂದ ವಂಚಿತವಾದ ಬಳಿಕ ಪಾಠ ಕಲಿತಿರುವ ಪಾಕಿಸ್ತಾನ, ನಿಷೇಧಿತ ಸಂಘಟನೆಗಳಿಗೆ ದೇಣಿಗೆ ನೀಡಿದವರು ಹೆಚ್ಚಿನ 1 ಕೋಟಿ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನವದೆಹಲಿ (ಜ.07): ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿ ಅಮೆರಿಕ ದೇಣಿಗೆಯಿಂದ ವಂಚಿತವಾದ ಬಳಿಕ ಪಾಠ ಕಲಿತಿರುವ ಪಾಕಿಸ್ತಾನ ಇದೀಗ, ಇತ್ತೀಚೆಗಷ್ಟೇ ಘೋಷಿಸಿದಂತೆ ಮುಂಬೈ ದಾಳಿ ರೂವಾರಿ ಉಗ್ರ ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದಾವಾ ಸೇರಿ ಒಟ್ಟು 72 ಭಯೋತ್ಪಾದಕ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿದೆ. ಅಲ್ಲದೆ, ನಿಷೇಧಿತ ಸಂಘಟನೆಗಳಿಗೆ ದೇಣಿಗೆ ನೀಡಿದವರು ಹೆಚ್ಚಿನ 1 ಕೋಟಿ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪಾಕಿಸ್ತಾನ ಸರ್ಕಾರ ಉರ್ದು ಸೇರಿ ಎಲ್ಲ ದಿನ ಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಟಿಸಿದೆ. ಇದರಲ್ಲಿ ಜಮಾತ್ ಉದ್ ದವಾ, ಫಲಾಹ್-ಇ ಇನ್ಸಾನಿಯತ್ ಫೌಂಡೇಷನ್ ಮತ್ತು ಲಷ್ಕರ್ ತೊಯ್ಬಾ ಸೇರಿಒಟ್ಟು 72 ಉಗ್ರ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ನಿಷೇಧಿತ ಸಂಘಟನೆಗಳಿಗೆ ದೇಣಿಗೆ ಅಪರಾಧ ಪ್ರಕರಣವಾಗಲಿದ್ದು, ಅವರು 10 ವರ್ಷ ಜೈಲು ಮತ್ತು 1 ಕೋಟಿ ರು. ದಂಡ ವಿಧಿಸಲಾಗುತ್ತದೆ ಎಂದು ಜಾಹೀರಾತಿನಲ್ಲಿ ಎಚ್ಚರಿಸಲಾಗಿದೆ.

ಜ.1 ರಂದು ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಕಳೆದ 15 ವರ್ಷಗಳಿಂದ ಅಮೆರಿಕದ ನೆರವನ್ನು ಪಡೆಯುತ್ತಿರುವ ಪಾಕಿಸ್ತಾನ, ಅಮೆರಿಕಕ್ಕೆ ಸುಳ್ಳು ಮತ್ತು ವಂಚನೆಯನ್ನು ಪ್ರತಿಫಲವಾಗಿ ನೀಡಿದೆ,’ ಎಂದು ಪಾಕಿಸ್ತಾನದ ವಿರುದ್ಧ ಗುಡುಗಿದ್ದರು.