ಲಂಡನ್‌ (ಸೆ. 24): ವಿವಿಧ ಪ್ಯಾಕೇಜ್‌ಗಳಡಿ ಜನರನ್ನು ಪ್ರವಾಸಕ್ಕೆ ಕರೆದೊಯ್ಯುವ ಹಾಗೂ ವಿಮಾನಯಾನ ಸೇವೆಯನ್ನು ಒದಗಿಸುವ 178 ವರ್ಷಗಳಷ್ಟುಇತಿಹಾಸವುಳ್ಳ ಬ್ರಿಟನ್‌ನ ಪ್ರಸಿದ್ಧ ಥಾಮಸ್‌ ಕುಕ್‌ ಕಂಪನಿ ಹಠಾತ್‌ ದಿವಾಳಿಯಾಗಿದೆ.

ಕಂಪನಿ ದಿಢೀರ್‌ ಬಂದ್‌ ಆಗಿರುವುದರಿಂದ ಪ್ರವಾಸಕ್ಕೆಂದು ತೆರಳಿದ್ದ ಬರೋಬ್ಬರಿ 1.50 ಲಕ್ಷ ಬ್ರಿಟನ್‌ ಪ್ರಜೆಗಳು ಸೇರಿದಂತೆ ವಿವಿಧ ದೇಶಗಳ 6 ಲಕ್ಷ ಪ್ರವಾಸಗಿರು ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರವಾಸಿಗರನ್ನು ಉಚಿತವಾಗಿ ಕರೆತರಲು ಬ್ರಿಟನ್‌ ಸರ್ಕಾರ ಕಾರ್ಯಾಚರಣೆ ಆರಂಭಿಸಿದ್ದು, ಶಾಂತಿ ಸಂದರ್ಭದಲ್ಲಿ ಇಷ್ಟೊಂದು ಸಂಖ್ಯೆಯ ಜನರನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿರುವ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.

ವಿಶ್ವಸಂಸ್ಥೆಗೆ ಬಂದು ಮತ್ತೆ ಮೋದಿ ಭಾಷಣ ಕೇಳಿದ ಟ್ರಂಪ್!

ಈ ನಡುವೆ, ಥಾಮಸ್‌ ಕುಕ್‌ (ಇಂಡಿಯಾ) ಎಂಬ ಕಂಪನಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆಯಾದರೂ, ಅದರ ಮೇಲೆ ಯಾವುದೇ ಪರಿಣಾಮವಾಗಿಲ್ಲ. 2012ರಲ್ಲೇ ಈ ಕಂಪನಿಯನ್ನು ಕೆನಡಾ ಮೂಲದ ಸಂಸ್ಥೆಯೊಂದಕ್ಕೆ ಬ್ರಿಟನ್‌ನ ಥಾಮಸ್‌ ಕುಕ್‌ ಮಾರಾಟ ಮಾಡಿತ್ತು. ಹೀಗಾಗಿ ನಮಗೂ ಆ ಕಂಪನಿಗೂ ಸಂಬಂಧವಿಲ್ಲ ಎಂದು ಥಾಮಸ್‌ ಕುಕ್‌ (ಇಂಡಿಯಾ) ಸ್ಪಷ್ಟನೆ ನೀಡಿದೆ.

ಥಾಮಸ್‌ ಕುಕ್‌ ಕಂಪನಿ ಬಂದ್‌ ಆಗಿರುವುದರಿಂದ ಅದು ಕಾರ್ಯಾಚರಣೆ ನಡೆಸುತ್ತಿದ್ದ 4 ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. 16 ದೇಶಗಳಲ್ಲಿದ್ದ 21 ಸಾವಿರ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಎಂದು ಬ್ರಿಟನ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ವಾಹನ ಸವಾರರಿಗೆ ಕೇಂದ್ರದಿಂದ ಮತ್ತೊಂದು ಶಾಕ್‌!

ಬ್ರೆಕ್ಸಿಟ್‌ ಅನಿಶ್ಚಿತತೆಯಿಂದಾಗಿ ಸಾಲದ ಹೊರೆ ಹೆಚ್ಚಾಗುತ್ತಿದೆ. ಬುಕಿಂಗ್‌ನಲ್ಲಿ ಹಿಂಜರಿತ ಕಂಡುಬಂದಿದೆ ಎಂದು ಹಲವು ತಿಂಗಳ ಹಿಂದೆಯೇ ಥಾಮಸ್‌ ಕುಕ್‌ ಹೇಳಿಕೊಂಡಿತ್ತು. ಕಂಪನಿ ದಿವಾಳಿಯಾಗುವುದನ್ನು ತಪ್ಪಿಸಲು 1700 ಕೋಟಿ ರು. ಸಾಲ ಮಾಡುತ್ತಿರುವುದಾಗಿ ಶುಕ್ರವಾರವಷ್ಟೇ ತಿಳಿಸಿತ್ತು. ಆದರೆ ಸಾಲ ಪಡೆವ ವಿಚಾರವಾಗಿ ಷೇರುದಾರರು ಹಾಗೂ ಸಾಲ ವಿತರಕರ ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ದಿವಾಳಿಯಾಗಿದೆ. ಒಂದು ದಿನದ ರೈಲು ಪ್ರವಾಸದೊಂದಿಗೆ ಥಾಮಸ್‌ ಕುಕ್‌ ಕಂಪನಿ 1841ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 16 ದೇಶಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿತ್ತು.