ರೈತನಿಗೆ ಸಿಹಿ ಸುದ್ದಿ: ಈ ಬಾರಿ ಸಹಜ ಮುಂಗಾರು ಮಳೆ

First Published 5, Apr 2018, 11:11 AM IST
This Year Normal Rain
Highlights

ಮಳೆಯನ್ನೇ ನಂಬಿ ಬದುಕುವ ಭಾರತೀಯ ರೈತನಿಗೆ ಈ ವರ್ಷ ಒಂದು ಸಿಹಿ ಸುದ್ದಿಯಿದೆ. ದೇಶದಲ್ಲಿ ಈ ವರ್ಷ ‘ಸಹಜ’ ಮುಂಗಾರು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಇಲಾಖೆ ಸ್ಕೈಮೆಟ್‌ ವೆದರ್‌ ಅಂದಾಜಿಸಿದೆ.

ನವದೆಹಲಿ: ಮಳೆಯನ್ನೇ ನಂಬಿ ಬದುಕುವ ಭಾರತೀಯ ರೈತನಿಗೆ ಈ ವರ್ಷ ಒಂದು ಸಿಹಿ ಸುದ್ದಿಯಿದೆ. ದೇಶದಲ್ಲಿ ಈ ವರ್ಷ ‘ಸಹಜ’ ಮುಂಗಾರು ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಇಲಾಖೆ ಸ್ಕೈಮೆಟ್‌ ವೆದರ್‌ ಅಂದಾಜಿಸಿದೆ. ಈ ಬಾರಿಯ ಮುಂಗಾರಿನ ದೀರ್ಘಾವಧಿ ಸರಾಸರಿ (ಎಲ್‌ಪಿಎ) 96-104ರಷ್ಟಿರಲಿದೆ ಎಂದು ಅದು ತಿಳಿಸಿದೆ.

ದೇಶದ ಮಳೆಯಲ್ಲಿ ಶೇ.70ರಷ್ಟುಪಾಲಿನ ಕೊಡುಗೆ ನೀಡುವ ನಾಲ್ಕು ತಿಂಗಳ ನೈರುತ್ಯ ಮುಂಗಾರು ಈ ಬಾರಿ ಜೂನ್‌ನಲ್ಲಿ ಆರಂಭವಾಗಿ, ಸೆಪ್ಟಂಬರ್‌ ವರೆಗೂ ಮುಂದುವರಿಯಲಿದೆ. ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಕೊಂಚ ಪ್ರಮಾಣ ಇಳಿಕೆಯಾಗಲಿದೆ. ಆಗಸ್ಟ್‌ನಲ್ಲಿ ಜುಲೈಗಿಂತಲೂ ಕಡಿಮೆ ಮಳೆಯಿರಲಿದೆ ಎಂದು ಸ್ಕೈಮೆಟ್‌ ಅಂದಾಜಿಸಿದೆ. ದೇಶದಲ್ಲಿ ಸಹಜ ಮಳೆಯಿರಲಿದೆಯಾದರೂ, ಈಶಾನ್ಯದ ಕೆಲವು ರಾಜ್ಯಗಳಲ್ಲಿ ಮಳೆ ಕೊರತೆಯಾಗಲಿದೆ ಎಂದೂ ಅದು ತಿಳಿಸಿದೆ.

ಸಹಜಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ.20ರಷ್ಟಿದ್ದರೆ, ಸಹಜಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯೂ ಶೇ.20ರಷ್ಟಿದೆ. ಆದರೆ ಸಂಪೂರ್ಣ ಬರಗಾಲ ಆಗುವ ಸಾಧ್ಯತೆಯಿಲ್ಲ. ದೀರ್ಘಾವಧಿ ಸರಾಸರಿ 90-96ರಷ್ಟಿದ್ದರೆ ಅದು ಸಹಜಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. ಎಲ್‌ಪಿಎ 90ಕ್ಕಿಂತಲೂ ಕಡಿಮೆಯಿದ್ದರೆ, ಅದನ್ನು ಕೊರತೆ ಮುಂಗಾರು ಎನ್ನುತ್ತಾರೆ. ಎಲ್‌ಪಿಎ 104ಕ್ಕಿಂತ ಹೆಚ್ಚಿದ್ದರೆ ಅದು ಸಹಜಕ್ಕಿಂತ ಅಧಿಕ ಮಳೆ ಎನ್ನಲಾಗುತ್ತದೆ.

loader