Asianet Suvarna News Asianet Suvarna News

50 ಪೈಸೆಗೆ ಪರದಾಡುತ್ತಿದ್ದ ಮಹಿಳೆ ಈಗ ಕೋಟಿ ಕೋಟಿ ಸಂಪತ್ತಿನ ಒಡತಿ; ಈ ಮಹಿಳೆಯ ಯಶೋಗಾಥೆ ಕೇಳಿದ್ರೆ ಅಚ್ಚರಿ!

ಅದು 1982 ನೇ ಇಸವಿ. ರಾತ್ರಿಯಾದ ಕಾರಣ ಚೆನ್ನೈನ ಮರೀನಾ ಬೀಚ್‌'ನಲ್ಲಿ ಜನಸಂದಣಿ ಕಡಿಮೆ ಇತ್ತು. ಆ ಹೊತ್ತಿಗೆ ಮಹಿಳೆಯೊಬ್ಬಳು ಒಂದು ಕೈಯಲ್ಲಿ ಮಗುವನ್ನೆತ್ತಿಕೊಂಡು ಇನ್ನೊಂದು ಕೈಯಿಂದ ಗೂಡ್ಸ್ ರಿಕ್ಷಾದೊಳಗಿಂದ ತನ್ನ ಪುಟ್ಟ ಪೆಟ್ಟಿಯಂಗಡಿಯನ್ನು ಕೆಳಗಿಳಿಸುತ್ತಿದ್ದಳು. ಅವತ್ತು ರಾತ್ರಿಯಿಡೀ ಅಲ್ಲಿ ಅಂಗಡಿ ರೆಡಿಮಾಡುವ ಕೆಲಸ. ಮರುದಿನ ಸಂಜೆ 3 ಗಂಟೆಗೆ ಜನ ವಾಕಿಂಗ್‌ಗೆ ಬರುವ ಹೊತ್ತಿಗೆ ಸರಿಯಾಗಿ ಪೆಟ್ಟಿ ಅಂಗಡಿ ಓಪನ್ ಆಯ್ತು. ಅಲ್ಲಿ ಸಿಗುತ್ತಿದ್ದದ್ದು ಟೀ ಮತ್ತು ಸಿಗರೇಟ್. ನಿರಂತರವಾಗಿ ಭೋರ್ಗರೆಯುವ ಕಡಲ ಎದುರು ಬೆಳಗ್ಗಿನಿಂದ ರಾತ್ರಿಯವರೆಗೆ ತೆರೆದಿದ್ದರೂ ಮೊದಲ ದಿನದ ವ್ಯಾಪಾರದಿಂದ ಬಂದ ಹಣ ಕೇವಲ 50 ಪೈಸೆ! ಅದೇ ಮಹಿಳೆ ಇಂದು ಕೋಟಿಗಳ ಒಡತಿ.

This Women Successful Story

ಬೆಂಗಳೂರು (ಜ.29): ಅದು 1982 ನೇ ಇಸವಿ. ರಾತ್ರಿಯಾದ ಕಾರಣ ಚೆನ್ನೈನ ಮರೀನಾ ಬೀಚ್‌'ನಲ್ಲಿ ಜನಸಂದಣಿ ಕಡಿಮೆ ಇತ್ತು. ಆ ಹೊತ್ತಿಗೆ ಮಹಿಳೆಯೊಬ್ಬಳು ಒಂದು ಕೈಯಲ್ಲಿ ಮಗುವನ್ನೆತ್ತಿಕೊಂಡು ಇನ್ನೊಂದು ಕೈಯಿಂದ ಗೂಡ್ಸ್ ರಿಕ್ಷಾದೊಳಗಿಂದ ತನ್ನ ಪುಟ್ಟ ಪೆಟ್ಟಿಯಂಗಡಿಯನ್ನು ಕೆಳಗಿಳಿಸುತ್ತಿದ್ದಳು. ಅವತ್ತು ರಾತ್ರಿಯಿಡೀ ಅಲ್ಲಿ ಅಂಗಡಿ ರೆಡಿಮಾಡುವ ಕೆಲಸ. ಮರುದಿನ ಸಂಜೆ 3 ಗಂಟೆಗೆ ಜನ ವಾಕಿಂಗ್‌ಗೆ ಬರುವ ಹೊತ್ತಿಗೆ ಸರಿಯಾಗಿ ಪೆಟ್ಟಿ ಅಂಗಡಿ ಓಪನ್ ಆಯ್ತು. ಅಲ್ಲಿ ಸಿಗುತ್ತಿದ್ದದ್ದು ಟೀ ಮತ್ತು ಸಿಗರೇಟ್. ನಿರಂತರವಾಗಿ ಭೋರ್ಗರೆಯುವ ಕಡಲ ಎದುರು ಬೆಳಗ್ಗಿನಿಂದ ರಾತ್ರಿಯವರೆಗೆ ತೆರೆದಿದ್ದರೂ ಮೊದಲ ದಿನದ ವ್ಯಾಪಾರದಿಂದ ಬಂದ ಹಣ ಕೇವಲ 50 ಪೈಸೆ! ಅದೇ ಮಹಿಳೆ ಇಂದು ಕೋಟಿಗಳ ಒಡತಿ.

ಚೆನ್ನೈನ ಪ್ರತಿಷ್ಠಿತ ‘ಸಂದೀಪ ಚೈನ್ ಆಫ್ ರೆಸ್ಟೊರೆಂಟ್’ನ ಮಾಲಕಿ. ವೆಲಚ್ಚೇರಿಯಲ್ಲಿ ಅತ್ಯಾಧುನಿಕ ಮನೆಯಿದೆ, ಎದುರು ದುಬಾರಿ ಕಾರು ನಿಂತಿರುತ್ತದೆ. ಈ ಬ್ಯುಸಿನೆಸ್ ಐಕಾನ್ ಹೆಸರು ಪ್ಯಾಟ್ರಿಸಿಯಾ ನಾರಾಯಣ್.

ಕರುಣಾಜನಕ ಕಥೆ:ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಪ್ಯಾಟ್ರಿಸಿಯಾ, 17-18 ರ ಹರೆಯದಲ್ಲಿ ಪಿಯುಸಿ ಓದುತ್ತಿರುವಾಗಲೇ ತನಗಿಂತ 13 ವರ್ಷ ಹಿರಿಯ ನಾರಾಯಣ್ ಎಂಬಾತನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಮದುವೆಯೂ ಆಗುತ್ತದೆ. ಆದರೆ ಎರಡೂ ಕಡೆ ಪೋಷಕರು ಇವರಿಂದ ದೂರವಾಗುತ್ತಾರೆ. ಮದ್ಯ, ಡ್ರಗ್ಸ್ ವ್ಯಸನಿಯಾಗಿದ್ದ ಗಂಡನಿಗೆ ಒಂದು ಪೈಸೆ ಆದಾಯವಿಲ್ಲ. ಕೇವಲ ಪಿಯುಸಿಯಷ್ಟೇ ಓದಿದ ಪ್ಯಾಟ್ರಿಸಿಯಾಗೆ ಎಲ್ಲೂ ಉದ್ಯೋಗ ಸಿಗುವುದಿಲ್ಲ. ಅಲ್ಲದೇ ಅದೇ ಸಮಯಕ್ಕೆ ಆಕೆ ಗರ್ಭವತಿಯಾಗುತ್ತಾಳೆ. ಸಂಸಾರ ನಿರ್ವಹಣೆ ದುಸ್ತರವಾಗುತ್ತದೆ. ಎರಡೂ ಕಡೆಯ ಪೋಷಕರೂ ಇವರ ನೆರವಿಗೆ ಬರುವುದಿಲ್ಲ.

ಬ್ಯುಸಿನೆಸ್ ಶುರು: ಪ್ಯಾಟ್ರಿಸಿಯಾಗೆ ಮೊದಲಿಂದಲೂ ಅಡುಗೆ ಮಾಡುವುದು ಇಷ್ಟದ ಹವ್ಯಾಸ. ತನ್ನ ಈ ಸ್ಕಿಲ್ ಅನ್ನೇ ಯಾಕೆ ಬ್ಯುಸಿನೆಸ್‌'ಗೆ ಬಳಸಿಕೊಳ್ಳಬಾರದು ಅಂತನಿಸಿತು ಆಕೆಗೆ. ಯೋಚನೆ ಕಾರ್ಯರೂಪಕ್ಕೆ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಇದ್ದ ಬದ್ದ ಹಣವನ್ನೆಲ್ಲ ಕೂಡಿಸಿ, ಸಾಲ ಮಾಡಿ ಮನೆಯಲ್ಲೇ ಉಪ್ಪಿನಕಾಯಿ, ಜಾಮ್ ತಯಾರಿಸಲಾರಂಭಿಸಿದರು. ತನ್ನಮ್ಮನ ಆಫೀಸ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆಪ್ತರಿಗೆ ಮಾರಲು ಶುರುಮಾಡಿದಳು. ಇನ್ನೊಂದೆಡೆ ಬುದ್ಧಿಮಾಂದ್ಯ ಮಕ್ಕಳಿಗೆ ಟೀ ಮಾಡಿಕೊಡುವ ಕೆಲಸ. ಹೀಗೆ ಒಂದು ಸಂಜೆ ಮಕ್ಕಳಿಗೆ ಟೀ ಕೊಟ್ಟು ವಾಪಾಸ್ ಬರುವಾಗ ಮರೀನಾ ಕಡಲ ದಂಡೆಯ ಮೇಲೆ ನೂರಾರು ಜನ ಪ್ರವಾಸಿಗರು ನೆರೆದಿರುವುದು ಕಾಣುತ್ತೆ. ಇಲ್ಲೇ ಪೆಟ್ಟಿಯಂಗಡಿ ತೆರೆದರೆ ಒಳ್ಳೆ ವ್ಯಾಪಾರ ಆಗಬಹುದು ಅನಿಸುತ್ತೆ.

ಮರೀನಾ ದಂಡೆಯಲ್ಲಿ ಪೆಟ್ಟಿ ಅಂಗಡಿ: ಹೀಗೆ ಮರೀನಾ ಬೀಚ್ ದಂಡೆಯಲ್ಲಿ ಟೀ ಮತ್ತು ಸಿಗರೆಟ್ ಮಾರುವ ಪೆಟ್ಟಿಯಂಗಡಿ ಇಟ್ಟಾಗ ಮೊದಲ ದಿನ ವ್ಯಾಪಾರವಾದದ್ದು ಕೇವಲ 50 ಪೈಸೆ! ಬಹಳ ನಿರಾಸೆ. ಮನೆಯಲ್ಲಿ ರಾತ್ರಿಯಿಡೀ ಅತ್ತಿದ್ದೂ ಆಯ್ತು. ಮರುದಿನ ಸಂಜೆ 3 ಕ್ಕೆ ಮತ್ತೆ ಅಂಗಡಿ ತೆರೆಯಿತು. ಆ ದಿನ ಮಾತ್ರ 700 ರುಪಾಯಿ ವ್ಯಾಪಾರ ಆಯ್ತು. ಮಧ್ಯರಾತ್ರಿ ಹನ್ನೊಂದಕ್ಕೆ ಅಂಗಡಿ ಮುಚ್ಚಿ ಹೊರಟಾಗ ಈ ಹೆಣ್ಮಗಳ ಮುಖದಲ್ಲಿ ಗೆಲುವಿನ ನಗೆಯಿತ್ತು. ವ್ಯಾಪಾರ ಚೆನ್ನಾಗಿ ನಡೆಯಲಾರಂಭಿಸಿದ್ದೇ ಇಬ್ಬರು ಅಂಗವಿಕಲರಿಗೆ ಕೆಲಸ ಕೊಟ್ಟು ಜ್ಯೂಸ್, ಬಿಸ್ಕೆಟ್, ಸ್ನಾಕ್ಸ್, ಕಾಫಿ, ಟೀಗೆ ವ್ಯಾಪಾರ ವಿಸ್ತರಿಸಿಕೊಂಡರು. ದಿನಕ್ಕೆ 25,000 ದಷ್ಟು ವ್ಯಾಪಾರವಾಗತೊಡಗಿತು.

ಮರೀನಾ ಬೀಚ್‌ನ ದಂಡೆಯಲ್ಲಿ ಈಕೆಯ ಕೆಲಸ ಕಂಡ ಚೆನ್ನೈನ ಸ್ಲಮ್ ಬೋರ್ಡ್‌ನ ಚೇರ್‌ಮೆನ್ ಪ್ಯಾಟ್ರಿಸಿಯಾಗೆ ಹೊಸ ಅವಕಾಶ ನೀಡಿದರು. ಮರೀನಾ ದಂಡೆಯಲ್ಲೇ ವ್ಯವಸ್ಥಿತ ಕಿಚನ್ ನಿರ್ಮಿಸಿ ಅಲ್ಲೊಂದು ವ್ಯವಸ್ಥಿತ ಕ್ಯಾಂಟೀನ್ ತೆರೆಯಲು ನೆರವು ನೀಡಿದರು. ಉತ್ಸಾಹ ಹೆಚ್ಚಾಯಿತು. ಬೆಳಗ್ಗೆ ೫ ಗಂಟೆಗೆ ಇಲ್ಲಿಗೆ ಬಂದು ಇಡ್ಲಿ, ಸಾಂಬಾರು ಮಾಡಿ, 9 ಗಂಟೆಯಿಂದ 3 ಗಂಟೆಯವರೆಗೆ ವ್ಯಾವಹಾರ ಮಾಡಲಾರಂಭಿಸಿದರು. 3 ಗಂಟೆಗೆ ತನ್ನ ಹಿಂದಿನ ಪೆಟ್ಟಿಯಂಗಡಿಗೆ ಹೋಗಿ ರಾತ್ರಿ 11 ರವರೆಗೆ ವ್ಯಾಪಾರ ಮುಂದುವರಿಸುತ್ತಿದ್ದರು.

ಇದರಲ್ಲೂ ಯಶಸ್ವಿಯಾದ ಮೇಲೆ ಅಡುಗೆ, ಕ್ಲೀನಿಂಗ್‌'ಗೆ ಕೆಲಸಗಾರರನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸತೊಡಗಿದರು. ತಿಂಗಳಾಂತ್ಯಕ್ಕೆ ಎಲ್ಲ ಖರ್ಚು ಕಳೆದು 20,000 ರೂ ಕೈಯಲ್ಲುಳಿಯುವಂತಾಯ್ತು.ಇದಾದ ಮೇಲೆ ಬ್ಯಾಂಕ್ ಒಂದರಲ್ಲಿ ಕ್ಯಾಂಟೀನ್ ತೆರೆದರು. ಅಲ್ಲಿ ಸುಮಾರು 300 ಜನ ಇವರ ಕೈಯೂಟ ಸವಿಯುತ್ತಿದ್ದರು. ಆಗ ಹಿಂದಿನ ಕ್ಯಾಂಟೀನ್ ತೊರೆಯಬೇಕಾಯ್ತು.

ಹೀಗೊಂದು ಘಟನೆ: ಇಷ್ಟೆಲ್ಲ ಆದರೂ ಮನೆಯಲ್ಲಿ ಡ್ರಗ್ ವ್ಯಸನಿ ಗಂಡನ ಕಿರುಕುಳ ನಿರಂತರವಾಗಿತ್ತು. ಇದರಿಂದ ಬೇಸತ್ತ ಪ್ಯಾಟ್ರಿಸಿಯಾ ಯಾವುದೋ ವೈರಾಗ್ಯದಲ್ಲಿ ಮನೆಬಿಟ್ಟು ಸಿಕ್ಕಿದ ಬಸ್ ಹತ್ತಿದರು. ಕೊನೆಯ ಸ್ಟಾಪ್‌ನಲ್ಲಿ ಇಳಿದಾಗ ಅಲ್ಲೊಂದು ಕೇಂದ್ರ ಸರ್ಕಾರ ನಡೆಸುವ ಮ್ಯಾನೇಜ್‌ಮೆಂಟ್ ಟ್ರೈನಿಂಗ್ ಸ್ಕೂಲ್ ಕಾಣಿಸಿತು. ಏನೋ ಹೊಸ ವಿಚಾರ ಹೊಳೆದಂತೆ ಆ ಕ್ಯಾಂಪಸ್‌ನೊಳಗೆ ಅಡಿಯಿಟ್ಟ ಪ್ಯಾಟ್ರಿಸಿಯಾ ತನ್ನ ಈ ವರೆಗಿನ ವ್ಯಾಪಾರದ ಕಥೆ ಅವರ ಬಳಿ ಹೇಳಿಕೊಂಡರು. ಅಲ್ಲಿ ಕ್ಯಾಟರಿಂಗ್ ಮಾಡಲು ಅವಕಾಶ ಕೊಡುವಂತೆ ಕೇಳಿಕೊಂಡರು. ಅದೃಷ್ಟವಶಾತ್ ಅದೇ ಸಮಯಕ್ಕೆ ಅವರೂ ಅಂಥ ಕ್ಯಾಟರರ್'ನ ನಿರೀಕ್ಷೆಯಲ್ಲಿದ್ದರು. ಹೀಗೆ ಸುಮಾರು 700 ವಿದ್ಯಾರ್ಥಿಗಳಿಗೆ ಊಟ ಸಪ್ಲೈ ಆರಂಭವಾಯ್ತು. ಆಗ ಇವರ ತಿಂಗಳ ವಹಿವಾಟು 80,000 ಕ್ಕೇರಿತು.

ರೆಸ್ಟೊರೆಂಟ್‌'ನ ಪಾಲುದಾರ್ತಿ: ಈ ಯಶಸ್ಸಿನಿಂದ ಉತ್ಸಾಹ ಹೆಚ್ಚಿಸಿಕೊಂಡ ಪ್ಯಾಟ್ರಿಸಿಯಾ 1998 ರಲ್ಲಿ ‘ ಸಂಗೀತ ರೆಸ್ಟೊರೆಂಟ್ ಗ್ರೂಪ್’ನ ಪಾಲುದಾರರಾಗಿ ವಹಿವಾಟು ಶುರುಮಾಡಿದರು. ಸಂಗೀತ ಗ್ರೂಪ್‌ನ ಡೈರೆಕ್ಟರ್ ಸಹ ಆದರು. ಇಷ್ಟೆಲ್ಲ ಆದರೂ ಆಕೆಗೆ ಆಕೆಯದೇ ಬ್ರ್ಯಾಂಡ್‌ನ ರೆಸ್ಟೊರೆಂಟ್ ತೆರೆಯುವ ಕನಸು.

ಹೀಗೊಂದು ದುರ್ಘಟನೆ: ಅದು 2002  ನೇ ಇಸವಿ. ಪತ್ನಿ ಇಷ್ಟೆಲ್ಲ ಬೆಳವಣಿಗೆ ಸಾಧಿಸಿದರೂ ಗಂಡ ತನ್ನ ಹಳೆಯ ಚಾಳಿಯಲ್ಲೇ ಬಿದ್ದಿದ್ದ. ಕುಡಿದು ಎಲ್ಲೆಲ್ಲೋ ಹೋಗಿ ತಿಂಗಳಾನುಗಟ್ಟನೆ ಮನೆಗೆ ಬರುತ್ತಿರಲಿಲ್ಲ. 2002 ರಲ್ಲಿ ಹಾಗೆ ಹೋದ ವ್ಯಕ್ತಿ ಮತ್ತೆ ಬಾರದ ಲೋಕಕ್ಕೇ ಹೋಗಿಬಿಟ್ಟ. ಆದರೆ ಪ್ಯಾಟ್ರಿಸಿಯಾ ಎದೆಗುಂದಿಸಿ ಆಕೆ ಡಿಪ್ರೆಶನ್‌ನಲ್ಲಿ ನರಳುವಂತಾಗಿದ್ದು ಮಗಳ ಸಾವಿನಿಂದ. ಮಗಳಿಗೆ ಮದುವೆಯಾಗಿ ಕೆಲವು ದಿನಗಳಷ್ಟೇ ಆಗಿತ್ತು. ಆಗ ನಡೆದ ಕಾರು ಅಪಘಾತದಲ್ಲಿ ಮಗಳು, ಅಳಿಯ ಇಬ್ಬರೂ ಸಾವನ್ನಪ್ಪಿದ್ದರು. ಬಹಳ ಕಾಲ ಇದೇ ನೋವಿನಲ್ಲಿದ್ದ ತಾಯಿಯನ್ನು ಮತ್ತೆ ಬದುಕಿನತ್ತ  ಎಳೆ ತಂದಿದ್ದು ಅವರ ಮಗ.

ಗತಿಸಿದ ಮಗಳ ನೆನಪಿನಲ್ಲಿ ರೆಸ್ಟೊರೆಂಟ್: ಅಮ್ಮ ಮಗ ಸೇರಿ ತಮ್ಮನ್ನಗಲಿದ ಮಗಳು ಸಂದೀಪನಾ ನೆನಪಿಗೆ ಅವಳ ಹೆಸರಿನಲ್ಲೇ ರೆಸ್ಟೊರೆಂಟ್ ಆರಂಭಿಸಿದರು. ರೆಸ್ಟೊರೆಂಟ್‌ಅನ್ನು ತನ್ನ ಮಗಳನ್ನು ಪೋಷಿಸುವಷ್ಟೇ ಜತನದಿಂದ ಬೆಳೆಸಿದರು. ಸಂದೀಪನಾ ರೆಸ್ಟೋರೆಂಟ್ 14 ಬ್ರ್ಯಾಂಚ್‌ಗಳಲ್ಲಿ ಚೆನ್ನೈ ನಗರದಾದ್ಯಂತ ಹಬ್ಬಿತು. ದಿನದ ವಹಿವಾಟು 2 ಲಕ್ಷವನ್ನೂ ದಾಟಿತು. ಈಕೆಯ ಸಾಧನೆ ಗಮನಿಸಿ ರಾಷ್ಟ್ರಮಟ್ಟದ ‘ ಎಫ್‌ಐಸಿಸಿಐ ವರ್ಷದ ಮಹಿಳಾ ಉದ್ಯಮಿ-2010’ ಪ್ರಶಸ್ತಿ ಬಂದಾಗಲಂತೂ ಇಡೀ ದೇಶವೇ ಈಕೆಯ ಜರ್ನಿ ಕಂಡು ನಿಬ್ಬೆರಗಾಯಿತು!

ಸಮಾಜ ಸೇವೆಯನ್ನು ಶ್ರದ್ಧೆಯಿಂದ ಮಾಡುವ ಪ್ಯಾಟ್ರಿಸಿಯಾ ಒಂದು ಆ್ಯಂಬುಲೆನ್ಸ್ ಖರೀದಿಸಿದ್ದಾರೆ. ಇದು ಸಂಪೂರ್ಣ ಬಡವರ ಸೇವೆಗೆ ಮೀಸಲು.

 

Follow Us:
Download App:
  • android
  • ios