ಹುಬ್ಬಳ್ಳಿ :  ‘ಮೊದ್ಲ ನಾವಳ್ಳಿ ಅಂದ್ರ ಎಲ್ಲೈತದು ಅಂತಿದ್ದೋರು, ಈಗ ಕುಮಾರಸ್ವಾಮಿ ಉಳಿದಿದ್ದ ಹಳ್ಳಿ ಅಲ್ಲೇನ್ರಿ ಅಂತ ಕೇಳ್ತಾರ್ರಿ, ನಮ್ಮೂರಿಗ ಬರಾ ಮೊದಲನೇ ಬಸ್ಸಿಗೆ ಕುಮಾರಸ್ವಾಮಿ ಬಸ್ಸ ಅಂತಾನೆ ಹೆಸ್ರು ಬಿದ್ದೈತ್ರಿ!’

ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಕಲ್ಪನೆಯ ಗ್ರಾಮವಾಸ್ತವ್ಯದಡಿ 2006ರ ಅ.10ರಂದು ನವಲಗುಂದ ತಾಲೂಕಿನ (ಈಗ ಅಣ್ಣಿಗೇರಿ ತಾಲೂಕು) ಕುಗ್ರಾಮ ನಾವಳ್ಳಿಯಲ್ಲಿ ತಂಗಿದ್ದರು. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಿದ್ದ ಉಳಿದ ಗ್ರಾಮಗಳ ಪರಿಸ್ಥಿತಿ ಏನೇ ಇರಬಹುದು. ಆದರೆ, ನಾವಳ್ಳಿಯ ಜನ ಮಾತ್ರ 13 ವರ್ಷ ಕಳೆದರೂ ಈಗಲೂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ನೆನಪಿಸಿಕೊಳ್ಳುತ್ತಾರೆ. ಈ ಊರನ್ನೀಗ ಕುಮಾರಸ್ವಾಮಿ ಹೆಸರಿನಿಂದಲೇ ಗುರುತಿಸುತ್ತಿರುವುದು ಮತ್ತು ಊರಿಗೆ ಬರುವ ಮುಂಜಾನೆಯ ಮೊದಲ ಸಾರಿಗೆ ಬಸ್ಸಿಗೆ (ಅಂದು ಎಚ್‌ಡಿಕೆ ಭೇಟಿಗೆ ಗ್ರಾಮಸ್ಥರನ್ನು ಕರೆದುಕೊಂಡು ಊರಿನ ಕಡೆ ಬಂದ ಮೊದಲ ಬಸ್‌ ಇದು) ಜನ ಅವರ ಹೆಸರಿಟ್ಟು ಕರೆಯುತ್ತಿರುವುದೇ ಇದಕ್ಕೆ ಸಾಕ್ಷಿ.

ಅಂದು ಬಂದ ಬಸ್‌ ಈಗಲೂ ಗ್ರಾಮದ ಮೂಲಕ ಬೆಳಕ್ಕೆ ಹುಬ್ಬಳ್ಳಿಗೆ ಸಂಚರಿಸುತ್ತಿದ್ದು, ಸಾಕಷ್ಟುವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಗ್ರಾಮ ವಾಸ್ತವ್ಯದ ಬಳಿಕ ಗ್ರಾಮದಲ್ಲಿ ಹೀಗೆ ಅನೇಕ ಬದಲಾವಣೆ, ಅಭಿವೃದ್ಧಿ ಕೆಲಸಗಳು ಆಗಿವೆ ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ. ಆದರೆ, ಇನ್ನೂ ಆಗಬೇಕಿರುವುದೂ ಸಾಕಷ್ಟಿದೆ ಎಂದು ಹೇಳಲು ಅವರು ಮರೆಯುವುದಿಲ್ಲ. ಈಗ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಬಾಕಿ ಉಳಿದ ಬೇಡಿಕೆಯನ್ನು ಅವರು ಇನ್ನಾದರೂ ಈಡೇರಿಸಬಹುದು ಎನ್ನುವ ನಿರೀಕ್ಷೆ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

‘ಸುವರ್ಣ ಗ್ರಾಮ’ ಯೋಜನೆಯಡಿ ಕಾಂಕ್ರೀಟ್‌ ರಸ್ತೆ ಮಾಡ್ಯಾರ್ರಿ, ಇನ್ನೊಂದೆರಡ ಕಡಿ ರಸ್ತಿ ಆಗ್‌ಬೇಕ್ರಿ. ಬಸ್ಸಂತೂ ಬರ್ತಾವ್ರಿ, ಆದ್ರ ಎಲ್ಲಾ ಬಸ್ಸೂ ಗ್ರಾಮಕ್ಕ ಬಂದ ಹೋಗ್ವಂಗ ಆದ್ರ ಅನುಕೂಲ ಆಕೆತ್ರಿ, ಹಂದಿಗೀನ ಹಳ್ಳಕ್ಕ ಸೇತುವೆನೂ ಆಗಿಲ್ರಿ, ಆಸ್ಪತ್ರೆಗ 5 ಕಿಮೀ ದೂರ ಹೋಗದ ತಪ್ಪಿಲ್ರಿ ಎನ್ನುತ್ತಾರೆ ಗ್ರಾಮಸ್ಥರು. ಈ ಮೂಲಕ ಇನ್ನಷ್ಟುಕೆಲಸಗಳು ಆಗಬೇಕಿವೆ ಎಂದು ಹೇಳುತ್ತಾರೆ. ಗ್ರಾಮಕ್ಕೆ ಗುರುವಾರ ಪತ್ರಕರ್ತರ ತಂಡ ಭೇಟಿ ನೀಡಿದಾಗ ಅವರು ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯದ ನೆನಪು ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ.

ಈಗಲೂ ಸಂಪರ್ಕದಲ್ಲಿ: ಜೆಡಿಎಸ್‌ ಕಾರ್ಯಕರ್ತೆ ಅಲ್ಹಾಬಿ ನದಾಫ್‌ ಮನೆಗೆ 13 ವರ್ಷಗಳ ಹಿಂದೆ ತಡರಾತ್ರಿ 12.30ಕ್ಕೆ ಕುಮಾರಸ್ವಾಮಿ ಆಗಮಿಸಿದ್ದರೂ ಸಾವಿರಾರು ಜನ ಅವರಿಗಾಗಿ ಕಾದು ಮನವಿ ಸಲ್ಲಿಸಿದ್ದರು. ಮರುದಿನ ಜನರ ಜೊತೆ ಬೆರೆತಿದ್ದ ಕುಮಾರಸ್ವಾಮಿ ಗ್ರಾಮಸ್ಥರ ನೋವು-ನಲಿವು ಆಲಿಸಿದ್ದರು. ಈ ವೇಳೆ ಗ್ರಾಮದ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸ್ಥಳದಲ್ಲಿ ನೆರೆದಿದ್ದ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಅಲ್ಹಾಬಿ ನದಾಫ್‌ ಕುಟುಂಬದ ಜೊತೆ ಈಗಲೂ ಸಂಪರ್ಕ ಉಳಿಸಿಕೊಂಡಿರುವ ಕುಮಾರಸ್ವಾಮಿ, ವೈಯಕ್ತಿಕವಾಗಿ ಈಗಲೂ ಕೆಲ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ ಎಂದು ಅಲ್ಹಾಬಿ ಪುತ್ರ ದಾವಲಸಾಬ್‌ ನದಾಫ್‌ ಹೇಳುತ್ತಾರೆ.

ಶಿಕ್ಷಣದ ಕನಸು ನನಸು: ಹಿಂದೆ ಧಾರವಾಡದವರು ನಾವಳ್ಳಿ ಎಂದರೆ ಎಲ್ಲಿದೆ ಎನ್ನುತ್ತಿದ್ದರಂತೆ. ಆದರೆ, ಈಗ ನಮ್ಮ ಗ್ರಾಮ ಚಿರಪರಿಚಿತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಗ್ರಾಮದ ಮಂಜುನಾಥ ಧರ್ಮಪ್ಪ ಶಲವಡಿ. ಮುಖ್ಯಮಂತ್ರಿ ಬರದಿದ್ದರೆ ಹೆಣ್ಣುಮಕ್ಕಳು ಶಾಲೆಗೆ ಹೋಗಲೂ ಆಗುತ್ತಿರಲಿಲ್ಲ. ಆಗ ತಮ್ಮಿಂದ ಎಷ್ಟುಅಭಿವೃದ್ಧಿ ಮಾಡಲು ಸಾಧ್ಯವೋ ಅಷ್ಟುಕೆಲಸವನ್ನು ಕುಮಾರಸ್ವಾಮಿ ಮಾಡಿದ್ದರು ಎನ್ನುತ್ತಾರೆ ಅವರು.

ಅಂದು ಗ್ರಾಮ ವಾಸ್ತವ್ಯದ ವೇಳೆ ಪ್ರೌಢಶಾಲೆಯಿಲ್ಲದೆ 7ನೇ ತರಗತಿಗೆ ಶಾಲೆ ಬಿಡುತ್ತಿದ್ದ ಹೆಣ್ಣುಮಕ್ಕಳ ಬಗ್ಗೆ ತಿಳಿದ ಕುಮಾರಸ್ವಾಮಿ, ವಿಶೇಷ ಪ್ರಕರಣ ಎಂದು ಪರಿಗಣಿಸಿ ಹೈಸ್ಕೂಲ್‌ ಆರಂಭಕ್ಕೆ ಸೂಚಿಸಿದ್ದರು. ಅಂದಿನಿಂದ ಇಂದಿನವರೆಗೂ ಗ್ರಾಮದ ಜೊತೆ ಈಗಲೂ ಎಚ್‌ಡಿಕೆ ಸಂಪರ್ಕ ಹೊಂದಿದ್ದಾರೆ. ನಾವಳ್ಳಿಯ ಚೈತ್ರಾ ವೈಷ್ಣವರ ಎಂಬ ಯುವತಿಗೆ ಪದವಿ ಬಳಿಕ ಬಿಪಿಎಡ್‌ ಓದಲು ಆರ್ಥಿಕ ಸ್ಥಿತಿ ಅಡ್ಡಿಯಾಗಿತ್ತು. ಈ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ತಿಳಿಸಿದಾಗ ಅವರು ಜಿಲ್ಲಾಧಿಕಾರಿ ಮೂಲಕ ಕಾಲೇಜಿನ ವಾರ್ಷಿಕ ಶುಲ್ಕ ಪಾವತಿಸಿದ್ದಾರೆ. ಜತೆಗೆ ವೀರಣ್ಣ ಬಸವನಗೌಡ ಕಲ್ಲನಗೌಡರ ಎಂಬ ವಿದ್ಯಾರ್ಥಿಯ ಎಂ.ಟೆಕ್‌ ಓದಿಗೆ ನೆರವಾಗಿದ್ದಾರೆ ಎಂದು ಗ್ರಾಮಸ್ಥರು ಸ್ಮರಿಸುತ್ತಾರೆ.

ಆಗಲಾರದ್ದು ಏನೇನು?

- ಹಂದಿಗೀನ ಹಳ್ಳಕ್ಕೆ ಸೇತುವೆ ಆಗದೆ ಮಳೆಗಾಲದಲ್ಲಿ ನಿಂತಿಲ್ಲ ಪರದಾಟ

- ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ

- ಸುವರ್ಣ ಗ್ರಾಮ ಯೋಜನೆಯ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ

- ಪ್ರತಿಮನೆಗೂ ಶೌಚಾಲಯ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ

- ಕೆಲ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರಿದೆ.

ವರದಿ : ಮಯೂರ ಹೆಗಡೆ