ನ್ಯೂಯಾರ್ಕ್[ಸೆ.28]: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುವುದು ಎಲ್ಲಾ ದೇಶಗಳ ಗಣ್ಯರಿಗೂ ಹೆಮ್ಮೆಯ ವಿಷಯ. ಆದರೆ ಎಲ್‌ ಸಾಲ್ವಡಾರ್‌ ದೇಶದ ಅಧ್ಯಕ್ಷ ಮಾತ್ರ ಭಾಷಣಕ್ಕೆ ಮೊದಲು ವೇದಿಕೆಯಲ್ಲೇ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಗುರುವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಎಲ್‌ ಸಾಲ್ವಡಾರ್‌ ಅಧ್ಯಕ್ಷ ನಯೀಬ್‌ ಬುಕೆಲೆ ಅವರಿಗೆ ಚೊಚ್ಚಲ ಬಾರಿಗೆ ಭಾಷಣಕ್ಕೆ ಅವಕಾಶ ಕಲ್ಪಿಸಿತ್ತು. ಈ ವೇಳೆ ವೇದಿಕೆಗೆ ಬಂದ ನಯೀಬ್‌, ಭಾಷಣಕ್ಕೆ ಮೊದಲು ಅಲ್ಲೇ ಸೆಲ್ಫಿ ತೆಗೆದುಕೊಂಡರು. ಇದು ಸಭೆಯಲ್ಲಿ ಹಾಜರಿದ್ದವರಲ್ಲಿ ಅಚ್ಚರಿಗೆ ಕಾರಣವಾಯಿತು.

ಬಳಿಕ ಈ ಫೋಟೋ ಅನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿರುವ ನಯೀಬ್‌, ‘ನಾವು ಇಲ್ಲಿ ಮಾಡುವ ಉದ್ದದ ಭಾಷಣಕ್ಕಿಂತಲೂ ನಾವು ತೆಗೆದುಕೊಂಡ ಸೆಲ್ಫಿಗಳನ್ನೇ ಜನರು ಹೆಚ್ಚು ನೋಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕುವ ಕೆಲ ಚಿತ್ರಗಳು ಭಾಷಣಕ್ಕಿಂತಲೂ ಪ್ರಭಾವಿಯಾಗಿರುತ್ತವೆ. ವಿಶ್ವನಾಯಕರು ಭಾಗವಹಿಸುವ ಇಂತಹ ಸಭೆಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕವೂ ನಡೆಸಬಹುದು’ ಎಂದು ನಯೀಬ್‌ ಹೇಳಿದ್ದಾರೆ.