ಇಲ್ಲಿನ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಮಾವಿನ ಮರದ ಮೇಲೆ ಮನೆಯನ್ನು ಕಟ್ಟಿಕೊಂಡು 2 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. 

ಮೈಸೂರು (ಆ.03): ಇಲ್ಲಿನ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ಮಾವಿನ ಮರದ ಮೇಲೆ ಮನೆಯನ್ನು ಕಟ್ಟಿಕೊಂಡು 2 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ.

ಜೇನು ಕುರುಬ ಸಮುದಾಯಕ್ಕೆ ಸೇರಿದ ಗಜ್ಜ ಎನ್ನುವ ವ್ಯಕ್ತಿ ಸ್ಥಳೀಯ ಮನೆ ಕಟ್ಟಲು ಹಣವಿಲ್ಲದೇ, ಆಡಳಿತದ ನೆರವಿಲ್ಲದೇ ಮಾವಿನ ಮರದ ಮೇಲೆ ಸೂರನ್ನು ನಿರ್ಮಿಸಿಕೊಂಡು 2 ವರ್ಷಗಳಿಂದ ವಾಸಿಸುತ್ತಿದ್ದಾರೆ. ಇದಕ್ಕೂ ಮುನ್ನ ಪಿರಿಯಾಪಟ್ಟಣ ತಾಲೂಕಿನ ಮಲಗನಕೆರೆ ಹಾಡಿಯಲ್ಲಿ ಕಳೆದ 50 ವರ್ಷಗಳಿಂದ ವಾಸಿಸುತ್ತಿದ್ದರು. ಅರಣ್ಯಾಧಿಕಾರಿಗಳು ಅವರ ಗುಡಿಸಲನ್ನು ಕೆಡವಿದ ಕಾರಣ ಮನೆಯನ್ನು ಕಳೆದುಕೊಳ್ಳಬೇಕಾಯಿತು. ಮನೆಯನ್ನು ಕಟ್ಟಲು ಹಣವಿಲ್ಲದೇ ತನ್ನ ತುಂಡುಭೂಮಿಯಲ್ಲಿರುವ ಮಾವಿನ ಮರದ ಮೇಲೆ ಮನೆಯನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

ಬಿದಿರಿನ ಅಡ್ಡೆಗಳಿಂದ 40 ಅಡಿ ಎತ್ತರದ ಮರದ ಮೇಲೆ ಮನೆಯನ್ನು ಮಾಡಿಕೊಂಡಿದ್ದಾರೆ. ಕಾಡು ಪ್ರಾಣಿಗಳ ಹಾವಳಿ, ಭಯದ ಕಾರಣ ಸೂರ್ಯಾಸ್ತಕ್ಕೂ ಮುನ್ನ ಅಡುಗೆ ಮಾಡಿ ಊಟ ಮಾಡಿ ಮಲಗಿ ಬಿಡುತ್ತಾರೆ. ಗಜ್ಜರ ಪತ್ನಿ ಶೋಭ ಬೇರೆಯವರ ಜಮೀನಿನಲ್ಲಿ ದುಡಿಯುತ್ತಾರೆ. ಅವರಿಗೆ ಮರವನ್ನು ಹತ್ತಲಾಗದೇ ಇರುವುದರಿಂದ ಅವರು ಜಮೀನ್ದಾರರ ಭೂಮಿಯಲ್ಲೇ ಉಳಿಯುತ್ತಾರೆ.

ಹಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅರಣ್ಯಾಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಲುವುದಿಲ್ಲ. ಸರ್ಕಾರ ಅರ್ಧ ಎಕರೆ ಜಮೀನನ್ನು ನೀಡುವುದಾಗಿ ಭರವಸೆ ನೀಡಿದೆ. ಆದರೆ ಇದುವರೆಗೂ ಈಡೇರಿಸಿಲ್ಲ ಎಂದು ಊರಿನ ಮುಖ್ಯಸ್ಥ ರಾಜಯ್ಯ ಹೇಳಿದ್ದಾರೆ.

ಮನೆಯಿಲ್ಲದೇ ಈ ರೀತಿ ಮರದ ಮೇಲೆ ಮನೆ ಮಾಡಿಕೊಂಡು ವಾಸಿಸುತ್ತಿರುವ ವಿಚಾರದ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ. ಸಹಾಯಕ ಆಯುಕ್ತ ಹಾಗೂ ಬುಡಕಟ್ಟು ಅಭಿವೃದ್ದಿ ಅಧಿಕಾರಿಯನ್ನು ಹಾಡಿಗೆ ಕಳುಹಿಸುತ್ತೇನೆ. ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.