ಬಂದ್ ರಾಜಕೀಯ: ಸಿಎಂ ಕುಮ್ಮಕ್ಕು ಎಂದ ಬಿಜೆಪಿ, ನಿಮ್ಮ ಮಾತು ಕೇಳ್ತಿದ್ರಾ ಎಂದ ಮುಖ್ಯಮಂತ್ರಿ

First Published 22, Jan 2018, 3:41 PM IST
This Karnataka Bundh Politics
Highlights

ಮಹದಾಯಿ ಹೋರಾಟಕ್ಕೆ ಜ.25 ರಂದು ಅಖಂಡ ಕರ್ನಾಟಕ ಬಂದ್ ನಡೆಸಲಾಗುತ್ತದೆ. ಪರ - ವಿರೋಧ ಮಧ್ಯೆಯೂ ಬಂದ್ಮಾಡಲು ವಾಟಾಳ್ ನಾಗರಾಜ್ ಬಣನಿರ್ಧರಿಸಿದ್ದು, ಜನವರಿ 25 ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಬಂದ್ ನಡೆಸಲಾಗುತ್ತದೆ.

ಬೆಂಗಳೂರು(.22): ಮಹದಾಯಿ ಹೋರಾಟ ಬೆಂಬಲಿಸಿ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಜನವರಿ 25ರ ಕರ್ನಾಟಕ ಹಾಗೂ ಫೆ.4ರಂದು ಬೆಂಗಳೂರು ಬಂದ್' ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಕಾರ್ಯಕ್ರಮ ವಿಫಲಗೊಳಿಸುವ ತಂತ್ರ ಎಂದು ಹೇಳಲಾಗುತ್ತಿದೆ.

ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ತೊಂದರೆಗೆ ಒಳಗಾದ ಸ್ಥಳದಲ್ಲಿ ಪ್ರತಿಭಟನೆ ಮಾಡೋದು ಎಷ್ಟು ಸರಿ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಕುತಂತ್ರ

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಕುತಂತ್ರದಿಂದಾಗಿ ಬಂದ್'ಗೆ ಕರೆ ನಿಡಲಾಗಿದೆ. ಬಂದ್'ನ ಮಾಸ್ಟರ್ ಮೈಂಡ್ ಸಿಎಂ. ಈ ಬಗ್ಗೆ ರಾಹುಲ್ ಗಾಂಧಿ ಯಾಕೆ ಮೌನವಾಗಿದ್ದಾರೆ. ಎಐಸಿಸಿ ಅಧ್ಯಕ್ಷ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಲಿ. ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಬಂದ್'ಗೆ ಬೆಂಬಲ ನೀಡಲಾಗಿದೆ' ಎಂದು ವಿರೋಧ ವ್ಯಕ್ತಪಡಿಸಿದರು.

ನಿಮ್ಮ ಸರ್ಕಾರವಿದ್ದಾಗ ಸಂಘಟನೆಗಳು ಮಾತು ಕೇಳ್ತಿದ್ರ

ಸರ್ಕಾರಿ ಪ್ರಾಯೋಜಿತ ಬಂದ್ ಎನ್ನುವ ಬಿಜೆಪಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕನ್ನಡ ಸಂಘಟನೆಗಳು ಸರ್ಕಾರದ ಮಾತು ಕೇಳ್ತಾರಾ, ಬಿಜೆಪಿ ಸರ್ಕಾರ ಇದ್ದಾಗ ಇವರ ಮಾತು ಕೇಳ್ತಿದ್ರಾ. ಅವರಿಗೆ ಸಾಮಾನ್ಯ ಜ್ಞಾನ, ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ? ಎಲ್ಲವನ್ನೂ ರಾಜಕೀಯ ಕನ್ನಡಕ ಹಾಕಿ ನೋಡಬಾರದು' ಎಂದು ವಿರೋಧ ಪಕ್ಷದ ನಾಯಕರ ಆರೋಪವನ್ನು ತಳ್ಳಿಹಾಕಿದರು.

ಬಂದ್'ಗೆ ಬೆಂಬಲಿಸದಿರಲು 70 ಸಂಘಟನೆಗಳ ನಿರ್ಧಾರ

ಮಹದಾಯಿ ನೀರಿಗಾಗಿ ಆಗ್ರಹಿಸಿ ಜ.25ರಂದು ಬಂದ್ ಬೆಂಬಲಿಸದೇ ಇರಲು 70ಕ್ಕೂ ಹೆಚ್ಚು ಸಂಘಟನೆಗಳ ನಿರ್ಧಿರಿಸಿವೆ. ಕನ್ನಡ ಪರ ಸಂಘಟನೆ ಮುಖಂಡನಿಗೆ ಅಶ್ಲೀಲ ಪದಗಳಿಂದ ವಾಟಾಳ್ ಬೆಂಬಲಿಗ ನಿಂದಿಸಿದ್ದಾರೆ. ಜಯ ಕರ್ನಾಟಕ ಮತ್ತು ಇತರ ಸಂಘಟನೆಗಳಿಗೆ ವಾಟಾಳ್ ನಾಗರಾಜ್ ಬಣದಿಂದ ಬೆದರಿಕೆ ಹಾಕಿದ್ದಾರೆ'ಎನ್ನಲಾಗಿದೆ.

ಬಂದ್ಮಾಡಿಯೇ ಸಿದ್ಧ

ಮಹದಾಯಿ ಹೋರಾಟಕ್ಕೆ ಜ.25 ರಂದು ಅಖಂಡ ಕರ್ನಾಟಕ ಬಂದ್ ನಡೆಸಲಾಗುತ್ತದೆ. ಪರ - ವಿರೋಧದ ಮಧ್ಯೆಯೂ ಬಂದ್​ ಮಾಡಲು ವಾಟಾಳ್ ನಾಗರಾಜ್ ಬಣ​ ನಿರ್ಧರಿಸಿದ್ದು, ಜನವರಿ 25ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಬಂದ್ ನಡೆಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯ ಪ್ರವೇಶ ಮಾಡಿ ಮಹದಾಯಿ ನೀರು ಕೊಡಿಸ ಬೇಕು' ಎಂದು ಆಗ್ರಹಿಸಿದರು.

loader