ಮಳೆ ಬಂದಾಗಲೇ ನಗರಗಳ ಅವ್ಯವಸ್ಥೆ ಅನಾವರಣ

ಮೊನ್ನೆಯ ಮಳೆಗೆ ಬೆಂಗಳೂರಿನ ರಾಜಾಕಾಲುವೆಯಲ್ಲಿ ಒಬ್ಬ ಕಾರ್ಮಿಕ ಕೊಚ್ಚಿಕೊಂಡು ಹೋಗಿದ್ದಾನೆ. ಇದು ಈ ವರ್ಷದ ಮಾತಷ್ಟೇ ಅಲ್ಲ; ಪ್ರತಿ ವರ್ಷ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಒಂದಿಬ್ಬರಾದರೂ ರಾಜಾಕಾಲುವೆಯಲ್ಲಿ ಕೊಚ್ಚಿ​ ಹೋಗುವ ಘಟನೆಗಳು ನಡೆಯುತ್ತವೆ. ಆಟವಾಡುವ ಮಕ್ಕಳು ಆಯತಪ್ಪಿ ಕಾಲುವೆಗೆ ಬಿದ್ದು ತೇಲಿಸಿಕೊಂಡು ಹೋಗಿರುವುದೂ ಇದೆ. ಆಗೆಲ್ಲ ಒಂದೆರಡು ದಿನ ಆಯಾ ಘಟನೆ​ಗಳು ದೊಡ್ಡ ಸುದ್ದಿಯಾಗುತ್ತವೆ.