ಲಾಹೋರ್‌ : ‘ಭಯೋತ್ಪಾದಕರ ಆಡುಂಬೊಲ’ ಎಂದು ಪಾಕಿಸ್ತಾನದ ಮೇಲೆ ವಿಶ್ವದ ಬಹುತೇಕ ದೇಶಗಳು ಒಂದೆಡೆ ಹರಿಹಾಯುತ್ತಿರುವ ನಡುವೆಯೇ, ‘ಇದು ಹೊಸ ಪಾಕಿಸ್ತಾನ. ಹೊಸ ಕಾಲ. ನಮ್ಮ ಸರ್ಕಾರ ಪಾಕಿಸ್ತಾನದ ನೆಲವನ್ನು ವಿದೇಶದಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ಸಿಂಧ್‌ ಪ್ರಾಂತ್ಯದ ಛರ್ರೋದಲ್ಲಿ ರಾರ‍ಯಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, ‘ಇದು ಹೊಸ ಪಾಕಿಸ್ತಾನ, ಹೊಸ ಕಾಲ ಶುರುವಾಗಿದೆ. ನಾವು ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ಬಯಸುತ್ತೇವೆ. ನಮ್ಮ ಹೊಸ ಪಾಕಿಸ್ತಾನ ಸಮೃದ್ಧ, ಶ್ರೀಮಂತ, ಸ್ಥಿರ ಮತ್ತು ಶಾಂತಿಯುತವಾಗಿರಲಿದೆ. ದೇಶದ ಆರ್ಥಿಕ ಅಭಿವೃದ್ಧಿಯತ್ತ ತಮ್ಮ ಸರ್ಕಾರ ಗಮನ ಕೇಂದ್ರೀಕರಿಸಿದೆ’ ಎಂದರು.

‘ಒಂದು ಜವಾಬ್ದಾರಿಯುತ ದೇಶವಾಗಿ, ಅಂತಾರಾಷ್ಟ್ರೀಯ ಸಮುದಾಯದ ಭಾಗವಾಗಿ ಯಾವುದೇ ಉಗ್ರಗಾಮಿ ಸಂಘಟನೆ ಪಾಕಿಸ್ತಾನದ ನೆಲದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ. ಸೆರೆ ಹಿಡಿದ ಪೈಲಟ್‌ ಅಭಿನಂದನ್‌ನನ್ನು ಬಿಟ್ಟುಕಳುಹಿಸಿದ್ದು ಏಕೆಂದರೆ ನಮಗೆ ಯುದ್ಧ ಬೇಕಾಗಿಲ್ಲ. ನಾವು ಈ ಸಂದೇಶವನ್ನು ಭಾರತಕ್ಕೆ ಪುನಃ ಹೇಳಿದ್ದೇವೆ’ ಎಂದೂ ಹೇಳಿದರು.

‘ಪುಲ್ವಾಮಾ ದಾಳಿಯ ತನಿಖೆಯಲ್ಲಿ ಭಾರತಕ್ಕೆ ನೆರವು ನೀಡಲು ನಾವು ನಿರ್ಧರಿಸಿದ್ದೇವೆ. ಆದರೆ, ಯಾರೂ ಕೂಡ ಈ ಬಗ್ಗೆ ಭಯ ಪಡದಬೇಕಾಗಿಲ್ಲ. ಏಕೆಂದರೆ ಇದು ಹೊಸ ಪಾಕಿಸ್ತಾನ, ಬಡತನ ನಿರ್ಮೂಲನೆ ಆದ ಪ್ರದೇಶವೊಂದನ್ನು ನಾವು ಭವಿಷ್ಯದಲ್ಲಿ ನೋಡಲು ಬಯಸುತ್ತೇವೆ. ನಮ್ಮ ಸರ್ಕಾರದ ಯೋಜನೆಗಳು ನಮ್ಮ ಜನರಿಗಾಗಿ ಇರುವಂತವು’ ಎಂದು ಇಮ್ರಾನ್‌ ನುಡಿದರು.