ಇನ್ನೊಂದು ಮದುವೆಯಾಗುವ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಹೃದಯವಂತಿಕೆಯಲ್ಲಿ ನಾನು ಈಗಲೂ ಯಂಗ್ ಎಂದ ಮಾಜಿ ಸಿಎಂ

ಮೈಸೂರು: ಇನ್ನೊಂದು ಮದುವೆಯಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮುದುಕನಿಗೆ ಯಾಕೆ ಮತ್ತೊಂದು ಮದುವೆ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇತ್ತೀಚೆಗೆ ಒಂದು ಆತ್ಮಾವಲೋಕನ ಸಭೆಗೆ ಹೋಗಿದ್ದೆ, ಅಲ್ಲಿ ಯಾರೋ ಹೇಳ್ತಾ ಇದ್ರು, ನಿಮಗೆ 71 ಅಲ್ಲ ಸರ್ 21, ನಿಮಗೆ ಮತ್ತೊಂದು ಮದುವೆ ಮಾಡುವ ಉತ್ಸಾಹದಲ್ಲಿದ್ದೇವೆ ಅಂತ ಹೇಳಿದ್ರು. ಅದಕ್ಕೆ ನಾನು ಹೇಳ್ದೆ, ಈ ಮಾತನ್ನ ಯಾರಾದ್ರೂ ಹುಡುಗೀರು ಕೇಳಿಸಿಕೊಂಡ್ರೆ ತಪ್ಪು ತಿಳಿದುಕೊಳ್ಳುತ್ತಾರೆ, ನನಗೆ 71 ವರ್ಷ ಆಗಿದೆ. ಮುದುಕನಿಗೆ ಯಾಕಪ್ಪ ಮತ್ತೊಂದು ಮದುವೆ ಅಂದೆ, ಎಂದು ಸಿದ್ದರಾಮಯ್ಯ ತಮ್ಮ ‘ಮದುವೆ’ ಪ್ರಸ್ತಾಪದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮೈಸೂರಿನಲ್ಲಿ ವಿಜೇತ, ಪರಾಜಿತ ಅಭ್ಯರ್ಥಿಗಳ ಸಭೆಗೂ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಈ ರೀತಿ ಲೋಕಾಭಿರಾಮ ಮಾತುಕತೆ ನಡೆಸಿದ್ದಾರೆ. ಹೃದಯವಂತಿಕೆಯಲ್ಲಿ ಸದಾ ಯುವಕರು ಎಂಬ ಮಾತಿಗೆ ಸಿದ್ದರಾಮಯ್ಯ, ಹೌದೌದು, ಹೃದಯವಂತಿಕೆಯಲ್ಲಿ ನಾನು ಯಂಗ್ ಎಂದು ಹೇಳಿದ್ದಾರೆ.

ಬಾದಾಮಿಯಲ್ಲಿ ಕಳೆದ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿಅವರು, ಸಿದ್ದರಾಮಯ್ಯ ಅವರ ವಯಸ್ಸು 71 ಆದರೂ ಅವರ ಕೆಲಸ ಕಾರ್ಯಗಳೆಲ್ಲ 21 ವರ್ಷದ ಯುವಕನಂತೆ ಇದೆ. ಈ ಉತ್ಸಾಹ ನೋಡಿದರೆ ಅವರಿಗೆ ಮತ್ತೊಂದು ಮದುವೆ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿದ್ದರು.

ಆರೋಗ್ಯ ಚೆನ್ನಾಗಿರುವವರೆಗೂ ರಾಜಕೀಯ:

ನಾನೂ ಈಗ ಎಂಎಲ್‌ಎ ಮಾತ್ರ, ಶಾಸಕನ ಕೆಲಸ ಮಾತ್ರ ಮಾಡುತ್ತೇನೆ. ಅದರ ಜೊತೆಗೆ ಸಮನ್ವಯ ಸಮಿತಿ ಅಧ್ಯಕ್ಷನ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಇದನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತೇನೆ. ನನಗೆ ಈಗಾಗಲೇ ವಯಸ್ಸಾಗಿದೆ. ಹಾಗಾಗಿ ಆರೋಗ್ಯ ಇರುವವರೆಗೂ ಮಾತ್ರ ರಾಜಕಾರಣದಲ್ಲಿ ಇರ್ತಿನಿ. ಆನಂತರ ರಾಜಕಾರಣದ ಬಗ್ಗೆ ಗೊತ್ತಿಲ್ಲ, ಎಂದು ಸಿದ್ದರಾಮಯ್ಯ ತಮ್ಮ ಮುಂದಿನ ರಾಜಕೀಯ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.