ನವದೆಹಲಿ [ಜೂ.17] : ಪ್ಲಾಸ್ಟಿಕ್ ಬಿಟ್ಟು, ಮಾನವನ ಬದುಕೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೇ ಪ್ಲಾಸ್ಟಿಕ್ ಭೂಮಿಯನ್ನು ಅಪೋಶನ ತೆಗೆದುಕೊಳ್ಳುತ್ತಿರುವುದು ಮಾತ್ರ ದುರಂತ. ಅದೇನೇ ಕಾನೂನು ಕಟ್ಟಳೆ ಜಾರಿಗೊಳಿಸಿದರೂ ಪ್ಲಾಸ್ಟಿಕ್ ರಾಶಿ ಮಾತ್ರ ಕರಗುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಇತ್ತೀಚೆಗೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ರಾಶಿ ದೊರೆತ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇದೀಗ ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ರಾಶಿ ಮುಂದೆ ಆನೆ ಇರುವ ಚಿತ್ರವೊಂದನ್ನು ಅರಣ್ಯಾಧಿಕಾರಿಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಇದೊಂದು ಚಿತ್ರ ಸಾಕಷ್ಟು ಕಥೆ ಹೇಳುತ್ತಿದ್ದು, ಎಂಥವರ ಮನಸ್ಸನ್ನೂ ಕದಡುವಂತಿದೆ.

ಇಡೀ ಪರಿಸರವನ್ನು ಹಾಳು ಮಾಡುತ್ತಿರುವ ಇದೇ ಪ್ಲಾಸ್ಟಿಕ್‌ ಅನ್ನು ಸಸ್ಯಾಹಾರಿ ಪ್ರಾಣಿಗಳೂ ಸೇವಿಸಿ, ಬದುಕಿಗೇ ಸಂಕಷ್ಟ ತಂದುಕೊಳ್ಳುತ್ತಿದೆ. ಈ ಪ್ಲಾಸ್ಟಿಕ್ ಪ್ರಾಣಿ ಸಂಕುಲಕ್ಕೆ ಯಾವ ರೀತಿ ಸಮಸ್ಯೆ ತಂದೊಡ್ಡುತ್ತಿದೆ ಎನ್ನುವ  ಬಗ್ಗೆ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಅವರು ಫೊಟೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸಂಪೂರ್ಣವಾಗಿ ಕಸ ತುಂಬಿದ ಜಾಗದಲ್ಲಿ ಆನೆಯೊಂದು ನಿಂತು ತನ್ನ ಆಹಾರ ಎಲ್ಲಿದೆ ಎನ್ನುವುದನ್ನು ಹುಡುಕುತ್ತಿರುವಂತಿದೆ ಈ ಫೋಟೋ. 

ನಗರಗಳು ವಿಸ್ತಾರವಾಗುತ್ತಿರುವಂತೆ ಕಸದ ರಾಶಿಗಳು ತಮ್ಮ ಜಾಗವನ್ನು ವಿಸ್ತರಿಸಿಕೊಳ್ಳುತ್ತಿವೆ. ಕಸವನ್ನು ಸುರಿಯುವವರಿಗೆ ಅರಣ್ಯ ಪ್ರದೇಶದಲ್ಲಿರುವ ವಿಸ್ತಾರವಾದ ಜಾಗ ಸುಲಭವಾಗಿ ಸಿಗುತ್ತಿದೆ. ಆದರೆ ಈ ಕಸ ಹಾಗೂ ಇದರಲ್ಲಿರುವ ಪ್ಲಾಸ್ಟಿಕ್ ಮಾತ್ರ ಕಾಡು ಪ್ರಾಣಿಗಳ ಜೀವಕ್ಕೆ ಸಂಚಕಾರವನ್ನು ತರುತ್ತಿದೆ.  ಮಾನವ ಸೃಷ್ಟಿಸುವ ರಾಶಿ ರಾಶಿ ಕಸವು ಮುಗ್ದ ಜೀವಿಗಳ ಜೀವಕ್ಕೆ ಕುಂದು ತರುತ್ತಿದೆ, ಎಂದು ಪ್ರವೀಣ್ ಕಸ್ವಾನ್ ಟ್ವೀಟ್ ಮಾಡಿದ್ದಾರೆ. 

ಆನೆಯೊಂದು ಕಸದ ರಾಶಿಯನ್ನು ನೋಡುತ್ತಾ ನಿಂತು ತನ್ನ ಆಹಾರದ ಬಗ್ಗೆ ಚಿಂತೆ ಮಾಡುತ್ತಿರುವಂತೆ ಫೊಟೊ ಕಂಡು ಬರುತ್ತಿದೆ.