ನವದೆಹಲಿ[ಫೆ.10]: ಮೂರನೇ ಮದುವೆಗೆ ತೆರಳುತ್ತಿದ್ದ ವೇಳೆ, ಬಂಧನ ಭೀತಿಗೆ ಒಳಗಾದ ವರ ಮಹಾಶಯ, ಮದುವೆಯಾಗಲು ತಾನು ತೆರಳುವ ಬದಲು ತಾತ್ಕಾಲಿಕವಾಗಿ ತನ್ನ ಸೋದರನನ್ನು ಕಳುಹಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಹೀಗೆ 3ನೇ ಮದುವೆಗೆ ಮುಂದಾಗಿದ್ದ ಕರೀಂ ಎಂಬಾತ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಕರೀಂ ಎಂಬಾತನೇ ಈ ಹೈಡ್ರಾಮಾದ ಖಳನಾಯಕ. ಕರೀಂಗೆ ಮೂರನೇ ಮದುವೆ ಆಗುವಂತೆ ಸ್ವತಃ ಅವರ ತಾಯಿಯೇ ಒತ್ತಾಯ ಹಾಕುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕರೀಂನ 3ನೇ ಮದುವೆಗೆ ಸಿದ್ಧತೆ ನಡೆದು, ಆತ ಕುಟುಂಬ ಸದಸ್ಯರ ಜೊತೆ ಮದುವೆ ಮನೆಗೆ ತೆರಳುತ್ತಿದ್ದ. ಈ ವೇಳೆ ಮೊದಲ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಹೆದರಿದ ಕರೀಂ, ತನ್ನ ಸೋದರನ ಕಳುಹಿಸಿದ್ದ.

ಆತ್ತ ಮದುವೆ ವೇಳೆ ವರ ಬದಲಾಗಿರುವುದು ಕಂಡು ವಧುವಿನ ಮನೆಯವರು ಕೆಂಡಾಮಂಡಲವಾಗಿ, ವರನ ಮನೆಯವರ ಮೇಲೆ ಮುಗಿಬಿದ್ದಿದ್ದಾರೆ. ಜೊತೆಗೆ ಮದುವೆ ರದ್ದುಪಡಿಸಿದ್ದೂ, ಅಲ್ಲದೆ ಮದುವೆ ಸಿದ್ಧಪಡಿ ಸಲು ಮಾಡಿದ ವೆಚ್ಚ ಪಾವತಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಕರೀಂ ವಿರುದ್ಧ ದೂರು ಕೂಡಾ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರೀಂನನ್ನು ಬಂಧಿಸಲಾಗಿದೆ