ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಗ್ರೀಲ್‌ ಹಾಗೂ ಬಾಗಿಲು ಮುರಿದು ಒಳ್ಳ ನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಹುಡುಕಾಟ ನಡೆಸಿದ್ದು, ಸುತ್ತಿಗೆ ಮೂಲಕ ಬೀರು ಒಡೆದು ಅಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಅಲ್ಲದೇ ವಾಪಸ್‌ ಹೋಗುವಾಗ ಫ್ರಿಜ್‌'ನಲ್ಲಿದ್ದ ತಂಪು ಪಾನೀಯ ಮತ್ತು 4 ಬಾಟಲಿ ಬಿಯರ್‌ ಕುಡಿದಿದ್ದಾರೆ. ಜತೆಗೆ ಮನೆಯಲ್ಲಿದ್ದ ಊಟವನ್ನು ಕೂಡ ತಿಂದಿದ್ದಾರೆ. ವಾಪಸ್‌ ಹೋಗುವಾಗ ಮನೆ ಬಾಗಿಲು ಬಳಿಯೇ ಮಲ, ಮೂತ್ರ ವಿಸರ್ಜಿಸಿದ್ದಾರೆ.
ಬೆಂಗಳೂರು(ಮೇ 07): ನಗ, ನಾಣ್ಯ ದೋಚಿದ್ದಲ್ಲದೇ ಮನೆಯಲ್ಲಿದ್ದ ಮದ್ಯ ಸೇವಿಸಿ, ಹೋಗುವಾಗ ಮನೆಯ ಬಾಗಿಲಿನಲ್ಲೇ ಮಲ, ಮೂತ್ರ ವಿಸರ್ಜನೆ ಮಾಡಿ ಹೋಗಿರುವ ಘಟನೆ ಅಮೃತಹಳ್ಳಿಯಲ್ಲಿ ನಡೆದಿದೆ. ಅಮೃತಹಳ್ಳಿಯ ಕಾಫಿ ಬೋರ್ಡ್ ಲೇಔಟ್ನ 3ನೇ ಮಖ್ಯರಸ್ತೆಯಲ್ಲಿರುವ ಖಾಸಗಿ ಕಂಪನಿ ಉದ್ಯೋಗಿ ಕೌಶಿಕ್ ಬಸು ಎಂಬುವರ ಮನೆಯಲ್ಲಿ ಕಳವು ಮಾಡಿರುವ ದುಷ್ಕರ್ಮಿಗಳು ಈ ಅಸಹ್ಯಕರ ಕೃತ್ಯವೆಸಗಿದ್ದಾರೆ.
ಮೇ 4ರಂದು ಸಂಜೆ ಕೌಶಿಕ್ ಬಸು ಸಂಬಂಧಿಕರ ಮದುವೆಗೆಂದು ದೇವನಹಳ್ಳಿಯಲ್ಲಿರುವ ರೆಸಾರ್ಟ್'ಗೆ ತೆರಳಿದ್ದರು. ಅಂದು ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಗ್ರೀಲ್ ಹಾಗೂ ಬಾಗಿಲು ಮುರಿದು ಒಳ್ಳ ನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಹುಡುಕಾಟ ನಡೆಸಿದ್ದು, ಸುತ್ತಿಗೆ ಮೂಲಕ ಬೀರು ಒಡೆದು ಅಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಅಲ್ಲದೇ ವಾಪಸ್ ಹೋಗುವಾಗ ಫ್ರಿಜ್'ನಲ್ಲಿದ್ದ ತಂಪು ಪಾನೀಯ ಮತ್ತು 4 ಬಾಟಲಿ ಬಿಯರ್ ಕುಡಿದಿದ್ದಾರೆ. ಜತೆಗೆ ಮನೆಯಲ್ಲಿದ್ದ ಊಟವನ್ನು ಕೂಡ ತಿಂದಿದ್ದಾರೆ. ವಾಪಸ್ ಹೋಗುವಾಗ ಮನೆ ಬಾಗಿಲು ಬಳಿಯೇ ಮಲ, ಮೂತ್ರ ವಿಸರ್ಜಿಸಿದ್ದಾರೆ.
ಬೆಳಗ್ಗೆ ಮನೆ ಕೆಲಸ ಮಹಿಳೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕೂಡಲೇ ಮಹಿಳೆ ಸ್ಥಳೀಯರಿಗೆ ತಿಳಿಸಿದ್ದಾಳೆ. ನೆರೆ ಮನೆ ನಿವಾಸಿಗಳಿಂದ ವಿಷಯ ತಿಳಿದು ಕೌಶಿಕ್ ಬಸು ಮನೆಗೆ ಬಂದು ನೋಡಿದಾಗ ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದವು. ಬಾಗಿಲ ಬಳಿಯೇ ಮಲ, ಮೂತ್ರ ವಿಸರ್ಜನೆ ಮಾಡಿರುವುದು ಕಂಡಿದೆ. ಕೂಡಲೇ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
