ನಿಜಾಂ ಮ್ಯೂಸಿಯಂ ದರೋಡೆ ಪ್ರಕರಣ ಸುಖಾಂತ್ಯ! ಚಿನ್ನಲೇಪಿತ ಟಿಫಿನ್ ಬಾಕ್ಸ್ ಕದ್ದವರು ಅಂದರ್! ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಯತ್ನ! ಕದ್ದ ಚಿನ್ನದ ಟಿಫಿನ್ ಬಾಕ್ಸ್ ನಲ್ಲೇ ನಿತ್ಯ ಊಟ 

ಹೈದರಾಬಾದ್(ಸೆ.11): ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ನಿಜಾಂ ವಸ್ತು ಸಂಗ್ರಹಾಲಯದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳಿಂದ ವಜ್ರ ಹೊದಿಕೆ ಇರುವ ಮೂರು ಚಿನ್ನದ ಟಿಫಿನ್ ಬಾಕ್ಸ್, ಚಿನ್ನ ಬಟ್ಟಲು, ಸಾಸರ್ ಹಾಗೂ ಸ್ಪೂನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮ ಗೌಸ್ ಪಾಶಾ ಹಾಗೂ ಮೊಹಮ್ಮದ್ ಮುಬೀನ್ ಎಂದು ಗುರುತಿಸಲಾಗಿದ್ದು, ಇಬ್ಬರೂ ಬಾಲ್ಯ ಸ್ನೇಹಿತರು ಹಾಗೂ ದೂರದ ಸಂಬಂಧಿಕರಾಗಿದ್ದಾರೆಂದು ತಿಳಿದುಬಂದಿದೆ. 

ಆರೋಪಿಗಳು ರಾಜೇಂದ್ರ ನಗರದ ನಿವಾಸಿಗಳಾಗಿದ್ದು, ಆರೋಪಿಗಳು ಕದ್ದ ವಸ್ತುಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಉದ್ದೇಶ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಗೌಸ್ ಸಾಕಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ತನ್ನ ಮೇಲೆ ಪೊಲೀಸರಿಗೆ ಅನುಮಾನಗಳು ಬಾರದಂತೆ ಇತರೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಲು ಬಯಸಿದ್ದ. ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಾರದು ಎಂದು ಆರೋಪಿಗಳು ಸಿಮ್ ಕಾರ್ಡ್ ಗಳಿಲ್ಲದ ಫೋನ್ ಗಳನ್ನು ಬಳಕೆ ಮಾಡುತ್ತಿದ್ದರು.

Scroll to load tweet…

ಅಲ್ಲದೇ ಕದ್ದ ಚಿನ್ನಲೇಪಿತ ಟಿಫಿನ್ ಬಾಕ್ಸ್ ನಲ್ಲೇ ಆರೋಪಿಗಳು ನಿತ್ಯ ಊಟ ಮಾಡುತ್ತಿದ್ದರು ಎಂಬ ಕುತೂಹಲಕಾರಿ ಅಂಶವೂ ತನಿಖೆ ವೇಳೆ ಬಯಲಾಗಿದೆ. 

ಬಳಿಕ ಮುಬೀನ್ ಸೌದಿ ಅರೇಬಿಯಾದಲ್ಲಿರವ ಪರಿಚಯಿಸ್ಥರನ್ನು ಸಂಪರ್ಕಿಸಿ ವಸ್ತುಗಳನ್ನು ಮುಂಬೈನಿಂದಲೇ ಮಾರಾಟ ಮಾಡಲು ಯತ್ನಿಸಿದ್ದ. ಆರೋಪಿಗಳ ಕುರಿತಂತೆ ಮಾಹಿತಿ ತಿಳಿಯುತ್ತಿದ್ದಂತೆಯೇ ಹಿಮಾಯತ್ ಸಾಗರ್ ಬಳಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿ, ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿಳು ತಿಳಿಸಿದ್ದಾರೆ.