Asianet Suvarna News Asianet Suvarna News

ಯೂ ಟ್ಯೂಬ್ ನೋಡಿ ಬೈಕ್ ಕಳ್ಳತನ ಕಲಿತ ಭೂಪ ಅರೆಸ್ಟ್

ಯೂ ಟ್ಯೂಬ್ ನೋಡಿ ಏನು ಬೇಕಾದರೂ ಕಲಿಯಬಹುದು. ದುರಂತವೆಂದರೆ ಈ ಕಳ್ಳ ದುಡ್ಡಿಗಾಗಿ ಬೈಕ್ ಕಳ್ಳತನಕ್ಕೆ ಇಳಿದಿದ್ದು, ಇದನ್ನು ಕಲಿತಿದ್ದು, ಯೂ ಟ್ಯೂಬ್ ನೋಡಿಯಂತೆ. 

Thief learns motorbike stealing by You Tube
Author
Bengaluru, First Published Sep 16, 2018, 8:39 AM IST

ಬೆಂಗಳೂರು: ಯುಟ್ಯೂಬ್‌ನಲ್ಲಿ ಬೈಕ್ ಕಳ್ಳತನ ಮಾಡುವುದನ್ನು ಕಲಿತು ನಗರದಲ್ಲಿ 32ಕ್ಕೂ ಹೆಚ್ಚು ಐಷರಾಮಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಹತ್ತಿರದ ರಾಜೇಂದ್ರ ನಗರದ ನಿವಾಸಿ ಚಂದ್ರಕಾಂತ್ ಅಲಿಯಾಸ್ ಗುಂಡ ಬಂಧಿತ.

ಆರೋಪಿಯಿಂದ ಬುಲೆಟ್, ಪಲ್ಸರ್ ಸೇರಿದಂತೆ ₹20 ಲಕ್ಷ ಮೌಲ್ಯದ 32 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಮೂರು ದಿನಗಳ ಹಿಂದೆ ರಾತ್ರಿ ಚಂದ್ರಾಲೇಔಟ್ ಬಳಿ ಬೈಕ್‌ನಲ್ಲಿ ಗುಂಡ ತೆರಳುತ್ತಿದ್ದ. ಆ ವೇಳೆ ತನಗೆ ಎದುರಾದ ಗಸ್ತು ಪೊಲೀಸರನ್ನು ಕಂಡು ಅತಿವೇಗವಾಗಿ ಅವನು ಬೈಕ್ ಚಲಾಯಿಸಿದ್ದು, ಇದರಿಂದ ಅನುಮಾನಗೊಂಡು ಪೊಲೀಸರು ಬೆನ್ನಹತ್ತಿ ಗುಂಡನನ್ನು ಹಿಡಿದು ವಿಚಾರಣೆಗೊಳಪಡಿಸಿದಾಗ ಕಳ್ಳತನದ ಸಂಗತಿ ಬೆಳಕಿಗೆ ಬಂದಿದೆ.

 ಮಂಡ್ಯ ಮೂಲದ ಗುಂಡ, ಬಾಲ್ಯದಲ್ಲೇ ಬೆಂಗಳೂರಿಗೆಬಂದು ನೆಲೆಸಿದ್ದ. ಮೊದಲು ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದ ಆತನ ಪೋಷಕರು, ಬಳಿಕ ಕೋರಮಂಗಲದ ರಾಜೇಂದ್ರ ನಗರಕ್ಕೆ ವಾಸ್ತವ್ಯ ಬದಲಿಸಿದ್ದರು. ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಗುಂಡ, ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದಿದ್ದ. ಯುಟ್ಯೂಬ್ ನಲ್ಲಿ ‘ಹೌ ಟು ಸ್ಟೀಲಿಂಗ್ ರಾಯಲ್ ಬೈಕ್’ ವಿಷಯ ಹುಡುಕಾಡಿ ಕಳ್ಳತನ ಕಲಿತ ಆರೋಪಿ, ನಂತರ ಕಳ್ಳತನದ ಸಂಚನ್ನು ರಾತ್ರಿ ವೇಳೆಕಾರ್ಯರೂಪಕ್ಕಿಳಿಯುತ್ತಿದ್ದ ಎಂದು ಚಂದ್ರಲೇಔಟ್ ಪೊಲೀಸರು ವಿವರಿಸಿದ್ದಾರೆ.

ಮಂಡ್ಯ, ರಾಮನಗರದಲ್ಲೂ ಕೈಚಳಕ: ಹೀಗೆ ಮೂರು ವರ್ಷಗಳಿಂದ ಬೈಕ್ ಕಳ್ಳತನವನ್ನೇ ವೃತ್ತಿಯಾಗಿಸಿ ಗುಂಡನ ವಿರುದ್ಧ ಬೆಂಗಳೂರು ನಗರ ಮಾತ್ರವಲ್ಲದೆ ಮಂಡ್ಯ ಹಾಗೂ ರಾಮನಗರ ಠಾಣೆಗಳಲ್ಲಿ ಸಹ ಪ್ರಕರಣಗಳುದಾಖಲಾಗಿವೆ. ಕೆಲ ತಿಂಗಳ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದ ಹೊರ ಬಂದ ಆತ, ಮತ್ತೆ ತನ್ನ ಚಾಳಿ ಮುಂದುವರೆಸಿದ್ದ.

ಬಳಿಕ ಚಂದ್ರಾಲೇಔಟ್, ಜ್ಞಾನಭಾರತಿ, ಅನ್ನಪೂಣೇಶ್ವರಿ ನಗರ, ಕೆಂಗೇರಿ, ಕಾಮಾಕ್ಷಿಪಾಳ್ಯ, ವಿಜಯನಗರ, ನಂದಿನಿಲೇಔಟ್ ಠಾಣೆಗಳು ಹಾಗೂ ಮಂಡ್ಯದ ಪಶ್ಚಿಮ ಠಾಣೆಗಳ ಸರಹದ್ದಿನಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದೇ ವೇಳೆ ಆತನ ಸಹಚರ ವಿಶ್ವ ಎಂಬಾತ ಜ್ಞಾನಭಾರತಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದು, ಆತನಿಂದ 7 ಬೈಕ್‌ಗಳು ಪ್ರತ್ಯೇಕವಾಗಿ ಜಪ್ತಿಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. 
 

Follow Us:
Download App:
  • android
  • ios