Asianet Suvarna News Asianet Suvarna News

ದುಬಾರಿ ಕಾರು ಬಾಡಿಗೆ ಪಡೆದು ಕದ್ದೋಡುತ್ತಿದ್ದವನ ಸೆರೆ

ಬಾಡಿಗೆ ಕಾರಿನೊಂದಿಗೆ ಪರಾರಿಯಾಗಿ ಮಾದಕ ವಸ್ತು ಜಾಲಕ್ಕೆ ಬಳಸಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಕಳ್ಳನನ್ನು ಜೀವನ್ ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.

Thief Arrest In Bengaluru

ಬೆಂಗಳೂರು : ಬಾಡಿಗೆ ಕಾರಿನೊಂದಿಗೆ ಪರಾರಿಯಾಗಿ ಮಾದಕ ವಸ್ತು ಜಾಲಕ್ಕೆ ಬಳಸಿಕೊಳ್ಳುತ್ತಿದ್ದ ರಾಜಸ್ಥಾನ ಮೂಲದ ಕಳ್ಳನನ್ನು ಜೀವನ್ ಬಿಮಾನಗರ ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಕುಮಾರ್ ಬಂಧಿತ. ಈತನಿಂದ 40 ಲಕ್ಷ ಮೌಲ್ಯದ ಎರಡು ಎರಡು ಎಸ್ ಯುವಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಹಿಂದೆ ದೊಡ್ಡ ಜಾಲ ಇರುವ ಶಂಕೆಯಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪದವೀಧರನಾಗಿರುವ ರಾಜಸ್ಥಾನದ ಚಾಲೂರು ಜಿಲ್ಲೆಯ ಬಾಬೂರು ತಾಲೂಕಿನ ಬಾಡಾವಿ ಗ್ರಾಮದ ದಿಲೀಪ್, ಬೆಂಗಳೂರಿಗೆ ಬಂದು ಬಾಡಿಗೆ ಕಾರುಗಳನ್ನು ಪಡೆದು ಅವುಗಳ ನಂಬರ್ ಪ್ಲೇಟ್ ಮತ್ತು ದಾಖಲೆಗಳನ್ನು ಬದಲಿಸಿ ರಾಜಸ್ಥಾನ, ಗುಜರಾತ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಜಸ್ಟ್ ರೈಡರ್’ ಸಂಸ್ಥೆ ಗುರುತಿನ ಚೀಟಿ ಹಾಗೂ ಇತರ ದಾಖಲೆಗಳನ್ನು ಪಡೆದು ಕಾರನ್ನು ಬಾಡಿಗೆಗೆ ನೀಡುತ್ತದೆ. ಕಿಲೋ ಮೀಟರ್ ಲೆಕ್ಕದಲ್ಲಿ ಬಾಡಿಗೆ ಹಣವನ್ನು ಪಾವತಿಸಬೇಕು. ದಿಲೀಪ್ ಕಳೆದ ನಾಲ್ಕೈದು ತಿಂಗಳ ಹಿಂದೆ ‘ಜಸ್ಟ್ ರೈಡರ್’ ಸಂಸ್ಥೆಗೆ ನಕಲಿ ದಾಖಲೆ ನೀಡಿ ಕಾರನ್ನು ಕೊಂಡುಕೊಂಡಿದ್ದ.

ಕಾರು ಪಡೆದ ಬಳಿಕ ಕರ್ನಾಟಕ ಗಡಿ ಭಾಗಕ್ಕೆ ಹೋಗುತ್ತಿದ್ದ ಆರೋಪಿ ಗಡಿಭಾಗದಲ್ಲಿ ಕಾರಿನಲ್ಲಿ ಅಳವಡಿಸಿದ್ದ ಜಿಪಿಎಸ್ ಯಂತ್ರ ಕಿತ್ತು ಹಾಕಿ ಪರಾರಿಯಾಗುತ್ತಿದ್ದ. ಇದರಿಂದ ಕಾರು ಮತ್ತು ಸಂಸ್ಥೆಯ ನಡುವೆ ಹೊಂದಿದ್ದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಬಳಿಕ ಕಾರು ಎಲ್ಲಿ ಹೋಗುತ್ತಿದೆ ಎಂದು ಕಂಪನಿಯವರಿಗೆ ತಿಳಿಯುತ್ತಿರಲಿಲ್ಲ. ಪೊಲೀಸರಿಗೆ ಮಾಹಿತಿ ತಿಳಿಯಬಾರದು ಎಂಬ ಕಾರಣಕ್ಕೆ ಆರೋಪಿ ದಿಲೀಪ್ ಪ್ರತಿ 100 ಕಿ.ಮೀ.ಗೆ ನಂಬರ್ ಪ್ಲೇಟ್ ಬದಲಾಯಿಸುತ್ತಿದ್ದ.

ಇದರಿಂದ ಆರೋಪಿಯ ನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಕದ್ದ ಕಾರನ್ನು ಗುಜರಾತ್ ಮತ್ತು ರಾಜಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಆರೋಪಿ ಮಾದಕ ವಸ್ತು ಸಾಗಣೆ ಜಾಲಕ್ಕೆ ಬಳಸಿಕೊ ಳ್ಳುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಂದು ಪೊಲೀಸರು ಹೇಳಿದರು.

ಸಿಕ್ಕಿದ್ದು ಹೇಗೆ?: ಪೊಲೀಸರಿಗೆ ಸಿಕ್ಕಿ ಬೀಳಬಾರದೆಂಬ ಆತಂಕದಿಂದ ಆರೋಪಿ ಕರ್ನಾಟಕದ ಗಡಿ ಭಾಗಕ್ಕೆ ತೆರಳುತ್ತಿದ್ದಂತೆ ಜಿಪಿ ಎಸ್ ಯಂತ್ರ ಹಾಗೂ ತಾನು ಬಳಸುತ್ತಿದ್ದ ಮೊಬೈಲ್ ಸಿಮ್ ಕಿತ್ತು ಎಸೆಯುತ್ತಿದ್ದ. ಮೊಬೈಲ್ ಹ್ಯಾಂಡ್ ಸೆಟ್ ಮತ್ತು ಆರೋಪಿ ಬಳಸುತ್ತಿದ್ದ ಹಳೇ ಮೊಬೈಲ್ ಸಂಖ್ಯೆ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ರಾಜಸ್ಥಾನದಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

Follow Us:
Download App:
  • android
  • ios