ನವದೆಹಲಿ :  ದೀಪಾವಳಿಗೂ ಮುನ್ನವೇ ಅತಿಯಾದ ವಾಯುಮಾಲಿನ್ಯದ ಕಾರಣ ದಿಲ್ಲಿಯಲ್ಲಿ ಉಸಿರಾಡಲೂ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ನಗರದ ಹಲವು ಭಾಗಗಳಲ್ಲಿ ವಾಯುಗುಣಮಟ್ಟವು ಸೋಮವಾರ ‘ಅಪಾಯಕಾರಿ’ ಮಟ್ಟವನ್ನು ಮೀರಿದೆ.

ದಿಲ್ಲಿಯ ಮಂದಿರ ಮಾರ್ಗದಲ್ಲಿ ‘ಪಿಎಂ 10’ ಮಾನದಂಡದ ವಾಯುಗುಣಮಟ್ಟಸೂಚ್ಯಂಕವು 707 ದಾಟಿದೆ. ಇದೇ ವೇಳೆ, ‘ಪಿಎಂ 2.5’ ವಾಯುಗುಣಮಟ್ಟಸೂಚ್ಯಂಕ 663 ಇತ್ತು. ಜವಾಹರಲಾಲ್‌ ನೆಹರು ಕ್ರೀಡಾಂಗಣ ಹಾಗೂ ಧ್ಯಾನ್‌ಚಂದ್‌ ಕ್ರೀಡಾಂಗಣಗಳಲ್ಲಿ ‘10 ಪಿಎಂ’ ವಾಯುಗುಣ ಮಟ್ಟಸೂಚ್ಯಂಕವು ಕ್ರಮವಾಗಿ 681 ಹಾಗೂ 676 ಇತ್ತು.

ಸೂಚ್ಯಂಕ ಶೂನ್ಯದಿಂದ 50ರವರೆಗೆ ಇದ್ದರೆ ‘ಉತ್ತಮ’, 51ರಿಂದ 100ರವರೆಗೆ ಇದ್ದರೆ ‘ತೃಪ್ತಿದಾಯಕ’, 101ರಿಂದ 200ರವರೆಗೆ ಇದ್ದರೆ ‘ಸಾಧಾರಣ’, 201ರಿಂದ 300ರವರೆಗೆ ಇದ್ದರೆ ‘ಕಳಪೆ’, 301ರಿಂದ 400ರಷ್ಟಿದ್ದರೆ ‘ಭಾರಿ ಕಳಪೆ’ ಹಾಗೂ 401ರಿಂದ 500ರಷ್ಟಿದ್ದರೆ ‘ಗಂಭೀರ’ ಎಂದು ಪರಿಗಣಿಸಲಾಗುತ್ತದೆ. ಸೂಚ್ಯಂಕ 700 ದಾಟಿದರೆ ‘ಅಪಾಯಕಾರಿ’ ಎನ್ನಿಸಿಕೊಳ್ಳುತ್ತದೆ.

ಈಗ ದೆಹಲಿಯಲ್ಲಿ ಮಾಲಿನ್ಯ ಸೂಚ್ಯಂಕ 700ನ್ನೂ ಮೀರಿರುವುದರಿಂದ ‘ದೀಪಾವಳಿಗೂ ಮುನ್ನವೇ ಹೀಗಾದರೆ ದೀಪಾವಳಿ ನಂತರದ ಪರಿಸ್ಥಿತಿ ಏನು?’ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ವಾತಾವರಣ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯನ್ನು ಶಾಲಾ ಕೋಣೆಗಳೊಳಗೇ ನಡೆಸಲಾಗುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಬರುವಂತೆ ಸೂಚಿಸಲಾಗುತ್ತಿದೆ. ಇನ್ನು ಕೆಲವು ಶಾಲೆಗಳು ಮಕ್ಕಳಿಗೆ ನೆಲ್ಲಿಕಾಯಿಯನ್ನು ತಿನ್ನಲು ನೀಡುತ್ತಿವೆ. ನೆಲ್ಲಿಕಾಯಿಗೆ ಶ್ವಾಸಕೋಶವನ್ನು ರಕ್ಷಿಸುವ ಸಾಮರ್ಥ್ಯವಿದ್ದು, ಮಲಿನ ವಾಯುವು ಶ್ವಾಸಕೋಶದ ಮೇಲೆ ಪರಿಣಾಮವಾಗದಂತೆ ತಡೆಗಟ್ಟುತ್ತದೆ.

ಹೊಗೆ ಉಗುಳುವ ವಾಹನಗಳ ಮೇಲೆ ‘ಆಕ್ರಮಣ’ ಮುಂದುವರಿದಿದ್ದು, ಶುಕ್ರವಾರ ಮತ್ತು ಶನಿವಾರ 80 ಲಕ್ಷ ರು. ದಂಡ ವಸೂಲು ಮಾಡಲಾಗಿದೆ.

ಜನರಿಗೆ ಕಾರು ಬಿಟ್ಟು ಬಸ್ಸು ಹಾಗೂ ಮೆಟ್ರೋ ರೈಲು ಏರಲು ಸರ್ಕಾರ ಮನವಿ ಮಾಡಿದೆ. ಕಟ್ಟಡ ನಿರ್ಮಾಣ ಕಾರ್ಯ, ಡೀಸೆಲ್‌ ಜನರೇಟರ್‌ ಬಳಕೆ ನಿರ್ಬಂಧಿಸಲಾಗಿದೆ.

ಕಾರಣ ಏನು?:  ಚಳಿಗಾಲದ ವಾತಾವರಣ, ಅತಿಯಾದ ಮಂಜು, ಪಕ್ಕದ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುವಿಕೆ, ವಾಹನ ಹಾಗೂ ಕಾರ್ಖಾನೆ ಮಾಲಿನ್ಯವು ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ.