ನವದೆಹಲಿ/ಬೆಂಗಳೂರು :  2018ನೇ ಸಾಲಿನ ದೇಶದ ಟಾಪ್‌-10 ಪೊಲೀಸ್‌ ಠಾಣೆಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಗುರುವಾರ ರಾತ್ರಿ ಪ್ರಕಟಿಸಿದ್ದು, ಕರ್ನಾಟಕದ ಧಾರವಾಡ ಜಿಲ್ಲೆ ಗುಡಗೇರಿ ಪೊಲೀಸ್‌ ಠಾಣೆಯು 5ನೇ ಸ್ಥಾನ ಪಡೆದಿದೆ.

‘ಸಾರ್ವಜನಿಕರ ಜತೆ ಪೊಲೀಸರ ಉತ್ತಮ ಸಂಪರ್ಕ, ಪೊಲೀಸ್‌ ಠಾಣಾ ಕಟ್ಟಡ, ಅಪರಾಧ ಪ್ರಮಾಣ, ಪೊಲೀಸ್‌ ಸಿಬ್ಬಂದಿಯಲ್ಲಿ ಇರುವ ಶಿಸ್ತು’ ಇನ್ನಿತರ ಅಂಶಗಳನ್ನು ಪರಿಗಣಿಸಿ ಪ್ರತಿ ವರ್ಷ ಈ ಪ್ರಶಸ್ತಿಯ್ನು ನೀಡಲಾಗುತ್ತಿದೆ. ಈ ಬಾರಿ ರಾಜಸ್ಥಾನದ ಕುಲು, ಅಂಡಮಾನ್‌ನ ಕ್ಯಾಂಪ್‌ಬೆಲ್‌ ಬೇ, ಪ.ಬಂಗಾಳದ ಫರಕ್ಕಾ, ಪುದುಚೇರಿಯ ನೆಟ್ಟಪಕ್ಕಳಂ, ಕರ್ನಾಟಕದ ಗುಡಗೇರಿ, ಹಿಮಾಚಲ ಪ್ರದೇಶದ ಚೋಪಾಲ್‌, ರಾಜಸ್ಥಾನದ ಲಖೇರಿ, ತಮಿಳುನಾಡಿನ ಪೆರಿಯಕುಲಂ, ಉತ್ತರಾಖಂಡದ ಮುನ್ಸ್ಯಾರಿ ಹಾಗೂ ಗೋವಾದ ಚುರ್ಚೋರಿಂ ಠಾಣೆಗಳು- ಕ್ರಮವಾಗಿ ಟಾಪ್‌ 10ನಲ್ಲಿ ಸ್ಥಾನ ಗಿಟ್ಟಿಸಿವೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಈ ಮುನ್ನ ಹೊರಠಾಣೆಯಾಗಿದ್ದ ಗುಡಗೇರಿ, ದಶಕದ ಹಿಂದಷ್ಟೇ ಪೊಲೀಸ್‌ ಠಾಣೆಯಾಗಿ ಮಾರ್ಪಟ್ಟಿತ್ತು. ನವೀನ ಜಕ್ಕಲಿ ಅವರು ಈ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿ ಬಂದ ಬಗ್ಗೆ ಧಾರವಾಡ ಎಸ್‌ಪಿ ಜೆ. ಸಂಗೀತಾ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದ ಟಾಪ್‌ 10 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆಯ ಗುಡಗೇರಿ ಪೊಲೀಸ್‌ ಠಾಣಾ ಆಯ್ಕೆಯಾಗಿರುವುದು ಸಂತಸದ ವಿಚಾರ. ಐಜಿಪಿ ಅವರ ನೇತೃತ್ವದಲ್ಲಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ಗುಡಗೇರಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಅವರ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪರಿಣಾಮ ಪ್ರಶಸ್ತಿ ಲಭಿಸಿದೆ. ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

- ಜೆ. ಸಂಗೀತಾ, ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ