ಕಾಂಗ್ರೆಸ್ ಪಕ್ಷದಲ್ಲೇ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಕುರಿತು ಇದೀಗ ಗೊಂದಲದ ಹೇಳಿಕೆಗಳು ಹೊರಬರುತ್ತಿದೆ. ಹಿರಿಯ ನಾಯಕ ಪಿ ಚಿದಂಬರಂ ಹೇಳಿಕೆ ಬೆನ್ನಲ್ಲೇ ಇದೀಗ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇಷ್ಟೇ ರಾಹುಲ್ ಗಾಂಧಿ ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿ(ಅ.24): ಲೋಕಸಭೆಯ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಬಿಂಬಿಸುವ ಸಾಧ್ಯತೆಗಳಿಲ್ಲ ಎಂಬ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿಕೆ ಅವರ ವೈಯಕ್ತಿಕ ವಿಚಾರವಷ್ಟೇ. ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯವರೇ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕನಾಗಿರುವ ನನ್ನನ್ನು ಕೇಳಿದರೆ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದೇ ಹೇಳುವೆ. ಅಷ್ಟೇ ಅಲ್ಲದೆ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆಂದು ಯಾರಲ್ಲಿ ಕೇಳಿದರೂ ನಾವು ಹೇಳೋದು ರಾಹುಲ್ ಗಾಂಧಿ ಹೆಸರನ್ನೇ ಎಂದರು. ಇದೇವೇಳೆ ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗ್ತಾರೆ ಎಂಬುದು ಚುನಾವಣೆ ವೇಳೆಯೇ ನಿರ್ಧಾರವಾಗುತ್ತದೆ. ಲೋಕಸಭೆ ಚುನಾವಣೆಗೆ ಸಮಯವಿದೆ. ಮೈತ್ರಿಕೂಟದ ಪಾಲುದಾರ ಪಕ್ಷಗಳ ಮುಖಂಡರು ಸೇರಿ ಚರ್ಚಿಸಿ ಈ ಸಂಗತಿ ನಿರ್ಧರಿಸುತ್ತಾರೆ ಎಂದರು.
ಆಸ್ಥಾನ್ ನೇಮಕ ಬಗ್ಗೆ ತನಿಖೆಯಾಗಲಿ:
ಗುಜರಾತ್ ಕೆಡರ್ ಐಪಿಎಸ್ ಅಧಿಕಾರಿಯಾಗಿದ್ದ ರಾಕೇಶ್ ಅಸ್ಥಾನ್ ಅವರನ್ನು ನೇರವಾಗಿ ಸಿಬಿಐ ವಿಶೇಷ ನಿರ್ದೇಶಕರಾಗಿ ನೇಮಿಸಲು ಕಾರಣವೇನೆಂಬುದರ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಅವರನ್ನು ನೇರವಾಗಿ ಪ್ರಧಾನಿ ಕಚೇರಿಯವರೇ ನೇಮಕ ಮಾಡಿಕೊಂಡಿದ್ದಾರೆ. ಅಂತಹ ಅಧಿಕಾರಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಬೆಂಬಲ ನೀಡಿದ್ದರಿಂದ ಅವರೂ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.
