ಕ್ರೀಡಾಸಕ್ತರೆಲ್ಲ ಸೇರಿ ಕ್ರೀಡಾಂಗಣದ ಹೊರ ಭಾಗದಲ್ಲಿ ಪೆಂಡಾಲ್ ಹಾಕಿ, ಕುರ್ಚಿಯ ಮೇಲೆ ಒಳಾಂಗಣ ಕ್ರೀಡಾಂಗಣದ ಭಾವಚಿತ್ರ ಇಟ್ಟು ಹೂ ಹಾರ ಹಾಕಿ, ಜಿಲೇಬಿ, ಮಂಡಕ್ಕಿ, ಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಮರಳಿ ಬಾ ಕ್ರೀಡಾಂಗಣವೇ, ಮತ್ತೆ ಹುಟ್ಟಿ ಬಾ ಎಂಬ ಘೋಷಣೆ ಕೂಗಿದರು. ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಹಾವೇರಿ (ನ.25): ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣ ದುರಸ್ತಿಗೊಳಿಸದೇ 4 ವರ್ಷಗಳಿಂದ ಬೀಗ ಹಾಕಿರುವುದನ್ನು ಖಂಡಿಸಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಶುಕ್ರವಾರ ಕ್ರೀಡಾಂಗಣದ ಎದುರು 4ನೇ ಪುಣ್ಯತಿಥಿ ಆಚರಿಸುವ ಮೂಲಕ ಗಮನ ಸೆಳೆದರು. ನಾಲ್ಕು ವರ್ಷಗಳ ಹಿಂದೆ ಬಿರುಗಾಳಿಗೆ ಬಿದ್ದ ಒಳಾಂಗಣ ಕ್ರೀಡಾಂಗಣವನ್ನು ಇದುವರೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಈ ಕುರಿತು ಹತ್ತಾರು ಬಾರಿ ಮನವಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರೀಡಾಸಕ್ತರೆಲ್ಲ ಸೇರಿ ಕ್ರೀಡಾಂಗಣದ ಹೊರ ಭಾಗದಲ್ಲಿ ಪೆಂಡಾಲ್ ಹಾಕಿ, ಕುರ್ಚಿಯ ಮೇಲೆ ಒಳಾಂಗಣ ಕ್ರೀಡಾಂಗಣದ ಭಾವಚಿತ್ರ ಇಟ್ಟು ಹೂ ಹಾರ ಹಾಕಿ, ಜಿಲೇಬಿ, ಮಂಡಕ್ಕಿ, ಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಮರಳಿ ಬಾ ಕ್ರೀಡಾಂಗಣವೇ, ಮತ್ತೆ ಹುಟ್ಟಿ ಬಾ ಎಂಬ ಘೋಷಣೆ ಕೂಗಿದರು. ಸಂಬಂಧಪಟ್ಟವರ ನಿರ್ಲಕ್ಷ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಒಳಾಂಗಣ ಕ್ರೀಡಾಂಗಣ ಆಡಳಿತವರ್ಗದ ನಿರ್ಲಕ್ಷ್ಯಕ್ಕೆ ಒಳಗಾಗಿ ನಾಲ್ಕು ವರ್ಷವಾಗಿದ್ದು ಈ ವರೆಗೂ ಅದಕ್ಕೆ ಸರಿಯಾದ ಕಾಯಕಲ್ಪ ಕಲ್ಪಿಸಿ ಜನೋಪಯೋಗಿ ಆಗುವಂತೆ ಮಾಡಿಲ್ಲ. ಹೀಗಾಗಿ ದುಃಖತಪ್ತ

ಕ್ರೀಡಾಭಿಮಾನಿಗಳೆಲ್ಲ ಸೇರಿ ‘ಮರಳಿ ಬಾ ಕ್ರೀಡಾಂಗಣವೇ’ ಎಂದು ನಾಲ್ಕನೇ ಪುಣ್ಯತಿಥಿ ಆಚರಿಸುವ ಮೂಲಕ ಜಿಲ್ಲಾಡಳಿತದ ಗಮನಸೆಳೆಯುತ್ತಿದ್ದೇವೆ ಎಂದು ಕ್ರೀಡಾಭಿಮಾನಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಸುರೇಶ ದೊಡ್ಮನಿ, ನಾಗೇಂದ್ರ ಕಡಕೋಳ, ವಿಜಯಕುಮಾರ ಚಿನ್ನಿಕಟ್ಟಿ, ಆರು ವರ್ಷಗಳ ಹಿಂದೆ ಒಳಾಂಗಣ ಕ್ರೀಡಾಂಗಣವನ್ನು ಕೋಟ್ಯಂತರ ರು. ವ್ಯಯಿಸಿ ನಿರ್ಮಿಸಲಾಗಿತ್ತು. ಹೀಗಿ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ ಕಟ್ಟಡ ಎರಡು ವರ್ಷದಲ್ಲಿಯೇ ಮಳೆ, ಗಾಳಿಗೆ ಕುಸಿದು ಬಿದ್ದಿತು. ಕೊನೆಗೆ ಅದನ್ನು ದುರಸ್ತಿ ಮಾಡಿದರಾದರೂ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಕ್ರೀಡಾಪಟುಗಳಿಗೆ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿಲ್ಲ.

ಇನ್ನು ಈಜುಕೊಳ ಸಹ ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಯವರಿಗೆ ಎಷ್ಟು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಹೀಗಾಗಿ ಪುಣ್ಯತಿಥಿ ಮಾಡುವ ಮೂಲಕವಾದರೂ ಮಲಗಿರುವ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಬಳಿಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿಪತ್ರ ಸಲ್ಲಿಸಿದರು. ನಗರಸಭೆ ಸದಸ್ಯ ಶಿವಬಸವ ವನ್ನಳ್ಳಿ, ವೀರಣ್ಣ ಹೇರೂರ, ಈಶ್ವರಗೌಡ ಅಂಬಲಿ, ಬಸವರಾಜ ತುಪ್ಪದ, ಬಸವರಾಜ ಮಾಸೂರ, ಎಸ್.ಎಸ್. ಹುಲಿಕಂತಿಮಠ, ಪ್ರಭು ಹಿಟ್ನಳ್ಳಿ, ಸಿದ್ದಣ್ಣ ಕಟಗಿ ಇತರರು ಇದ್ದರು.