ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಮಹಾರಾಷ್ಟ್ರ ಮೂಲದ ಸನಾತನಾ ಸಂಸ್ಥಾ ಸ್ಪಷ್ಟನೆ ನೀಡಿದೆ. ಅಲ್ಲದೆ ಹತ್ಯೆಯನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ಅದು ಹೇಳಿದೆ.

ಮುಂಬೈ (ಸೆ.06): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಮಹಾರಾಷ್ಟ್ರ ಮೂಲದ ಸನಾತನಾ ಸಂಸ್ಥಾ ಸ್ಪಷ್ಟನೆ ನೀಡಿದೆ. ಅಲ್ಲದೆ ಹತ್ಯೆಯನ್ನು ತಾನು ತೀವ್ರವಾಗಿ ಖಂಡಿಸುವುದಾಗಿ ಅದು ಹೇಳಿದೆ.
ಈ ಹಿಂದೆ ನಡೆದ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಸನಾತನಾ ಸಂಸ್ಥೆಯ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿವಾಹಿನಿಯೊಂದು ಸನಾತನಾ ಸಂಸ್ಥೆಯ ವಕ್ತಾರ ಚೇತನ್ ರಾಜಹನ್ಸ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ರಾಜಹನ್ಸ್, ಗೌರಿ ಕೇಸಿಗೂ ತಮ್ಮ ಸಂಸ್ಥೆಗೂ ಯಾವುದೇ ನಂಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗೌರಿ ಲಂಕೇಶ್ ಅವರ ನಿಗೂಢ ಹತ್ಯೆಗೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುವ ಮೊದಲೇ ನಮ್ಮ ಸಂಸ್ಥೆಯ ಹೆಸರನ್ನು ಹತ್ಯೆ ಕೇಸಲ್ಲಿ ಥಳಕು ಹಾಕುತ್ತಿರುವುದು ಸರಿಯಲ್ಲ ಎಂದು ರಾಜಹನ್ಸ್ ಕಿಡಿಕಾರಿದ್ದಾರೆ.
ಗೌರಿ ಲಂಕೇಶ್ ವಿರುದ್ದ ರಾಜಕಾರಣಿಯೊಬ್ಬರು ಕ್ರಿಮಿನಲ್ ಕೇಸು ದಾಖಲಿಸಿದ್ದರು, ಅವರಿಗೆ ನಕ್ಸಲರ ಜೊತೆ ನಂಟಿತ್ತು, ಅವರು ದೊಡ್ಡ ಹಣ ವಸೂಲಿಗಾಗಿದ್ದರು, ಇತ್ತೀಚೆಗೆ ಲಿಂಗಾಯತ ಧರ್ಮದ ವಿರುದ್ಧ ಮಾತನಾಡಿದ್ದರು, ಸೋದರನ ಜೊತೆ ಆಸ್ತಿ ವಿವಾದ ಹೊಂದಿದ್ದರು. ಈ ಎಲ್ಲಾ ವಿಷಯಗಳ ಕುರಿತು ತನಿಖೆ ನಡೆಸುವ ಬದಲು ತಮ್ಮ ಸಂಸ್ಥೆಯ ಜೊತೆಗೆ ಹತ್ಯೆಯನ್ನು ನಂಟು ಮಾಡುವುದು ಸರಿಯಲ್ಲ. ಹತ್ಯೆಯಾದ ಬಳಿಕವೇ ಆಕೆಯ ಹೆಸರನ್ನ ತಾವು ಮೊದಲ ಬಾರಿ ಕೇಳಿದ್ದು ಎಂದು ರಾಜಹನ್ಸ್ ಹೇಳಿದ್ದಾರೆ. ಪಾನ್ಸರೆ ಕೇಸಲ್ಲಿ ಸನಾತನ ಸಂಸ್ಥೆಯ ಓರ್ವ ವ್ಯಕ್ತಿಯ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು, ಜೊತೆಗೆ ದಾಭೋಲ್ಕರ್ ಕೇಸಲ್ಲೂ ಸನಾನತ ಸಂಸ್ಥೆಯ ಇಬ್ಬರು ಕಾರ್ಯಕರ್ತರನ್ನು ಆರೋಪಪಟ್ಟಿಯಲ್ಲಿ ಸೇರಿಸಿತ್ತು