Asianet Suvarna News Asianet Suvarna News

ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ನಡೆದ ವಿಶೇಷ ಚರ್ಚೆಗಳೇನು..?

ಬೆಳಗಾವಿಯಲ್ಲಿ ಈ ಹಿಂದೆ ನಡೆದ ಕೆಲವು ಅಧಿವೇಶನಗಳು ಪ್ರತಿಭಟನೆಯಿಂದ ಮೊಟಕು ಇಲ್ಲವೇ ಕಲಾಪವೇ ನಡೆಯದ ಪ್ರಸಂಗಗಳು ಸಾಕಷ್ಟುಬಾರಿ ನಡೆದಿತ್ತು. ಆದರೆ ಈ ಬಾರಿ ಮೊದಲ ದಿನದಿಂದ ಬಹುತೇಕ ಕಲಾಪಗಳು ನಡೆದಿದ್ದು ವಿಶೇಷವಾಗಿತ್ತು. ಈ ವೇಳೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದವು. 

The winter session of the Karnataka assembly ends on Friday
Author
Bengaluru, First Published Dec 22, 2018, 7:44 AM IST

ಸುವರ್ಣಸೌಧ :  ರಾಜ್ಯದ ಬಹುತೇಕ ತಾಲೂಕುಗಳು ಎದುರಿಸುತ್ತಿರುವ ಬರ ಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆದ ಸದಸ್ಯರು. ಚರ್ಚೆಯಾಗದ ಉತ್ತರ ಕರ್ನಾಟಕದ ಸಮಸ್ಯೆ ಸಾಲಮನ್ನಾ ವಿಷಯದಲ್ಲಿ ಸುಳಿದ ರಾಜಕೀಯ ಮೇಲಾಟ... ಉತ್ತರ ಕರ್ನಾಟಕಕ್ಕೆ ಕೆಲವು ಕಚೇರಿ ಸ್ಥಳಾಂತರ ಮಾಡುವ ಚಿಂತನೆ ಮಾಡಿದ ಸರ್ಕಾರ... ಪ್ರತಿಷ್ಠೆಗೆ ಎರಡು ದಿನ ಬಲಿಯಾದ ಕಲಾಪ... ಮುಖ್ಯಮಂತ್ರಿಗಳ ನಡೆಯಿಂದ ಅಧಿವೇಶನಕ್ಕೆ ತಟ್ಟದ ಪ್ರತಿಭಟನೆಗಳ ಕಾವು..!

ಇವು ಬೆಳಗಾವಿಯಲ್ಲಿ ಈ ಬಾರಿ ನಡೆದ ಚಳಿಗಾಲದ ಅಧಿವೇಶನದ ಸಿಂಹಾವಲೋಕನ.

ಬೆಳಗಾವಿಯಲ್ಲಿ ಈ ಹಿಂದೆ ನಡೆದ ಕೆಲವು ಅಧಿವೇಶನಗಳು ಪ್ರತಿಭಟನೆಯಿಂದ ಮೊಟಕು ಇಲ್ಲವೇ ಕಲಾಪವೇ ನಡೆಯದ ಪ್ರಸಂಗಗಳು ಸಾಕಷ್ಟುಬಾರಿ ನಡೆದಿತ್ತು. ಆದರೆ ಈ ಬಾರಿ ಮೊದಲ ದಿನದಿಂದ ಬಹುತೇಕ ಕಲಾಪಗಳು ನಡೆದಿದ್ದು ವಿಶೇಷ. ಮೊದಲ ಗಣ್ಯರಿಗೆ ಸಂತಾಪ ಕೋರಿ ಕಲಾಪ ಮುಂದಕ್ಕೆ ಹಾಕಿದ್ದು ಹಾಗೂ ಕೊನೆಯ ಎರಡು ದಿನಗಳು ಮಾತ್ರ ಸಾಲ ಮನ್ನಾ ವಿಷಯ, ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಉಭಯ ಸದನಗಳಲ್ಲಿ ನಿರಂತರವಾಗಿ ಧರಣಿ ನಡೆಸಿದ ಪರಿಣಾಮ ಕಲಾಪ ನಡೆಯಲಿಲ್ಲ. ಉಳಿದ ದಿನಗಳಲ್ಲಿ ಕಾರ್ಯಕ್ರಮ ಪಟ್ಟಿಯ ಪ್ರಕಾರ ನಡೆಯಿತು. ಹಾಗೆಂದು ಅನೇಕ ಸದಸ್ಯರ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆಗಳು ಕಲಾಪದಲ್ಲಿ ಬರಲೇ ಇಲ್ಲ. ಇದು ಅನೇಕ ಸದಸ್ಯರಿಗೆ ನಿರಾಶೆ ಮೂಡಿಸಿದ್ದು ಮಾತ್ರ ನಿಜ.

ಸದನ ಸುಗಮವಾಗಿ ನಡೆಯಬೇಕು ಎಂಬ ಕಾರಣದಿಂದ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ಆಗಾಗ ಮಾತಿನ ಚಕಮಕಿ, ವಾಗ್ವಾದ ನಡೆಯಿತೇ ಹೊರತು ಕಲಾಪಕ್ಕೆ ಅಡ್ಡಿ ಮಾಡುವಂತಹ ಪ್ರಸಂಗಗಳು ಕಡಿಮೆ ಇತ್ತು.

ವಿಧಾನಸಭೆಯಲ್ಲಿ ಬರದ ಕುರಿತು ದೀರ್ಘವಾದ ಚರ್ಚೆ ನಡೆಯಿತು. ಇದಕ್ಕೆ ಮುಖ್ಯಮಂತ್ರಿ ಸೇರಿದಂತೆ ಐವರು ಸಚಿವರು ಅಷ್ಟೇ ದೀರ್ಘವಾಗಿ ಉತ್ತರಿಸಿದ್ದು ಗಮನಾರ್ಹ, ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತಾದರೂ ಸರ್ಕಾರದಿಂದ ನಿರೀಕ್ಷಿತ ಉತ್ತರ ಸಿಗಲಿಲ್ಲ. ಇನ್ನೂ ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಲು ಉಳಿದೆಲ್ಲ ಕಲಾಪ ರದ್ದು ಮಾಡಿ ಅವಕಾಶ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಎರಡು ದಿನ ಧರಣಿ ನಡೆಸಿದರೂ, ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ಕೊನೆಯ ಎರಡು ದಿನ ಕಲಾಪ ನಡೆಯಲಿಲ್ಲ.

ಅಧಿಕಾರ ಸ್ವೀಕಾರ:  ಅಧಿವೇಶನದ ಮತ್ತೊಂದು ವಿಶೇಷತೆ ಎಂದರೆ ವಿಧಾನ ಪರಿಷತ್‌ ಸಭಾಪತಿಯಾಗಿ ಕೆ. ಪ್ರತಾಪಚಂದ್ರಶೆಟ್ಟಿ, ಉಪಸಭಾಪತಿಯಾಗಿ ಎಸ್‌.ಎಲ್‌. ಧರ್ಮೆಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಳಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಒಂಬತ್ತು ಪ್ರಮುಖ ಕಚೇರಿಗಳನ್ನು ಸ್ಥಳಾಂತರ ಮಾಡುವ ನಿರ್ಧಾರವನ್ನು ಸಚಿವ ಸಂಪುಟ ತೆಗೆದುಕೊಂಡಿತಾದರೂ ಈ ಬಗ್ಗೆ ಅಧಿಕೃತ ಹೇಳಿಕೆ ಸರ್ಕಾರದಿಂದ ಬರಲಿಲ್ಲ.

ವಿಧೇಯಕಗಳ ಅಂಗೀಕಾರ:  ವಿಧಾನಸಭೆಯಲ್ಲಿ ಒಟ್ಟು 3,060 ಪ್ರಶ್ನೆಗಳನ್ನು ಪಡೆಯಲಾಗಿದ್ದರೆ, ಸದನದಲ್ಲೇ ಉತ್ತರಿಸುವ 150 ಪ್ರಶ್ನೆಗಳ ಪೈಕಿ 146ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2,217 ಪ್ರಶ್ನೆಗಳ ಪೈಕಿ 1,978 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. 12 ವಿಧೇಯಕಗಳನ್ನು ಮಂಡಿಸಿ ಅವುಗಳನ್ನು ಎಂಟು ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಇವುಗಳಲ್ಲಿ ಪ್ರಮುಖವೆಂದರೆ ರೈ ತಾಂತ್ರಿಕ ವಿವಿ ವಿಧೇಯಕ, ಕರ್ನಾಟಕ ಸಿವಿಲ್‌ ಸೇವೆಗಳ ನೇಮಕಾತಿ ವಿಧೇಯಕ, ಕರ್ನಾಟಕ ವಿಧಾನ ಮಂಡಳ ಅನರ್ಹತಾ ನಿರ್ವಾಹಣಾ ತಿದ್ದುಪಡಿ ವಿಧೇಯಕಗಳಾಗಿವೆ.

ಕಲಾಪಕ್ಕೆ ತಟ್ಟದ ಪ್ರತಿಭಟನೆ ಕಾವು:  ಸರ್ಕಾರವೇ ಬೆಳಗಾವಿಗೆ ಬಂದಿರುವುದರಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಒಟ್ಟಾರೆ 60ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಧರಣಿ ನಡೆಸಿದ್ದು ವಿಶೇಷ. ಈ ಹಿಂದಿನ ಅಧಿವೇಶನದ ವೇಳೆ ಕಬ್ಬು ಬೆಳೆಗಾರರ ಪ್ರತಿಭಟನೆ ಅಧಿವೇಶನಕ್ಕೆ ಸಾಕಷ್ಟುಚುರುಕು ಮುಟ್ಟಿಸುತ್ತಿತ್ತು. ಆದರೆ ಈ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರಂಭದಲ್ಲೇ ವಿವಿಧ ರೈತ ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಪ್ರತಿಭಟನೆ ಕಾವು ಕಡಿಮೆ ಮಾಡಿದ್ದರು, ಅದೇ ರೀತಿ ಪ್ರತಿ ದಿನ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ಮಾಡಿದ್ದರಿಂದ ಅಧಿವೇಶನದ ಕಲಾಪ ಬಿಸಿ ತಟ್ಟಲಿಲ್ಲ.

Follow Us:
Download App:
  • android
  • ios