ಕಲ್ಲಿದ್ದಲು ದಾಸ್ತಾನು ಕೊರತೆಯಿಂದ ಪ್ರಸ್ತುತ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಮೇಲೆ ಪರಿಣಾಮ ಆಗುವುದಿಲ್ಲ. ಮಳೆಗಾಲ ಮುಗಿದ ಬಳಿಕ ತೊಂದರೆ ಎದುರಾಗುವ ಸಾಧ್ಯತೆಯಿದೆ.

ಬೆಂಗಳೂರು(ಅ.24):ಇಂಧನ ಇಲಾಖೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 'ಕಲ್ಲಿದ್ದಲು ತುರ್ತು ಪರಿಸ್ಥಿತಿ' ಘೋಷಿಸಿದ್ದಾರೆ. ಸಾಗಣೆ ಜಾಲದ ತೊಡಕಿನಿಂದ ರಾಜ್ಯದಲ್ಲಿ ಕಲ್ಲಿದ್ದಲು ದಾಸ್ತಾನು ಕರಗಿದ್ದು ಕೇವಲ ಅರ್ಧ ದಿನಕ್ಕಾಗುವಷ್ಟು ಮಾತ್ರ ಸಂಗ್ರಹವಿದೆ ಈ ಕಾರಣದಿಂದ ಯಾವುದೇ ವಿಧಾನದಲ್ಲಿ ಕಲ್ಲಿದ್ದಲು ಸಾಗಣೆಗೆ ಸರಕಾರ ಅವಕಾಶ ಕಲ್ಪಿಸಿದೆ.

ಸುದ್ದಿಗಾರರೊಂದಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕಲ್ಲಿದ್ದಲು ದಾಸ್ತಾನು ಕೊರತೆಯಿಂದ ಪ್ರಸ್ತುತ ರಾಜ್ಯದ ವಿದ್ಯುತ್‌ ಪರಿಸ್ಥಿತಿ ಮೇಲೆ ಪರಿಣಾಮ ಆಗುವುದಿಲ್ಲ. ಮಳೆಗಾಲ ಮುಗಿದ ಬಳಿಕ ತೊಂದರೆ ಎದುರಾಗುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ ಕಲ್ಲಿದ್ದಲು ಸಾಗಣೆಯನ್ನು ಯಾವುದೇ ವಿಧಾನದಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಪಾರದರ್ಶಕ ಕಾಯಿದೆಯಿಂದ (ಕೆಟಿಟಿಪಿ) ವಿನಾಯಿತಿ ಪಡೆಯಲು ಈ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ'ಎಂದು ತಿಳಿಸಿದ್ದಾರೆ.

 'ಕೋಲ್‌ ಬ್ಲಾಕ್‌ ವಿವಾದ ಇತ್ಯರ್ಥವಾಗದ ಕಾರಣ ಹಾಗೂ ಸಾಗಣೆ ಲಿಂಕೇಜ್‌ ಸಮಸ್ಯೆಯಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ. ಈ ಬಗ್ಗೆ ಸಿಎಂ ಜೊತೆಗೂಡಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೇರೆ ಮಾರ್ಗದಲ್ಲಿ ಕಲ್ಲಿದ್ದಲು ಪೂರೈಸಲು ಒತ್ತಡ ಹೇರಿದ್ದೇವೆ. ರೈಲು ಮತ್ತು ರಸ್ತೆ ಎರಡೂ ಮಾರ್ಗಗಳಲ್ಲಿ ಕಲ್ಲಿದ್ದಲು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ' ಎಂದು ಹೇಳಿದ್ದಾರೆ.