Asianet Suvarna News Asianet Suvarna News

ಆಪ್‌ನ ಮೆಟ್ರೋ, ಬಸ್‌ ಉಚಿತ ಪ್ರಯಾಣದ ಗುಟ್ಟೇನು?

ಎಎಪಿ ದೆಹಲಿ ಮೆಟ್ರೋ ರೈಲಿನಲ್ಲಿ ಮತ್ತು ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದೆ. ಈ ಮೂಲಕ ದೊಡ್ಡದಾಗಿ ಯೋಚಿಸುವ, ದಿಟ್ಟಕ್ರಮಗಳನ್ನು ತೆಗೆದುಕೊಳ್ಳುವ ತನ್ನ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದೆ.

The secret Behind the Free Metro And Bus Service By Aam Aadmi Party
Author
Bangalore, First Published Jun 7, 2019, 12:02 PM IST

-ಸಬಾ ನಕ್ವಿ, ಹಿರಿಯ ಪತ್ರಕರ್ತೆ

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ವಿರೋಧಿ ಬಣ ನಾಮಾವಶೇಷಗೊಳ್ಳುವ ಹಂತ ತಲುಪಿದೆ. ಕಾಂಗ್ರೆಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ. ಇನ್ನು ಬಹುಜನ ಸಮಾಜವಾದಿ ಪಕ್ಷ ಎಷ್ಟುಬೇಗ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಕಡಿದುಕೊಂಡಿತು ಎಂದರೆ, ಇಷ್ಟುದಿನ ಪ್ರಧಾನಿಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದ ಮಾಯಾವತಿ ಈಗ ಜೈಲುವಾಸ ತಪ್ಪಿಸಿಕೊಳ್ಳಲು ತಂತ್ರ ಹಣೆಯುತ್ತಿದ್ದಾರೆ.

ಸೋತರೂ ಕುಂದದ ಆಪ್‌ ಶಕ್ತಿ

ಬಿಜೆಪಿಯ ವಿಸ್ಮಯಕಾರಿ, ಮಿಂಚಿನ ದಾಳಿ ಉತ್ತರದ ಎಲ್ಲಾ ವಿರೋಧ ಪಕ್ಷಗಳನ್ನು ಆಘಾತಕ್ಕೆ ದೂಡಿದೆ. ಇದರ ನಡುವಲ್ಲಿ ಇನ್ನೂ ಹೋರಾಡುವ ಶಕ್ತಿ ಇದೆ ಎಂಬ ಸಂದೇಶ ರವಾನಿಸುತ್ತಿರುವ ಒಂದೇ ಒಂದು ಪಕ್ಷ ಆಮ್‌ ಆದ್ಮಿ ಪಾರ್ಟಿ (ಎಎಪಿ). ದೆಹಲಿ ಲೋಕಸಭಾ ಚುನಾವಣೆಯಲ್ಲಿ ವೋಟ್‌ ಶೇರ್‌ನಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದರೂ, ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗದಿದ್ದರೂ ಪಕ್ಷವು ಕೆಳಗೆ ಬೀಳಲು ಅಥವಾ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲ. ಅದಕ್ಕಾಗಿಯೇ ದೆಹಲಿ ಮೆಟ್ರೋ ರೈಲಿನಲ್ಲಿ ಮತ್ತು ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ಎಂದು ಘೋಷಿಸಿದೆ. ಈ ಮೂಲಕ ದೊಡ್ಡದಾಗಿ ಯೋಚಿಸುವ, ದಿಟ್ಟಕ್ರಮಗಳನ್ನು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯ ಕುಗ್ಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದೆ.

2014, 2015ರ ಫಲಿತಾಂಶ ರಿಪೀಟ್‌?

ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೊನೆಗೂ ಆಪ್‌ ತನ್ನಲ್ಲಿರುವ ಮಿತ ಸಂಪನ್ಮೂಲದಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ. ಮೆಟ್ರೋ ಅಥವಾ ಬಸ್ಸಿನಲ್ಲಿ ಹಣ ಕೊಟ್ಟು ಓಡಾಡಲು ಸಾಮರ್ಥ್ಯ ಇರುವವರು ಸ್ವಯಂಪ್ರೇರಿತರಾಗಿ ಈ ಅನುಕೂಲವನ್ನು ಪಡೆದುಕೊಳ್ಳದೇ ಇರಬಹುದೆಂದು ಹೇಳಿದೆ. ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌ನ ಚುನಾವಣೋತ್ತರ ಸಮೀಕ್ಷೆಯು ದೆಹಲಿ ಸರ್ಕಾರದ ಕಾರ‍್ಯವೈಖರಿ ಬಗ್ಗೆ ಜನರಲ್ಲಿ ಹೆಚ್ಚು ತೃಪ್ತಿ ಇದೆ ಎಂದು ಹೇಳಿದೆ. 2014 ಮತ್ತು 2015ರ ಚುನಾವಣೆಗಳಂತೆ, ದೆಹಲಿ ಮತದಾರರು ಲೋಕಸಭೆ ಚುನಾವಣೆಯಲ್ಲಿ ಆಪ್‌ನ ಪರವಾಗಿಯೇ ನಿಲ್ಲುತ್ತಾರೆ ಎಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಹಾಗಾಗಿಲ್ಲ. ಈಗ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವಸಾನದ ಅಂಚಿನಲ್ಲಿರುವ ವ್ಯಕ್ತಿಯೊಂದಿಗೆ ಸಂಬಂಧವನ್ನೂ ತ್ಯಜಿಸಿದ್ದಾರೆ. ಅರವಿಂದ ಕೇಜ್ರಿವಾಲ್‌ ಅವರು ಪಕ್ಷದ ತಂತ್ರಗಾರಿಕೆಯಲ್ಲಿ ಎಲ್ಲಿ ತಪ್ಪುಗಳಿವೆ ಎಂದು ಗುರುತಿಸಿದ ತರುವಾಯವೇ ಆಂತರಿಕ ಸಭೆ ಕರೆದು ತಪ್ಪುಗಳನ್ನು ಮನದಟ್ಟು ಮಾಡಿಕೊಡುತ್ತಾರಂತೆ. ಅಲ್ಲದೆ ಪಕ್ಷದೊಳಗೇ ವಿಮರ್ಶಕರೂ, ಕೇಳುಗರೂ ಇದ್ದಾರೆ. ಅವರೆಲ್ಲಾ ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೇವಲ 6 ತಿಂಗಳು ಬಾಕಿ ಇರುವಾಗ ವಾಸ್ತವ ಚಿತ್ರಣವನ್ನು ಬೂತ್‌ಮಟ್ಟದಿಂದ ಸೂಕ್ಷ್ಮವಾಗಿ ಗಮನಿಸಿ, ನಿರುತ್ಸಾಹದಿಂದ ಹೊರಬಂದು ತಂತ್ರಗಾರಿಕೆಯನ್ನು ಚುರುಕುಗೊಳಿಸಬೇಕೆಂಬ ಸಲಹೆ ನೀಡಿದ್ದಾರಂತೆ.

ಫ್ರೀ ರೈಡ್‌ನಿಂದ ಎಎಪಿಗೆ ಜನಪ್ರಿಯತೆ

ರಾಜಕೀಯ ಪಂಡಿತರ ಪ್ರಕಾರ ಲೋಕಸಭೆಯ ಜನಾದೇಶಕ್ಕೆ ಮೋದಿ ಅವರ ಯೋಜನೆಗಳು ಮತ್ತು ಮತ್ತವರ ಕೊಡುಗೆಗಳು ಕಾರಣವಿರಬಹುದು. ಇದು ನಿಜವೇ ಆಗಿದ್ದರೆ ಮತ್ತು ಜಾತಿ, ಮತಕ್ಕಿಂತ ಸರ್ಕಾರ ಮಾಡಿದ ಜನೋಪಕಾರಿ ಕಾರ‍್ಯಗಳೇ ಚುನಾವಣೆಗಳಲ್ಲಿ ಪ್ರಮುಖವಾಗಿದ್ದಲ್ಲಿ ಎಎಪಿಗೆ ಅದು ಧನಾತ್ಮಕವಾಗಲಿದೆ. ಎಎಪಿ ಸರ್ಕಾರ ನೀಡಿರುವ ವಿದ್ಯುತ್‌ ಮತ್ತು ನೀರು ಸಬ್ಸಿಡಿ ದೆಹಲಿ ಜನರಲ್ಲಿ ಅಭಿಮಾನ ಮೂಡಿಸಿದೆ. ಅದರ ಶೈಕ್ಷಣಿಕ ಮತ್ತು ಆರೋಗ್ಯ ಸುಧಾರಣೆಗಳು ಜನರ ಮೆಚ್ಚುಗೆ ಪಡೆದಿವೆ. ಒಂದು ವೇಳೆ ಚುನಾವಣೆ ನಡೆಯುವ ವೇಳೆಯಲ್ಲಿ ಮಹಿಳೆಯರು ಉಚಿತವಾಗಿ ಮೆಟ್ರೋ ಮತ್ತು ಬಸ್ಸುಗಳಲ್ಲಿ ಪ್ರಯಾಣಿಸಿದರೆ ನಿಸ್ಸಂದೇಹವಾಗಿ ಅದು ಎಎಪಿಗೆ ಜನಪ್ರಿಯತೆಯನ್ನು ತಂದುಕೊಡುತ್ತದೆ.

ಹಾಗಿದ್ದರೆ ಯಾವುದು ನಿರೀಕ್ಷೆಗಳನ್ನು ತಲೆಕೆಳಗು ಮಾಡಬಹುದು? ವಿರೋಧ ಪಕ್ಷಗಳ ಯಾವ ಗುಣ ಎಎಪಿಯನ್ನು ಮಣಿಸಬಹುದು? ಮೊದಲನೆಯದಾಗಿ ದೆಹಲಿಯಲ್ಲಿ ಕಾಂಗ್ರೆಸ್‌ ವೋಟ್‌ಶೇರ್‌ ಹೆಚ್ಚಾಗಿದೆ. ಮುಸ್ಲಿಂ ಮತಗಳು ಕಾಂಗ್ರೆಸ್‌ಗೆ ವರ್ಗಾವಣೆಯಾಗಿವೆ ಎಂದು ಕೇಜ್ರಿವಾಲ್‌ ಬಹಿರಂಗವಾಗಿಯೇ ಹೇಳಿದ್ದಾರೆ. ಸಂದರ್ಭಕ್ಕೆ ಸೂಕ್ತವಲ್ಲದ ಮುಖ್ಯಮಂತ್ರಿಗಳ ಈ ಹೇಳಿಕೆಯೇ ಅವರಿಗೆ ಮುಳುವಾಗಬಹುದು. ಎಲ್ಲಾ ಸಮುದಾಯದ ಮತಗಳೂ ಬಿಜೆಪಿಗೂ ವರ್ಗಾವಣೆಯಾಗಿರುವುದು ಸ್ಪಷ್ಟವಾಗಿರುವಾಗ ಮುಸ್ಲಿಂ ಸಮುದಾಯಗಳು ಎಂದು ಮಾತ್ರ ಉಲ್ಲೇಖಿಸಿದ್ದೇಕೆ? ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೇ ಜನರು ಮತ ನೀಡಿ ಗೆಲ್ಲಿಸಬಹುದು. ಅತಿ ಹೆಚ್ಚು ಪ್ರಮಾಣದಲ್ಲಿರುವ ಮುಸ್ಲಿಂ ಮತಗಳು ಮತ್ತೆ ಎಎಪಿಯೆಡೆಗೆ ಕ್ರೋಡೀಕರಣಗೊಂಡರೆ ಅದು ಖಂಡಿತ ಸಾಧ್ಯ.

ಬಿಜೆಪಿ v/s ಎಎಪಿ ಮಾತ್ರ

ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಎಎಪಿ ಮತ್ತು ಬಿಜೆಪಿ ಎರಡರ ನಡುವಣ ಕದನ ಮಾತ್ರ ಇದ್ದಂತೆ ಕಾಣುತ್ತದೆ. ಏಕೆಂದರೆ ಕಾಂಗ್ರೆಸ್‌ ಈಗಾಗಲೇ ಮೂರನೇ ಪಕ್ಷವಾಗಿ ಹಿಂದಕ್ಕೆ ಸರಿದಿದೆ. ರಾಷ್ಟ್ರಮಟ್ಟದಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌ನಲ್ಲಿ ಎಎಪಿ ತೋರಿಸುತ್ತಿರುವ ಆತ್ಮವಿಶ್ವಾಸ, ಫೈಟಿಂಗ್‌ ಸ್ಪಿರಿಟ್‌ ಯಾವುದೂ ಕಾಣುತ್ತಿಲ್ಲ. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಕೆಲ ಅನುಕೂಲಗಳೊಂದಿಗೆ ಕಾದಾಟಕ್ಕೆ ಇಳಿದಿದೆ. ಬಹುಶಃ ಸದ್ಯ ಸಂಸದರಾಗಿರುವ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಮನೋಜ್‌ ತಿವಾರಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಡೆಮಾಗ್ರಫಿಕ್‌ ಬದಲಾವಣೆ ಬಳಿಕ ದೆಹಲಿಯಲ್ಲಿ ಪೂರ್ವಾಂಚಲಿಗಳು (ಬಿಹಾರ ಮತ್ತು ಉತ್ತರಪ್ರದೇಶದಿಂದ ಬಂದ ವಲಸಿಗರು) ಎಂಬ ದೊಡ್ಡ ಬಣ ಸೃಷ್ಟಿಯಾಗಿದೆ. ತಿವಾರಿ ಕೂಡ ಪೂರ್ವಾಂಚಲಿ. 2015ರಲ್ಲಿ ಹೊರಗಿನವರಾದ ಕಿರಣ್‌ ಬೇಡಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು.

2014ರಿಂದ ಈಚೆಗೆ ಬಿಜೆಪಿ ತಳಮಟ್ಟದ ಮತಗಳ ಕ್ರೋಡೀಕರಣದಲ್ಲಿ ಹೆಚ್ಚು ಶ್ರಮವಹಿಸುತ್ತಿದೆ. 2014ರಲ್ಲಿ ರಾಷ್ಟ್ರದಾದ್ಯಂತ ಗೆದ್ದಿದ್ದ ಮೋದಿಗೆ 2015ರಲ್ಲಿ ಎಎಪಿ ಕ್ಲೀನ್‌ ಸ್ವೀಪ್‌ ಮಾಡಿದ್ದು ತೇಜೋವಧೆ ಮಾಡಿದಂತಾಗಿತ್ತು. ಮುಂದಿನ ಚುನಾವಣೆಯು ದ್ವೇಷಮಯವಾಗಿರಲಿದೆ ಎಂಬ ಅಂಶಗಳು ನಿಸ್ಸಂದೇಹವಾಗಿ ಗೋಚರಿಸುತ್ತಿವೆ.

ಏನಾದರೂ ಆಗಬಹುದು. ಆದರೆ ದೆಹಲಿಯಲ್ಲೊಂದು ತೀವ್ರ ಹಣಾಹಣಿ ನಡೆಯುವುದಂತೂ ಖಚಿತ. 2019ರಲ್ಲಿ ಅಭೂತಪೂರ್ವ ಜಯ ಗಳಿಸಿರುವ ಬಿಜೆಪಿಗೆ ಇದು ಮೊದಲ ಪ್ರತಿಷ್ಠೆಯ ಕಣ. ಇದೇ ಅಕ್ಟೋಬರ್‌ನಲ್ಲಿ ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅವರೆಡರಲ್ಲೂ ಬಿಜೆಪಿ ಸುಲಭ ಜಯ ಸಾಧಿಸಬಹುದು. ಆದರೆ ದೆಹಲಿಯಲ್ಲಿ ಸೋಲುಂಡರೂ ಬಗ್ಗದ, ಬಲಿಷ್ಠವಾಗಿರುವ ಎದುರಾಳಿಯನ್ನು ಎದುರಿಸಬೇಕು.

Follow Us:
Download App:
  • android
  • ios