ಮಂಗಳೂರು(ಸೆ.16): ಮಂಗಳೂರಿನಲ್ಲಿ ಬೃಹತ್ ತೈಲ ಸಂಸ್ಕರಣ ಘಟಕ ಎಂಆರ್ಪಿಎಲ್ ವಿರುದ್ಧ ಹೋರಾಟ ನಡೆಸಿದ ಗ್ರಾಮಸ್ಥರಿಗೆ ಈಗ ರೌಡಿಶೀಟರ್ ಪಟ್ಟ ಕಟ್ಟಲಾಗಿದೆ. ಹೌದು ಅಚ್ಚರಿ ಆದರೂ ಸತ್ಯ.
ಎಂಆರ್ಪಿಎಲ್ನ ಕೋಕ್ ಮತ್ತು ಸಲ್ಫರ್ ಘಟಕದ ವಿರುದ್ಧ, ಎರಡು ವರ್ಷ ಸತತ ಮುಂಚೂಣಿ ಹೋರಾಟ ನಡೆಸಿದ ನಾಲ್ವರನ್ನು ಸುರತ್ಕಲ್ ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಎಂಆರ್ಪಿಎಲ್ ಹೋರಾಟದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ, ಒಂದೇ ಒಂದು ಬಸ್ ಕಲ್ಲು ಒಡೆದಿಲ್ಲ, ಯಾರೊಬ್ಬರಿಗೂ ಹಲ್ಲೆಯಾಗಿಲ್ಲ, ರಕ್ತ ಹರಿದಿಲ್ಲ. ಆದರೂ ದೊಂಬಿ, ಗಲಭೆ ಪ್ರಚೋದನೆ ಮಾಡಿದ್ದಾರೆ ಎಂದು ಹೋರಾಟಗಾರರು ದೂರಿದ್ದಾರೆ.
ಅದೂ ಅಲ್ಲದೆ ಸಂತ್ರಸ್ತ ಹೋರಾಟಗಾರರು ಸ್ಥಳೀಯ ಗ್ರಾಮ ಮತ್ತು ತಾಲೂಕು ಪಂಚಾಯತ್ ಸದಸ್ಯರಾಗಿದ್ದು, ಸಾಮಾಜಿಕ ಸೇವೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾಲಿನ್ಯ ನಿಯಂತ್ರಣ ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರತಿಭಟನೆ ನಡೆದಿರುವುದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಾದರೂ ಸುರತ್ಕಲ್ ಇನ್ಸ್ಪೆಕ್ಟರ್ ಚೆಲುವರಾಜು ಬೃಹತ್ ಕಂಪೆನಿಯ ಪ್ರಭಾವಕ್ಕೊಳಗಾಗಿ ಈ ಕೃತ್ಯ ನಡೆಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
