Asianet Suvarna News Asianet Suvarna News

ಊರಿನ ಹೆಸರೇಕೆ ಬದಲಾಗುತ್ತದೆ?: ಇಲ್ಲಿದೆ ಕುತೂಹಲಕಾರಿ ವಿಚಾರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ರಾಮಜನ್ಮಭೂಮಿ ಇರುವ ಫೈಜಾಬಾದ್‌ ಜಿಲ್ಲೆಯ ಹೆಸರನ್ನು ಅಯೋಧ್ಯೆ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯ ಅಥವಾ ನಗರಗಳಿಗೆ ಮರುನಾಮಕರಣ ಮಾಡುವುದು ಹೊಸದೇನಲ್ಲ. ಈ ಹಿಂದೆಯೂ ಹಲವಾರು ರಾಜ್ಯಗಳು, ಮಹಾನಗರಗಳು, ಕೆಲವು ದೇಶಗಳೂ ಮರುನಾಮಕರಣಗೊಂಡಿವೆ. ಆದರೆ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿಯಾದಾಗಿನಿಂದ ಮರುನಾಮಕರಣ ಎಂಬ ಹೆಸರು ಪದೇ ಪದೇ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಈವರೆಗೆ ಮರುನಾಮಕರಣ ಮಾಡಿದ ಸ್ಥಳಗಳು ಯಾವುವು? ಸ್ಥಳಗಳ ಮರುನಾಮಕರಣದಿಂದ ಜನರಿಗೇನು ಉಪಯೋಗ? ಯಾಕೆ ಹೆಸರು ಬದಲಾವಣೆ ಮುನ್ನೆಲೆಗೆ ಬರುತ್ತಿದೆ ಇತ್ಯಾದಿ ವಿವರ ಇಲ್ಲಿದೆ.

The Reason Why The Name Of The City Changes
Author
New Delhi, First Published Nov 10, 2018, 12:57 PM IST

ಯೋಗಿ ಮುಖ್ಯಮಂತ್ರಿಯಾದ ಬಳಿಕ ನಡೆದ ಮರುನಾಮಕರಣ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ಥಳಗಳ, ರೈಲು ನಿಲ್ದಾಣಗಳ, ವಿಮಾನ ನಿಲ್ದಾಣಗಳ ಮರುನಾಮಕರಣ ಕಾರ್ಯಕ್ಕೆ ಚಾಲನೆ ಬಂತು. ಅದರ ಭಾಗವಾಗಿ ಮೊಟ್ಟಮೊದಲ ಬಾರಿಗೆ ಮುಘಲ್‌ಸರೈ ರೈಲು ನಿಲ್ದಾಣಕ್ಕೆ ದೀನದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ಹೆಸರಿಡಲು ತೀರ್ಮಾನಿಸಿದರು. ಇತ್ತೀಚೆಗೆ ಅಲಹಾಬಾದ್‌ ನಗರವನ್ನು ಪ್ರಯಾಗರಾಜ್‌ ಎಂದು ಕರೆಯಲು ಸಂಪುಟ ಅನುಮೋದಿಸಿದೆ. ಅದಲ್ಲದೆ ಬರೇಲಿ ವಿಮಾನ ನಿಲ್ದಾಣವನ್ನು ನಾಥ್‌ ನಗ್ರಿ ಎಂದು, ಆಗ್ರಾ ವಿಮಾನ ನಿಲ್ದಾಣವನ್ನು ದೀನದಯಾಳ್‌ ಉಪಾಧ್ಯಾಯ್‌ ವಿಮಾನ ನಿಲ್ದಾಣವೆಂದು, ಕಾನ್ಪುರ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಗಣೇಶ್‌ ಶಂಕರ್‌ ವಿದ್ಯಾರ್ಥಿ ವಿಮಾನ ನಿಲ್ದಾಣ ಎಂದು ಹೆಸರಿಡಲು ಚಿಂತಿಸಲಾಗುತ್ತದೆ.

ಯೋಗಿ ಸಂಸದರಾಗಿದ್ದಾಗಲೂ ಹೆಸರು ಬದಲಿಸುತ್ತಿದ್ದರು!

ಯೋಗಿ ಆದಿತ್ಯನಾಥ್‌ ಗೋರಖ್‌ಪುರದ ಸಂಸದರಾದಾಗಿನಿಂದಲೂ (1998ರಿಂದ) ಸ್ಥಳಗಳಿಗೆ ಮರುನಾಮಕರಣ ಮಾಡಿ ಘೋಷಿಸುವ ಹವ್ಯಾಸ ಹೊಂದಿದ್ದರು. ಆ ವೇಳೆಯಲ್ಲಿ ಉರ್ದು ಬಜಾರ್‌ ಅನ್ನು ಹಿಂದಿ ಬಜಾರ್‌ ಆಗಿ, ಹುಮಾಯೂನ್‌ಪುರವನ್ನು ಹನುಮಾನ್‌ ನಗರವನ್ನಾಗಿ, ಇಸ್ಲಾಂಪುರವನ್ನು ಈಶ್ವರಪುರವನ್ನಾಗಿ, ಮಾಯಿನ್‌ ಬಜಾರ್‌ ಅನ್ನು ಮಾಯಾ ಬಜಾರ್‌ ಎಂದು ಮತ್ತು ಆಲಿ ನಗರವನ್ನು ಆರ್ಯ ನಗರ ಎಂದು ಮರುನಾಮಕರಣ ಮಾಡಿದ್ದರು. ಈ ನೂತನ ಹೆಸರುಗಳು ಅಧಿಕೃತವಾಗಿಲ್ಲ. ಆದರೆ ಪ್ರಚಾರ ಕಾರ್ಯಕ್ರಮಗಳಲ್ಲಿ ಯೋಗಿ ಆದಿತ್ಯನಾಥ ಮತ್ತು ಅವರ ಬೆಂಬಲಿಗರು ಅದೇ ಹೆಸರುಗಳನ್ನು ಬಳಕೆ ಮಾಡುತ್ತಾರೆ.

ಅಲಹಾಬಾದ್‌ ಹೆಸರು ಬಂದಿದ್ದು ಹೇಗೆ?

ಶತಮಾನಗಳ ಹಿಂದೆ ಅಲಹಾಬಾದ್‌ ಎನ್ನುವ ಹೆಸರೇ ಇರಲಿಲ್ಲ. ಆಗ ಆ ಊರನ್ನು ಕರೆಯುತ್ತಿದ್ದದ್ದೇ ಪ್ರಯಾಗರಾಜ್‌ ಎನ್ನುವ ಹೆಸರಿನಲ್ಲಿ. ಆದರೆ ಕಾಲಕ್ರಮೇಣ ನಮ್ಮ ದೇಶದ ಮೇಲೆ ದಂಡೆತ್ತಿ ಬಂದ ಇಸ್ಲಾಂ ಮೂಲಭೂತವಾದಿ ರಾಜರು ಪ್ರಯಾಗರಾಜ್‌ ಎನ್ನುವ ಹೆಸರನ್ನು ಅಳಿಸಿ ಅಲಹಾಬಾದ್‌ ಎಂದು ಕರೆದರು. ಅದೇ ಹೆಸರು ಇಲ್ಲಿಯತನಕ ಚಾಲ್ತಿಯಲ್ಲಿತ್ತು. ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ ಸ್ಥಳ ಅಲಹಾಬಾದ್‌. ಇದನ್ನು 'ಪ್ರಯಾಗ' ಎಂದು ಕರೆಯಲಾಗುತ್ತದೆ. ಹಾಗಾಗಿ ಈ ಸ್ಥಳ ಇರುವ ಊರು ಪ್ರಯಾಗರಾಜ್‌ ಆಗಿತ್ತು. ಆದರೆ ಮೊಘಲ… ದೊರೆ ಅಕ್ಬರ್‌, ಸಂಗಮ ಸ್ಥಳದಲ್ಲಿದ್ದ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶವನ್ನು ‘ಇಲಹಾಬಾದ್‌’ ಎಂದು ಘೋಷಿಸಿದ. ಅಕ್ಬರ್‌ನ ಮೊಮ್ಮಗ ಷಹಜಹಾನ್‌ ಇಡೀ ನಗರಕ್ಕೆ ಅಲಹಾಬಾದ್‌ ಎಂದು ಮರುನಾಮಕರಣ ಮಾಡಿದ. ಆದರೆ, ನದಿಗಳ ಸಂಗಮ ಸ್ಥಳವನ್ನು ಈಗಲೂ ಪ್ರಯಾಗ ಎಂದೇ ಕರೆಯಲಾಗುತ್ತದೆ ಎಂದು ಕೆಲ ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.

ಫೈಜಾಬಾದ್‌ ಏಕೆ ಅಯೋಧ್ಯೆ ಆಗುತ್ತಿದೆ?

ಉತ್ತರಪ್ರದೇಶದಲ್ಲಿ ಈಗಾಗಲೇ ಅಯೋಧ್ಯೆ ಎಂಬ ನಗರವಿದೆ. ಅದು ಫೈಜಾಬಾದ್‌ನಿಂದ 7 ಕಿ.ಮೀ. ದೂರದಲ್ಲಿದೆ. ಹಿಂದೆ ಅಯೋಧ್ಯೆ ನಿಜಾಮರ ಫೈಜಾಬಾದ್‌ನ ಭಾಗವಾಗಿತ್ತು. 1978ರಲ್ಲಿ ಅಯೋಧ್ಯೆ ಫೈಜಾಬಾದ್‌ನಿಂದ ಬೇರೆಯಾಯಿತು. ನಿಜಾಮರ ಆಳ್ವಿಕೆಗೊಳಪಟ್ಟನಂತರ ಆ ಸ್ಥಳಕ್ಕೆ ಫೈಜಾಬಾದ್‌ ಎಂದು ಹೆಸರಿಡಲಾಗಿದೆ. ಅದರ ಮೂಲ ಹೆಸರು ಅಯೋಧ್ಯೆ ಎಂದೇ ಎಂಬುದು ಕೆಲವರ ತರ್ಕ. ನವಾಬ್‌ ಸಾದತ್‌ ಆಲಿ ಖಾನ್‌ ಕ್ರಿ.ಪೂ.1722ರಲ್ಲಿ ಅಂದರೆ 18ನೇ ಶತಮಾನದಲ್ಲಿ ಫೈಜಾಬಾದ್‌ ಎಂಬ ನೂತನ ನಗರವನ್ನು ಸ್ಥಾಪಿಸಿದ. ಅಲ್ಲಿ ಕೋಟೆ, ಕಟ್ಟಡಗಳನ್ನು ನಿರ್ಮಿಸಿದ. ಅನಂತರದಲ್ಲಿ ಅದು ನಿಜಾಮರ ಪ್ರಮುಖ ನಗರವಾಗಿ ಬೆಳೆಯಿತು ಎಂದು ಕೆಲವೆಡೆ ಉಲ್ಲೇಖವಿದೆ. ಇನ್ನೊಂದು ಕಡೆ ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಅಯೋಧ್ಯೆ ಎಂಬ ಹೆಸರೇ ಇದೆ. ಹೀಗಾಗಿ ಅದಕ್ಕೆ ಮೂಲ ಹೆಸರನ್ನೇ ಇಡುತ್ತೇನೆ ಎಂದು ಯೋಗಿ ಆದಿತ್ಯನಾಥ್‌ ಹೇಳುತ್ತಿದ್ದಾರೆ.

ಮರುನಾಮಕರಣ ಅಗತ್ಯವೇ?

ಭಾರತ 1947ರ ವರೆಗೂ ಬ್ರಿಟಿಷರ ಅಧಿಪತ್ಯಕ್ಕೆ ಒಳಪಟ್ಟಿತ್ತು. ಅದಕ್ಕೂ ಹಿಂದೆ ಮುಸ್ಲಿಂ ಆಕ್ರಮಣಕಾರರ ಆಳ್ವಿಕೆ ಹೊಂದಿತ್ತು. ಭಾರತವನ್ನು ಸುದೀರ್ಘ ಕಾಲ ಆಳ್ವಿಕೆ ಮಾಡಿದ ಮುಸ್ಲಿಂ ಅರಸರು ಮತ್ತು ಬ್ರಿಟಿಷ್‌ ಕಂಪನಿ ಸರ್ಕಾರದ ಅಧಿಕಾರಿಗಳು ತಮ್ಮ ಅವಧಿಯಲ್ಲಿ ಹೊಸದಾಗಿ ನಿರ್ಮಾಣವಾದ ಮಾರ್ಗ, ಉದ್ಯಾನವನ, ಶಾಲೆ, ಕೆರೆ, ಕಟ್ಟೆಮತ್ತು ನಗರಗಳಿಗೆ ತಮ್ಮ ಹೆಸರುಗಳನ್ನು ನಾಮಕರಣ ಮಾಡಿದ್ದುಂಟು. ಹಲವೆಡೆ ಮೂಲ ಹೆಸರನ್ನು ಬದಲಿಸಿದ ನಿದರ್ಶನಗಳೂ ಇವೆ. ಇದೇ ಕಾರಣದಿಂದಾಗಿ ಪ್ರಾದೇಶಿಕತೆ ಮತ್ತು ಸ್ಥಳೀಯತೆ ಸಾರಲು ಭಾರತ ಸ್ವತಂತ್ರವಾದ ಬಳಿಕ ಚೆನ್ನೈ ಸೇರಿದಂತೆ ಹಲವು ನಗರಗಳಿಗೆ ಮರುನಾಮಕರಣ ಮಾಡಲಾಗಿದೆ. ಕರ್ನಾಟಕದಲ್ಲೂ ಇದು ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಬೆಂಗಳೂರು, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ ಎಂದು ಈ ನಗರಗಳ ಹೆಸರನ್ನು ಇಂಗ್ಲಿಷ್‌ನಲ್ಲಿ ಬದಲಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹೆಸರು ಬದಲಾವಣೆಯ ಹಿಂದೆ ರಾಜಕೀಯದ ಆಟವೂ ನಡೆಯುತ್ತಿದೆ.

ಮಾಯಾವತಿ ಇಟ್ಟ ಹೆಸರನ್ನು ಅಖಿಲೇಶ್‌ ಬದಲಿಸಿದ್ದರು!

ಪ್ರದೇಶಗಳು, ಕೆರೆಕಟ್ಟೆಗಳು, ನಿಲ್ದಾಣಗಳಿಗೆ ಮರುನಾಮಕರಣ ಮಾಡಿದ ಹೆಸರುಗಳು ಎಷ್ಟುಕಾಲದವರೆಗೆ ಇರುತ್ತವೆ ಎಂಬುದು ಯಾರಿಗೂ ಗೊತ್ತಿಲ್ಲ. ಏಕೆಂದರೆ ಅದು ರಾಜಕೀಯ ಪಕ್ಷಗಳು, ಅವುಗಳ ಸಿದ್ಧಾಂತದ ಮೇಲೆ ನಿಂತಿರುತ್ತದೆ. ಉದಾಹರಣೆಗೆ 2012ರಲ್ಲಿ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಅಖಿಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷವು, ಹಿಂದೆ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರ ಸರ್ಕಾರವಿದ್ದಾಗ ಮರುನಾಮಕರಣ ಮಾಡಲಾಗಿದ್ದ 8 ಜಿಲ್ಲೆಗಳ ಹೆಸರನ್ನು ಬದಲಾಯಿಸಿತು.

ಮರುನಾಮಕರಣದಿಂದ ಜನರಿಗೇನು ಲಾಭ?

ಮೂಲನಾಮ ಮತ್ತು ಸ್ಥಳೀಯತೆ ಉಳಿಸಿಕೊಳ್ಳಲು ಮರುನಾಮಕರಣ ಮಾಡಲಾಗುತ್ತದೆ. ಹೀಗೆ ನಗರವೊಂದರ ಹೆಸರೇನೋ ಬದಲಿಸುವುದು ಸುಲಭ. ಆದರೆ ಅಲ್ಲಿನ ಸರ್ಕಾರಿ ಕಡತಗಳಲ್ಲಿ ಈ ಬದಲಾವಣೆಯಾಗಲು ತುಂಬ ಸಮಯ ಹಿಡಿಯುತ್ತದೆ. ಪಾಸ್‌ಪೋರ್ಟ್‌, ವೀಸಾ ಪಡೆಯುವ ವೇಳೆ ಜನರ ಅಲೆದಾಟ ಹೇಳತೀರದು. ಶಾಲಾ ದಾಖಲೆಗಳು, ಆಸ್ತಿ ದಾಖಲೆಗಳ ಬದಲಾವಣೆ ಕ್ಲಿಷ್ಟಕರ. ಮೇಲಾಗಿ ಕೆಲವೊಂದು ಸ್ಥಳಗಳ ಹೆಸರುಗಳು ಅಲ್ಲಿನ ಪ್ರಾದೇಶಿಕತೆ, ಸಾಹಿತ್ಯ, ಸಂಸ್ಕೃತಿ, ಬದುಕಿನೊಂದಿಗೆ ಹಾಸು ಹೊಕ್ಕಾಗಿರುತ್ತವೆ. ಆ ಹೆಸರುಗಳು ಜನಮಾನಸದಲ್ಲಿ ಬೇರುಬಿಟ್ಟಿರುತ್ತವೆ. ಅಂತಹ ಸ್ಥಳಗಳ ಹೆಸರು ಬದಲಾವಣೆಯಾದಾಗ ಅದನ್ನು ಜನರು ಒಪ್ಪಿಕೊಳ್ಳಲು ದಶಕಗಳೇ ಬೇಕಾಗುತ್ತದೆ.

-ಕೀರ್ತಿ ತೀರ್ಥಹಳ್ಳಿ

Follow Us:
Download App:
  • android
  • ios