ಬೆಂಗಳೂರು[ಸೆ.13]: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರು ಎನ್ನಿಸಿಕೊಂಡವರು ಇರಲಿಲ್ಲ. ಅಲ್ಲಿ ಭಾಷಣ ಮಾಡಿದ ನಾಯಕರು ಒಕ್ಕಲಿಗರೂ ಅಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಒಕ್ಕಲಿಗ ನಾಯಕರು ಹೋಗಿಲ್ಲ ಅಂದ ಮೇಲೆ ಅದು ಕೇಂದ್ರ ಸರ್ಕಾರದ ವಿರುದ್ಧ ಒಕ್ಕಲಿಗರ ಪ್ರತಿಭಟನೆ ಎನ್ನುವುದೇ ಹಾಸ್ಯಾಸ್ಪದ ವಿಚಾರವಾಗಿದೆ ಎಂದರು.ಶಿವಕುಮಾರ್‌ ಬೆಂಬಲಿಸಿ ಬೆಂಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯಾರೆಡ್ಡಿ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಇವರಾರ‍ಯರೂ ಒಕ್ಕಲಿಗರೇ ಅಲ್ಲ ಎಂದರು.

ಒಕ್ಕಲಿಗರ ಪ್ರಭಾವಿ ನಾಯಕರು ಎನಿಸಿಕೊಂಡವರಾರ‍ಯರೂ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಒಕ್ಕಲಿಗರ ಪ್ರತಿಭಟನೆ ಎಂದು ಹೇಳುವುದು ಹಾಸ್ಯಾಸ್ಪದ ವಿಚಾರವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಶಿವಕುಮಾರ್‌ ಅವರನ್ನು ಬಂಧಿಸಿರುವುದಕ್ಕೆ ಜಾತಿ ಬಣ್ಣ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಸದಾನಂದಗೌಡ, ಸಮಾಜದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ ಅದಕ್ಕೆ ಜಾತಿ ಲೇಪ ಹಚ್ಚಿದರೆ ಜನರು ನೋಡಿ ನಗುತ್ತಾರೆ ಎಂದು ಲೇವಡಿ ಮಾಡಿದರು.