Asianet Suvarna News Asianet Suvarna News

ಬಾರ್ ಬಂದ್: ಬೊಕ್ಕಸಕ್ಕಾಗುವ ನಷ್ಟವೆಷ್ಟು ಗೊತ್ತಾ?

ಹೆದ್ದಾರಿ ಪಕ್ಕದ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚಲು ಸುಪ್ರಿಂಕೋರ್ಟ್‌ ನೀಡಿರುವ ಗಡುವು ಜೂನ್‌ 30ರ ಶುಕ್ರವಾರ ಮಧ್ಯರಾತ್ರಿ ಮುಕ್ತಾಯಗೊಳ್ಳಲಿದ್ದು, ರಾಜ್ಯದ ಸುಮಾರು 2 ಸಾವಿರ ಬಾರ್‌ಗಳ ಲೈಸನ್ಸ್‌ ನವೀಕರಣಗೊಳ್ಳುವುದಿಲ್ಲ. ಇದರ ಪರಿಣಾಮವಾಗಿ ಅಬಕಾರಿ ಆದಾಯದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸರಿಸುಮಾರು 4 ಸಾವಿರ ಕೋಟಿ ರು. ಈ ಬಾರಿ ಖೋತಾ ಆಗಲಿದೆ.

The Loss to the govt by liquor shop bandh
  • Facebook
  • Twitter
  • Whatsapp

ಬೆಂಗಳೂರು(ಜೂ.30): ಹೆದ್ದಾರಿ ಪಕ್ಕದ 500 ಮೀಟರ್‌ ವ್ಯಾಪ್ತಿಯಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚಲು ಸುಪ್ರಿಂಕೋರ್ಟ್‌ ನೀಡಿರುವ ಗಡುವು ಜೂನ್‌ 30ರ ಶುಕ್ರವಾರ ಮಧ್ಯರಾತ್ರಿ ಮುಕ್ತಾಯಗೊಳ್ಳಲಿದ್ದು, ರಾಜ್ಯದ ಸುಮಾರು 2 ಸಾವಿರ ಬಾರ್‌ಗಳ ಲೈಸನ್ಸ್‌ ನವೀಕರಣಗೊಳ್ಳುವುದಿಲ್ಲ. ಇದರ ಪರಿಣಾಮವಾಗಿ ಅಬಕಾರಿ ಆದಾಯದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಸರಿಸುಮಾರು 4 ಸಾವಿರ ಕೋಟಿ ರು. ಈ ಬಾರಿ ಖೋತಾ ಆಗಲಿದೆ.

ರಾಜ್ಯ ಸರ್ಕಾರ ಕಳೆದ ವರ್ಷ ನೀಡಿದ್ದ 10,165 ಬಾರ್‌ ಲೈಸನ್ಸ್‌ಗಳ ಪೈಕಿ ಸರಿಸುಮಾರು 1,981 ಬಾರ್‌ಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿವೆ ಎಂದು ಗುರುತಿಸಿರುವ ಅಬಕಾರಿ ಇಲಾಖೆ, ಈಗಾಗಲೇ ಈ ಎಲ್ಲ ಬಾರ್‌ಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ಲೈಸನ್ಸ್‌ ನವೀಕರಣ ಸಾಧ್ಯವಿಲ್ಲ, ಒಂದು ವೇಳೆ ಲೈಸನ್ಸ್‌ ಬೇಕಾದರೆ ಹೆದ್ದಾರಿ ಪಕ್ಕದಿಂದ ಬೇರೆಡೆಗೆ ಸ್ಥಳಾಂತರಿಸಿ ಎಂದು ತಾಕೀತು ಮಾಡಿದೆ. 

ರಾಜ್ಯದ ಅಬಕಾರಿ ಇಲಾಖೆ ಸರ್ಕಾರದ ಬೊಕ್ಕಸಕ್ಕೆ ಆದಾಯ ತರುವ ಪ್ರಮುಖ ಇಲಾಖೆಗಳ ಪೈಕಿ ಒಂದಾಗಿದೆ. ಅಂದರೆ ಅತಿ ಕಡಿಮೆ ವೆಚ್ಚದ ಮೂಲಕ ಹೆಚ್ಚು ಆದಾಯ ತರುವ ಇಲಾಖೆ ಇದಾಗಿದೆ. 2015-16ರಲ್ಲಿ 15,200 ಕೋಟಿ ರು. ಆದಾಯ ಗಳಿಸಿದ್ದರೆ, 2016-17ನೇ ಸಾಲಿನಲ್ಲಿ 16,510 ಕೋಟಿ ರು.ಗಳ ಆದಾಯ ಪಡೆದಿದೆ. ಈ ವರ್ಷ ಅಂದರೆ, 2017-18ನೇ ಸಾಲಿಗೆ 18,050 ಕೋಟಿ ರು.ಗಳ ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ. 

ಆದರೆ ಪ್ರಸಕ್ತ ವರ್ಷ ಸುಪ್ರಿಂಕೋರ್ಟ್‌ ನೀಡಿದ ಆದೇಶದ ಪರಿಣಾಮ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ 1,600 ಬಾರ್‌ಗಳು ಮತ್ತು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ 1,900 ಬಾರ್‌ಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫಿಕೇಶನ್‌ ಮಾಡುವ ಮೂಲಕ ಅವುಗಳನ್ನು ಸ್ಥಳೀಯ ರಸ್ತೆಗಳಾಗಿ ಸರ್ಕಾರ ಪರಿವರ್ತನೆ ಮಾಡಿದ ಪರಿಣಾಮ 1,600 ಬಾರ್‌ಗಳು ಸದ್ಯಕ್ಕೆ ಮುಚ್ಚುವ ಭೀತಿಯಿಂದ ಪಾರಾಗಿವೆ. ಆದರೆ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ 1,900 ಬಾರ್‌ಗಳ ಡಿನೋಟಿಫಿಕೇಶನ್‌ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇನ್ನೂ ಪೂರ್ಣಗೊಳಿಸದ ಪರಿಣಾಮ ಇವು ಮುಚ್ಚುವುದು ಬಹುತೇಕ ಖಚಿತ. ಹೀಗಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲೇ ಈ ಎಲ್ಲ 1,900 ಬಾರ್‌ಗಳು ಸ್ಥಳಾಂತರಗೊಳ್ಳುವುದು ಅನುಮಾನ. ಹೀಗಾಗಿ ಸರಿಸು​ಮಾರು 10 ಸಾವಿರ ಬಾರ್‌ಗಳ ಪೈಕಿ 2 ಸಾವಿರ ಬಾರ್‌ಗಳು ಮುಚ್ಚುವುದರಿಂದ ಶೇ.25ರಿಂದ ಶೇ.30​ರಷ್ಟುವಹಿವಾಟಿಗೆ ಧಕ್ಕೆ ಆಗಲಿದೆ. ಅಂದರೆ 18 ಸಾವಿರ ಕೋಟಿ ರು.ಗಳ ನಿರೀಕ್ಷಿತ ಆದಾಯದ ಪೈಕಿ ಸುಮಾರು 4 ಸಾವಿರ ಕೋಟಿ ರು.ಗಳ ಆದಾಯ ಖೋತಾ ಆಗಲಿದೆ.

ಪ್ರಸಕ್ತ ವರ್ಷ ಮಾತ್ರ ಸ್ಥಳಾಂತರ ವಿಳಂಬ ಹಾಗೂ ಅಬಕಾರಿ ನೀತಿ-ನಿಯಮಗಳ ಅನುಸಾರ ಬಾರ್‌ಗಳ ರದ್ದತಿಯಿಂದ 4 ಸಾವಿರ ಕೋಟಿ ರು. ನಷ್ಟಆಗಬಹುದು ಎಂದು ಸರ್ಕಾರ ಸಮರ್ಥಿಸಿಕೊಂಡರೂ ಅದಕ್ಕೆ ಪೂರಕವಾಗಿ ಹೊಟೆಲ್‌ ಮತ್ತು ಪ್ರವಾಸೋದ್ಯಮದ ಮೇಲೂ ಇದರ ಪರಿಣಾಮ ಬೀರಲಿದೆ. ಹೊಟೆಲ್‌ ಉದ್ದಿಮೆದಾರರು ಹಾಗೂ ಇದಕ್ಕೆ ಪೂರಕವಾಗಿರುವ ಸೇವಾ ವಲಯಗಳಿಗೆ ಸರಿಸುಮಾರು 10 ಸಾವಿರ ಕೋಟಿ ರು. ನಷ್ಟಉಂಟಾಗಲಿದೆ ಎನ್ನುತ್ತಾರೆ ಹೊಟೆಲ್‌ ಅಸೋಸಿಯೇಶನ್‌ ಪ್ರತಿನಿಧಿ ಕೃಷ್ಣ ಉಚ್ಚಿಲ.

ಅಪಾಯ ಇನ್ನೂ ಇದೆ!

ಒಂದೆಡೆ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‌ ಆದೇಶ ಪರಿಪಾಲನೆ ಮಾಡಲೇಬೇಕಿದೆ. ಮತ್ತೊಂದೆಡೆ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದೆ. ಮೇಲ್ನೊಟಕ್ಕೆ 2 ಸಾವಿರ ಬಾರ್‌ಗಳನ್ನು ಸ್ಥಳಾಂತರ ಮಾಡಿದರೆ ಅಂಥದ್ದೇನೂ ನಷ್ಟವಿಲ್ಲ ಎಂದೇ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಒಂದು ವೇಳೆ ರಾಜ್ಯ ಸಚಿವ ಸಂಪುಟ ಕೈಗೊಂಡ ತೀರ್ಮಾನದಂತೆ ಈಗಾಗಲೇ ಡಿನೋಟಿಫಿಕೇಶನ್‌ ಮಾಡಿರುವ ರಾಜ್ಯ ಹೆದ್ದಾರಿಗಳ ಪಕ್ಕದ 1,600 ಬಾರ್‌ಗಳ ಮೇಲೂ ಸುಪ್ರಿಂಕೋರ್ಟ್‌ ಕೆಂಗಣ್ಣು ಬೀರಿದರೆ ಆಗ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟಬರೋಬ್ಬರಿ 8 ಸಾವಿರ ಕೋಟಿ ರು.ಗಳ ಗಡಿ ದಾಟಲಿದೆ. 

-ಶಿವಕುಮಾರ್ ಮೆಣಸಿನಕಾಯಿ, ಕನ್ನಡಪ್ರಭ

Follow Us:
Download App:
  • android
  • ios