ಚೆನ್ನೈ(ಸೆ.12): ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನಲ್ಲೂ ಹೋರಾಟ ತೀವ್ರಗೊಳ್ಳುತ್ತಿದೆ. ತಮಿಳುನಾಡಿನ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದ್ದು, ಚೆನ್ನೈನಲ್ಲಿ ಕನ್ನಡಿಗರ ಮೇಲೆ ದಾಳಿ ನಡೆಯುತ್ತಿದೆ.

ಕನ್ನಡಿಗರಿಗೆ ಸೇರಿದ ವುಡ್​ಲ್ಯಾಂಡ್​ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಹಾಗೂ ಕಲ್ಲು ತೂರಾಟ ನಡೆಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಅಲ್ಲಿದ್ದ ಕನ್ನಡಿಗರ ಮೇಲೆಯೂ ದಾಳಿ ನಡೆದಿದೆ.

ಅಲ್ಲದೇ ರಾಮನಾಥಪುರಂನಲ್ಲಿ ಬೈಕ್​ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ನಾಗಪಟ್ಟಣಂ, ತಿರುಚ್ಚಿ, ತಾಂಜಾವೂರಿನಲ್ಲೂ ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.