ದೇಶದ್ರೋಹ ಕಾನೂನು ರದ್ದುಗೊಳಿಸುವ ಭರವಸೆ ನೀಡಿದ ಕಾಂಗ್ರೆಸ್| 2019ರ ಲೋಕಸಬೆ ಚುನಾವಣೆಗಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ| ದೇಶದ್ರೋಹ ಅಥವಾ ರಾಜದ್ರೋಹದ ಕಾನೂನು ಎಂದರೇನು?| ದೇಶದ್ರೋಹ ಕಾನೂನಿನ ಇತಿಹಾಸ ಏನು ಹೇಳುತ್ತದೆ?| ಬ್ರಿಟಿಷರ ಕಾಲದ ದೇಶದ್ರೋಹದ ಕಾನುನಿನ ದುರ್ಬಳಿಕೆಯಾಗುತ್ತಿದೆಯೇ?|

ಬೆಂಗಳೂರು(ಏ.03): ಪಕ್ಷ ಅಧಿಕಾರಕ್ಕೆ ಬಂದರೆ ದೇಶದ್ರೋಹ ಕಾನೂನನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಮೂಲಕ ಮತ್ತೊಮ್ಮೆ ದೇಶದ್ರೋಹದ ಕುರಿತಾದ ಕಾನೂನಿನ ಚರ್ಚೆ ಮುನ್ನೆಲೆಗೆ ಬಂದಿದೆ.

ಏನಿದು ದೇಶದ್ರೋಹ ಕಾನೂನು?:

1857ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಭಾರತದ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬ್ರಿಟಿಷ್ ಸರ್ಕಾರ, ಮರುವರ್ಷವೇ ಅಂದರೆ 1858ರಲ್ಲಿ ಬ್ರಿಟಿಷ್ ನ್ಯಾಯಾಲಯಗಳ ಸ್ಥಾಪನೆಗೆ ಅಡಿಪಾಯ ಹಾಕಿತು. ಈ ಮೂಲಕ ಭಾರತದಲ್ಲಿ ಬ್ರಿಟಿಷ್ ಕಾನೂನು ಹಂತ ಹಂತವಾಗಿ ಜಾರಿಯಾಗತೊಡಗಿತು.

ಮುಂದೆ 1860ರಲ್ಲಿ ಭಾರತೀಯ ದಂಡ ಸಂಹಿತೆ(ಐಪಿಸಿ)ಯನ್ನು ಜಾರಿಗೆ ತಂದ ಬ್ರಿಟಿಷ್ ಸರ್ಕಾರ, ತನ್ನ ವಿರುದ್ಧದ ಧ್ವನಿಯನ್ನು ಅಡಗಿಸಲು ಅನೇಕ ಕಾನೂನುಗಳನ್ನು ಜಾರಿಗೆ ತಂದಿತು.

ಅದರಲ್ಲಿ ಅತ್ಯಂತ ಪ್ರಮುಖ ಕಾನೂನೆಂದರೆ ದೇಶದ್ರೋಹ ಅಥವಾ ರಾಜದ್ರೋಹದ ಕಾನೂನು. ಐಪಿಸಿಯಲ್ಲಿ 124(A) ಕಲಂ ಸೇರಿಸಿದ ಬ್ರಿಟಿಷ್ ಸರ್ಕಾರ, ತನ್ನ ವಿರುದ್ಧದ ಧ್ವನಿ ಅಡಗಿಸಲು ಈ ಕಾನೂನನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು.

ಅದರಂತೆ 124(A) ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಯ ಬರಹ, ಭಾಷಣ ಅಥವಾ ಇತರ ವಿಧಾನಗಳು ಸರ್ಕಾರದ ವಿರುದ್ಧ ಧ್ವೇಷ ಅಥವಾ ತಿರಸ್ಕಾರವನ್ನು ಬೆಳೆಸುತ್ತವೆಯೋ ಅಂತಹ ವ್ಯಕ್ತಿಯ ವಿರುದ್ಧ ರಾಜದ್ರೋಹ ಅಥವಾ ದೇಶದ್ರೋಹದ ಆರೋಪ ಹೊರಿಸಿ ತನಿಖೆ ಮಾಡಬಹುದಾಗಿದೆ.

ಇದೇ ಕಾನೂನನ್ನು ಬಳಸಿಯೇ ಮಹಾತ್ಮಾ ಗಾಂಧಿ ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಜೈಲಿಗೆ ಅಟ್ಟಿತ್ತು. ತದನಂತರ ದೇಶ ಸ್ವಾತಂತ್ರ್ಯಗೊಂಡ ನಂತರವೂ ಈ ಕಾನೂನು ಹಾಗೆ ಮುಂದುವರೆಯಿತು. ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಹಲವು ಬಾರಿ ದೇಶದ್ರೋಹದ ಕಾನೂನನ್ನು ಹಲವು ಬಾರಿ ಬಳಸಲಾಗಿದೆ.

ದೇಶದ್ರೋಹದ ಕಾನೂನು ಅತ್ಯಂತ ಪರಿಣಾಮಕಾರಿಯಾಗಿ ಚರ್ಚೆಗೆ ಬಂದಿದ್ದು JNU ವಿದ್ಯಾರ್ಥಿ ಕನ್ಹಯ್ಯಾ ಕುಮಾರ್ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಭಾರತೀಯ ಸರ್ವೋಚ್ಛ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ನೇಣಿಗೇರಿದ್ದ ಅಫ್ಜಲ್ ಗುರು ಪರ ಘೋಷಣೆ ಕೂಗಿದ ಆರೋಪ ಕೇಳಿ ಬಂದಾಗ.

ಈ ಪ್ರಕರಣದಲ್ಲಿ ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರ ಮೇಲೆ ದೇಶದ್ರೋಹದ ಕಾನೂನನ್ನು ಹೊರಿಸಲಾಯಿತು. ಇದಾದ ಬಳಿಕ ದೇಶದ್ರೋಹದ ಕಾನೂನಿನ ಕುರಿತು ದೇಶದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿ ಅತ್ಯಂತ ಮಹತ್ವ ಪಡೆಯಿತು.

ಸುಪ್ರೀಂ ಕೋರ್ಟ್ ವ್ಯಾಖ್ಯಾನ:

ಅಲ್ಲದೇ ದೇಶದ್ರೋಹ ಕಾನೂನಿನ ಕುರಿತು ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ವ್ಯಾಖ್ಯಾನ ನೀಡಿದ್ದು, ಕೇದಾರ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಬಿಹಾರ್ ಪ್ರಕರಣದಲ್ಲಿ ಈ ರೀತಿ ಉಲ್ಲೇಖಿಸಿದೆ.."ಯಾವುದೇ ಭಾಷಣ ಅಥವಾ ಇನ್ಯಾವುದೇ ಚಟುವಟಿಕೆ ದೇಶದ್ರೋಹ ಎನಿಸಿಕೊಳ್ಳಬೇಕೆಂದರೆ ಅದು ಹಿಂಸೆಗೆ ಪ್ರಚೋದನೆ ನೀಡುವಂತಿರಬೇಕು ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಿರಬೇಕು..'

ಇನ್ನು ಬಲವಂತ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ಖಲಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಬಲವಂತ್ ಸಿಂಗ್ ಮೇಲಿನ ಆರೋಪವನ್ನು ತಳ್ಳಿಹಾಕಿತ್ತು. ಅಲ್ಲದೇ ಇದನ್ನು ದೇಶದ್ರೋಹ ಎನ್ನಲು ಬರುವುದಿಲ್ಲ ಎಂದು ತೀರ್ಪು ನೀಡಿತ್ತು.

ಇತರ ದೇಶದ್ರೋಹ ಪ್ರಕರಣಗಳು:

ವಿನಾಯಕ್ ಸೇನ್-2007

ಅರುಂಧತಿ ರಾಯ್-2012

ಅಸೀಮ್ ಚರ್ತುವೇದಿ

ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್

ತಮಿಳುನಾಡು ಜನಪದ ಗಾಯಕ ಗೋವನ್

ಪಾಕಿಸ್ತಾನ ಧ್ವಜ ಹಾರಿಸೋದು ರಾಷ್ಟ್ರದ್ರೋಹವೇ?:

ಇದೆಂತಾ ಪ್ರಶ್ನೆ ಎಂದು ಮೂಗು ಮುರಿಯಬೇಡಿ. ಹೌದು ಸಾರ್ವಭೌಮ ರಾಷ್ಟ್ರವಾದ ಭಾರತದಲ್ಲಿ ಮತ್ತೊಂದು ರಾಷ್ಟ್ರದ ಧ್ವಜ ಹಾರಿಸುವುದು ದೇಶದ್ರೋಹವಾಗುತ್ತದೆ. ಆದರೆ ಅದಕ್ಕೂ ಕೆಲವು ನಿಯಮಗಳಿವೆ ಉದಾ: ಭಾರತದಲ್ಲಿರುವ ಪಾಕ್ ಹೈಕಮಿಷನರ್ ಪಾಕಿಸ್ತಾನ ಸ್ವಾಂತಂತ್ರ್ಯ ದಿನಾಚರಣೆಯಂದು ನವದೆಹಲಿಯಲ್ಲಿರುವ ರಾಯಭಾರ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದರೆ ಅದು ದೇಶದ್ರೋಹವಾಗುವುದಿಲ್ಲ.

ಅದರಂತೆ ಕ್ರೀಡಾ ಸಮಾರಂಭದಲ್ಲಿ ಒಂದು ದೇಶದ ಕ್ರೀಡಾ ಅಭಿಮಾನಿ ಮತ್ತೊಂದು ದೇಶದ ನೆಲದಲ್ಲಿ ತನ್ನ ತಂಡಕ್ಕೆ ಬೆಂಬಲ ನೀಡಲು ಮತ್ತು ತನ್ನ ರಾಷ್ಟ್ರಧ್ವಜ ಹಾರಿಸಲು ಯಾವ ಅಡತಡೆಯೂ ಇಲ್ಲ.