2019 ರದು ಲೋಕಸಭೆ ಚುನಾವಣೆಯಲ್ಲ, ರಾಜಕೀಯ ಯುದ್ಧ!

First Published 29, Jul 2018, 7:04 PM IST
The bugles are calling for war -  T J S George
Highlights

  • ಎಲ್ಲ ವಿರೋಧ ಪಕ್ಷಗಳು, ಪ್ರದೇಶಿಕ ಪಕ್ಷಗಳು ಒಂದಾಗುವ ಚುನಾವಣೆಯಿದು
  • ಸದ್ಯಕ್ಕೆ ಬಿಜೆಪಿಯಿಂದ ಮುಂದಿನ ಚುನಾವಣೆಯಲ್ಲೂ ಮೋದಿಯೇ ಪ್ರಧಾನಿ ಅಭ್ಯರ್ಥಿ  

ಪ್ರತಿಪಕ್ಷಗಳ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ? ಈ ದೊಡ್ಡ ಪ್ರಶ್ನೆಯನ್ನು ಕೊನೆಗೂ ಬಗೆಹರಿಸಲಾಗಿದೆ. ನಿಜ, ಈ ಹಂತದಲ್ಲಿಯೇ ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಅವಾಸ್ತವಿಕ. ಆದರೆ ಅನಿರೀಕ್ಷಿತವಾದ ಹೊಂದಾಣಿಕೆಯ ಮನೋಭಾವ ಕಾಂಗ್ರೆಸ್ಸಿನ ನಿಲುವಿನಲ್ಲಿ ಕಂಡುಬಂದಿದ್ದು ಅದು ಅದರ ಕತೆಯನ್ನು ಹೇಳುತ್ತದೆ. ರಾಹುಲ್ ಗಾಂಧಿಯ ಪರವಾಗಿ ದೃಢವಾದ ನಿಲುವನ್ನು ತಳೆದ ಎರಡು ದಿನಗಳ ತರುವಾಯ, ಯಾರಿಗಾದರೂ ಪಕ್ಷವು ಅವಕಾಶವನ್ನು ಮಾಡಿಕೊಡು ತ್ತದೆ ಎಂದು ಕಾಂಗ್ರೆಸ್ ಹೇಳಿತು.

ಈ ಮೂಲಕ ಅದು ಮೈತ್ರಿಕೂಟವನ್ನು ಹುಟ್ಟುಹಾಕುವುದಕ್ಕೆ ಅವಕಾಶ ಕಲ್ಪಿಸುವವರ ಪಾತ್ರದಲ್ಲಿ ತನ್ನನ್ನು ತಾನು ಕಂಡು ಕೊಂಡಿದೆ. ‘ಆರ್‌ಎಸ್‌ಎಸ್ ಅಲ್ಲದ ಅಭ್ಯರ್ಥಿ’ಯ ನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಲು ಅದು ಸಿದ್ಧವಿದೆ. ಇನ್ನೂ ಹೆಚ್ಚು ತೀವ್ರವೆನಿಸುವಂಥ ನೀತಿಯ ಬದಲಾವಣೆಯನ್ನು ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ. ತಾವು ಕೊಲ್ಕತ್ತಾದಲ್ಲಿ ಜನವರಿಯಲ್ಲಿ ಪ್ರತಿಪಕ್ಷ ಗಳ ಒಂದು  ರಾಲಿಯನ್ನು ಸಂಘಟಿಸುವುದಾಗಿಯೂ, ಅದಕ್ಕೆ ತಮ್ಮ ಕಟ್ಟರ್ ವಿರೋಧಿ, ಯಾರ ವಿರುದ್ಧ ತಾವು ಚುನಾವಣೆಯಲ್ಲಿ ಕಹಿಯಾಗಿ ಹೋರಾಟ ನಡೆಸಿ ಗೆಲುವು ಸಾಧಿಸಿದ್ದರೂ ಅಂಥ ಶತ್ರು  ಸಿಪಿಎಂ ಅನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.

‘ಎಲ್ಲರನ್ನು ಒಳಗೊಂಡ ವಿರೋಧಿ’ ಸಂಘಟನೆಗೆ ಅವರು ಕರೆ ನೀಡಿದ್ದಾರೆ. ಚಂದ್ರಬಾಬು ನಾಯ್ಡು ಅವರು ಒಂದು ಸಂಕೀರ್ಣ ವಿಷಯದ ಕುರಿತು ಒತ್ತಿ ಹೇಳಿದ್ದಾರೆ. ‘ಪ್ರಾದೇಶಿಕ ಪಕ್ಷಗಳನ್ನು, ಅವು ಮಮತಾ, ಮಾಯಾವತಿ,ಅಖಿಲೇಶ್ ಅಥವಾ ಕುಮಾರಸ್ವಾಮಿ ಯಾರದೇ ಇರಬಹುದು, ಬಲಪಡಿಸುವುದರಿಂದ ಭಾರತಕ್ಕೆ ಒಳ್ಳೆಯ ಭವಿಷ್ಯವಿದೆ.’ ಇದು ಇತಿಹಾಸದಿಂದ ಅನುಮೋದಿತವಾಗಿರುವ ಎಲ್ಲರಿಗೂ ಗೊತ್ತಿರುವ ತಿಳಿವಳಿಕೆ.

ಕಾಂಗ್ರೆಸ್ ಪಕ್ಷವು ಹೆಚ್ಚೂಕಡಿಮೆ ಪ್ರಾದೇಶಿಕ ನಾಯಕರಾದ ಕಾಮರಾಜ್, ಎಸ್.ಕೆ.ಪಾಟೀಲ, ಅತುಲ್ಯ ಘೋಷ್, ಎಸ್.ನಿಜಲಿಂಗಪ್ಪ ಮತ್ತು ಸಿ.ಬಿ.ಗುಪ್ತಾರಂಥ ನಾಯಕರ ಒಕ್ಕೂಟವಾಗಿ ಕಾರ್ಯನಿರ್ವಹಿಸಿದ್ದಾಗ ಅತ್ಯಂತ ಬಲಿಷ್ಠವಾಗಿತ್ತು. ಆ ಸಾಮರ್ಥ್ಯದ ಜನರು ಈ ದಿನಗಳಲ್ಲಿ ಬರುವುದು ಕಷ್ಟ ಮತ್ತು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಸ್ತರವನ್ನು ಸಾಧಿಸುವಲ್ಲಿ ಕಷ್ಟಪಡುತ್ತಿವೆ. ಮಾಯಾವತಿ ಹಲವು ರಾಜ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಲವು ಬಾರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಬಹುತೇಕ ಸಲ ಅವರದ್ದು ಶೂನ್ಯ ಸಾಧನೆ. ಅದೇ ರೀತಿ ಅಖಿಲೇಶ್ ಯಾದವ್ ತಮ್ಮ ತವರು ನೆಲದ ಆಚೆ ಯಾವುದೇ ಪರಿಣಾಮ ಬೀರುವಲ್ಲಿ ಯಶಸ್ವಿ ಯಾಗಿಲ್ಲ. ಕುಮಾರಸ್ವಾಮಿಯವರು ಅಖಿಲ ಭಾರತ ಮಟ್ಟದ ಧ್ವನಿ ಇರುವ ಪಕ್ಷವನ್ನು ಹೊಂದಿದ್ದಾರೆ, ಆದ ರೆ 85 ವರ್ಷವಾದರೂ ಅತಿಯಾದ ಮಹತ್ವಾಕಾಂಕ್ಷೆ ಯ ಅಪ್ಪ ಮತ್ತು ಯಾವುದೇ ನಿರ್ದಿಷ್ಟ ನಿಯಮಗಳಿಗೊಳಪಡದೆ ತನ್ನದನ್ನೇ ಸಾಧಿ ಸುವ ಮಂತ್ರಿ ಅಣ್ಣ ಇವರ ನಡುವೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಇದು ಸಹಿಸಿಕೊಳ್ಳಲಾಗದ ಕುಟುಂಬ ರಾಜಕೀ ಯ. ಇದು ಕರ್ನಾಟಕದ ಮುಖ್ಯಮಂತ್ರಿ ಯನ್ನು ಕರುಣೆಯುಕ್ಕಿಸುವ-ಅಳುವ ದೇವತೆಯನ್ನಾಗಿಸಿಬಿಟ್ಟಿದೆ.

ನಾಯ್ಡು ಅವರ ಪಟ್ಟಿಯಲ್ಲಿರುವ ವ್ಯಕ್ತಿಗಳಲ್ಲಿ ಜನರನ್ನು ಸೆಳೆಯುವ ಜನಪ್ರಿಯತೆಯನ್ನು ಸ್ವಂತ ರಾಜ್ಯದಲ್ಲಿ ಮತ್ತು ಸ್ವಲ್ಪ ಮಟ್ಟಿಗೆ ಹೊರಗಡೆಯೂ ಪ್ರತಿಧ್ವನಿಸುತ್ತಿರುವ ಏಕೈಕ ವ್ಯಕ್ತಿ ಎಂದರೆ ಮಮತಾ ಬ್ಯಾನರ್ಜಿ. ಕಳೆದ ವಾರ ಕೊಲ್ಕತ್ತಾದಲ್ಲಿ ಅವರು ‘ಭಾರತದಲ್ಲಿ ಬಿಕ್ಕಟ್ಟಿದೆ, ಏಕೆಂದರೆ ಆಳುವ ಗುಂಪು ತಾಲಿಬಾನ್ ಹಿಂದುತ್ವವನ್ನು ಮುಕ್ತವಾಗಿ ಹರಡಲು ಬಿಟ್ಟುಬಿಟ್ಟಿದೆ’ ಎಂದು ಹೇಳುವಾಗ ತಾವು ಎದುರಿಸಿದ ಶ್ರೋತೃಗಳಿಗಿಂತ ದೊಡ್ಡ ಸಂಖ್ಯೆ ಖಂಡಿತವಾಗಿ ಅವರ ಮನಸ್ಸಿನಲ್ಲಿತ್ತು.ಉತ್ತರ ಪ್ರದೇಶದಲ್ಲಿ ನಕಲಿ ಎನ್‌ಕೌಂಟರ್ ಮಾಡಿ ನೂರಾರು ಜನರನ್ನು ಕೊಲ್ಲಲಾಗಿದೆ ಮತ್ತು 13,000 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಂಬುದನ್ನು ಉಲ್ಲೇಖಿಸಿದರು. ಬಿಜೆಪಿ ಹಟಾವೋ, ದೇಶ್ ಬಚಾವೋ ಘೋಷಣೆಯಡಿ ಸಂಘಟಿತರಾಗುವಂತೆ ಜನರಿಗೆ ಕರೆ ನೀಡಿದರು.

ಟಿಡಿಪಿಯು ರಾಷ್ಟ್ರಮಟ್ಟದಲ್ಲಿ ಪಾತ್ರ ವಹಿಸುವುದೆಂದು ಚಂದ್ರಬಾಬು ನಾಯ್ಡು ಅವರು ಹೇಳಿದ್ದು ಆಶ್ಚರ್ಯಕರವಾಗಿದೆ. ಇದರ ಅರ್ಥ ತಾನು ಉಳಿದ ಪ್ರಾದೇಶಿಕ ನಾಯಕರಿಗಿಂತ ಮೇಲು ಎಂದೋ ಅಥವಾ ಒಬ್ಬರನ್ನು ಆಯ್ಕೆ ಮಾಡುವುದಕ್ಕೆ ನೆರವಾಗುತ್ತೇನೆ ಎಂದೋ? ಇದಕ್ಕೂ ಮೊದಲು ತೆಲಂಗಾಣದ ಚಂದ್ರಶೇಖರರಾವ್ ಅವರು ಹೇಳಿದ್ದು ಸ್ವಲ್ಪ ಒರಟಾಗಿಯೇ ಇತ್ತು, ‘ನಾನು ರಾಷ್ಟ್ರ ರಾಜಕಾರಣ ಪ್ರವೇಶಿಸಲು ಸಿದ್ಧವಾಗಿದ್ದೇನೆ. ರಾಷ್ಟ್ರೀಯ ಮಟ್ಟದಲ್ಲಿ ನಾನು ನಾಯಕತ್ವ ವಹಿಸಿಕೊಳ್ಳುತ್ತೇನೆ, ಏಕಾಗಬಾರದು?’ ಆದರೆ, ಒಂದು ಮಾತನ್ನು ಇಲ್ಲಿ ಹೇಳಲೇಬೇಕು. ಪಕ್ಕದಲ್ಲಿಯೇ ಇರುವ ಇನ್ನೊಂದು ತೆಲುಗು ರಾಜ್ಯ ದೊಂದಿಗೆ ಸಹಕಾರದೊಂದಿಗೆ ಕಾರ್ಯನಿರ್ವಹಿಸಲು ಚಂದ್ರಶೇಖರ ರಾವ್‌ಗೆ ಸಾಧ್ಯವಾಗದಿದ್ದ ಮೇಲೆ ಯಾವ ವಿಶ್ವಾಸಾರ್ಹತೆಯನ್ನು ಅವರು ಹೊಂದಿದ್ದಾರೆ? ಸಂಸತ್ತಿನಲ್ಲಿ ಟಿಡಿಪಿ ಸದಸ್ಯರು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ ಅತಿ ದೊಡ್ಡ ಧ್ವನಿಯಲ್ಲಿ ಅಡೆತಡೆ ಕೇಳಿ ಬಂದಿದ್ದು ತೆಲಂಗಾಣದ ಸದಸ್ಯರಿಂದಲೇ.

ನಿಜಕ್ಕೂ ಆ ಚರ್ಚೆಯು 2 ತೆಲುಗು ಮಾತನಾಡುವ ರಾಜ್ಯಗಳಿಗೆ ಮತ್ತು ಅದರಾಚೆಗೂ ಉಪಯುಕ್ತ ವಾಗಬಲ್ಲಂಥ ಪ್ರತಿಭೆಯನ್ನು ಅನಾವರಣಗೊಳಿಸಿತು. ಜಯದೇವ ಗುಳ್ಳಾ ನಿರರ್ಗಳವಾದ, ಹೊಳಪು ಹಚ್ಚಿದ ಇಂಗ್ಲಿಷಿನಲ್ಲಿ ಪ್ರಭಾವಿ ಭಾಷಣಕಾರರು. ಒಂದು ತಾಸು ಮಾತನಾಡುವುದಕ್ಕೆ ಅರ್ಹರಿದ್ದರು. ಸಂಸತ್ತಿನಲ್ಲಿ ತಮಗೆ ನೀಡಲಾದ 13 ನಿಮಿಷದಲ್ಲೇ ಆ ಕಾರ್ಯವನ್ನು ನಿರ್ವಹಿಸಿದರು. ತಮ್ಮದೇ ಸ್ಥಳೀಯ ಶೈಲಿಯಲ್ಲಿ ಮಾತನಾಡಿ ಸದನದ ಗಮನ ಸೆಳೆದು ಉದಾಹರಿಸಬಲ್ಲ ಉಕ್ತಿಗಳನ್ನು ಹೇಳಿದವರು ಕೇಸಿನೇನಿ ಶ್ರೀನಿವಾಸ. ಪ್ರಧಾನಿಯ ಭಾಷಣವನ್ನು ಪ್ರಸ್ತಾಪಿಸಿದ ಅವರು, ‘ಅದ್ಭುತವಾದ ವಾಗ್ಮಿಯ ಭಾಷಣ ಮ್ಯಾಡಂ. ಅತ್ಯದ್ಭುತ. ಬ್ಲಾಕ್ ಬಸ್ಟರ್ ಬಾಲಿವುಡ್ ಸಿನಿಮಾ ನೋಡುತ್ತಿದ್ದೇನೇನೋ ಎಂಬ ಭಾವನೆ ನನಗೆ ಬಂತು. ಜಗತ್ತಿನ ಅತ್ಯುತ್ತಮ ನಟ ಮ್ಯಾಡಂ’ ಎಂದರು.

ಮ್ಯಾಡಂ ಸ್ಪೀಕರ್‌ಗೆ ಇಂಥ ಮಾತುಗಳು ಪಥ್ಯವಾಗಲಿಲ್ಲ. ಅವರ ಸಮಯ ಕಡಿತಗೊಳಿಸಿದರು. ತೆಲಂಗಾಣ ಎಂಪಿಗಳಿಗೆ ಖುಷಿಯಾಯಿತು. ಹಿಂದಿ ಬಿಟ್ಟರೆ ತೆಲುಗು ಭಾಷೆ ಮಾತ್ರ ತನ್ನ ಹೆಸರಿ ನಲ್ಲಿ ಒಂದಕ್ಕಿಂತ ಹೆಚ್ಚು ರಾಜ್ಯಗಳನ್ನು ಹೊಂದಿರುವುದು. ಆದರೆ ಅದು ಭಾಷೆಗಾಗಲಿ ಅಥವಾ ರಾಜ್ಯಗಳಿಗಾಗಲಿ ಯಾವುದೇ ರೀತಿಯಲ್ಲಿ ನೆರವಾಗುವಂತೆ ತೋರುತ್ತಿಲ್ಲ. ಇಂಥ ಅಂತಸ್ಥವಾಗಿರುವ ವೈರುದ್ಧ್ಯಗಳು ಪ್ರತಿಪಕ್ಷಗಳ ಏಕತೆಯ ಹಾದಿಯಲ್ಲಿ ನಿಲ್ಲಬಲ್ಲವೆ? ಎಷ್ಟು ಜನ ನಾಯಕರು ಪಕ್ವತೆಯನ್ನು ಪಡೆದಿದ್ದಾರೆ? ಸಾಮಾನ್ಯ ಒಳಿತಿಗಾಗಿ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಬದಿಗೆ ಸರಿಸುವ ಒಳ್ಳೆಯ ತಿಳಿವಳಿಕೆಯನ್ನು ಎಷ್ಟು ಜನ ತೋರಿಸಬಲ್ಲರು? ಕಾರ್ಯಸಾಧುವಾದುದನ್ನು ಒಪ್ಪಿಕೊಳ್ಳುವುದರ ಕಡೆಗೆ ತಾವು ಬದಲಾಗಿರುವುದನ್ನು ಪ್ರಕಟಿಸಿರುವ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇತರರಿಗೆ ಮಾದರಿಯನ್ನು ಹಾಕಿಕೊಡಬೇಕು.

ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದಲ್ಲಿ ಏಕತೆಯು ಪ್ರತಿಪಕ್ಷಗಳಿಗೆ ಅಳಿವು ಉಳಿವಿನ ವಿಷಯವಾಗಿದೆ ಎಂದು ಎಚ್ಚರಿಸಿದ್ದಾರೆ. ‘ಪ್ರಧಾನ ಮಂತ್ರಿ ಮತ್ತು ಬಿಜೆಪಿ ಅಧ್ಯಕ್ಷರು ಅಧಿಕಾರವನ್ನು ಕಳೆದುಕೊಳ್ಳುವುದಕ್ಕೆ ಸಿದ್ಧರಿಲ್ಲ. ಏಕೆಂದರೆ ಅವರು ಅಧಿಕಾರ ಕಳೆದುಕೊಂಡ ಕ್ಷಣದಲ್ಲಿ ಅವರ ವಿರುದ್ಧ ಇತರ ಪ್ರಕ್ರಿಯೆಗಳು ಆರಂಭವಾಗುತ್ತವೆ’ ಎಂದು ಅವರು ಹೇಳಿದರು. ಒಂದಂತೂ ಖಂಡಿತ. ಮುಂದಿನ ವರ್ಷ ನಾವು ಸಾರ್ವತ್ರಿಕ ಚುನಾವಣೆಗೆ ಹೋಗುತ್ತಿರುವುದಲ್ಲ. ಅದೊಂದು ಸಮರವೇ ಆಗಲಿದೆ.

[ನೇರ ಮಾತು - ಟಿ.ಜೆ.ಎಸ್. ಜಾರ್ಜ್ ]

loader