ನವದೆಹಲಿ (ಜ. 04): ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟುವಿವಾದಕ್ಕೆ ಗುರಿಯಾಗಿದೆ. ಚಿತ್ರದಲ್ಲಿ ಕೆಲವು ಪ್ರಮುಖ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಇಮೇಜ್‌ಗೆ ಧಕ್ಕೆ ತರಲಾಗಿದೆ ಎಂದು ಬಿಹಾರದ ಸ್ಥಳೀಯ ಕೋರ್ಟ್‌ನಲ್ಲಿ ಚಿತ್ರತಂಡದ ವಿರುದ್ಧ ಕೇಸ್‌ ಕೂಡ ದಾಖಲಾಗಿದೆ. ಈ ವಿವಾದದ ಬಗ್ಗೆ ಮತ್ತು ಸಿನಿಮಾದಲ್ಲಿ ನಿಜಕ್ಕೂ ಏನಿದೆ ಎಂಬ ಬಗ್ಗೆ ಚಿತ್ರ ನಿರ್ದೇಶಕ ಅನುಪಮ್‌ ಖೇರ್‌ ರಿಪಬ್ಲಿಕ್‌ ಟೀವಿಯೊಂದಿಗೆ ಮಾತನಾಡಿದ್ದಾರೆ.

ಚುನಾವಣೆಗೆ ಸರಿಯಾಗಿ ಈ ಸಿನಿಮಾ ಏಕೆ?

ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ನಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಅವಮಾನ ಆಗುವಂಥದ್ದು ಏನೂ ಇಲ್ಲ. ವಾಸ್ತವವಾಗಿ ಈ ಸಿನಿಮಾ ನೋಡಿದ ಮೇಲೆ ಇನ್ನಷ್ಟುಜನರು ಅವರಿಗೆ ಫ್ಯಾನ್‌ ಆಗುತ್ತಾರೆ. ಮನಮೋಹನ ಸಿಂಗ್‌ ಅವರು ಈ ಸಿನಿಮಾ ನೋಡಿದರೆ ಖುಷಿಯಿಂದ ನನ್ನ ಜೊತೆ ಬಂದು ಕಾಫಿ ಕುಡಿಯುತ್ತಾರೆ. ಪುಸ್ತಕದಲ್ಲಿ ಏನಿದೆಯೋ ಅದನ್ನಷ್ಟೇ ಸಿನಿಮಾದಲ್ಲಿ ತೋರಿಸಿದ್ದೇವೆ.

ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನಿಮಾದಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ. ಆದರೂ ಸಿನಿಮಾ ರಿಲೀಸ್‌ ಆಗುವ ಮೊದಲೇ ದೊಡ್ಡ ವಿವಾದ ಹುಟ್ಟುಹಾಕಿದೆ. ಅಂಥದ್ದೇನಿದೆ ಅದರಲ್ಲಿ?

ಈ ಪಾತ್ರಕ್ಕಾಗಿ ಸುಮಾರು 6-8 ತಿಂಗಳು ಪೂರ್ವ ತಯಾರಿ ಮಾಡಿದ್ದೇನೆ, ಅಷ್ಟೇ ಪರಿಶ್ರಮವನ್ನೂ ಹಾಕಿದ್ದೇನೆ. 35 ವರ್ಷಗಳ ಸಿನಿಮಾ ಹಾದಿಯ 515 ಸಿನಿಮಾಗಳ ನಂತರ ಇಂಥದ್ದೊಂದು ಪ್ರಯತ್ನ ಮಾಡಿದ್ದೇನೆ. ಕೆಲವರು ಸಿನಿಮಾವನ್ನೇ ನೋಡದೆ ಪ್ರಧಾನಿಯೊಬ್ಬರನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ವಿವಾದ ಸೃಷ್ಟಿಸಿದ್ದಾರೆ. ಆದರೆ ಇದು ಇತಿಹಾಸದ ಒಂದು ಭಾಗ. 2004-14ರ ನಡುವೆ ಏನೆಲ್ಲಾ ನಡೆದಿದೆ ಎಂದು ಎಲ್ಲರಿಗೂ ಗೊತ್ತು. ಯಾರೋ ಒಬ್ಬರು ಈ ಹಿಂದಿನ ಪ್ರಧಾನಿ ಬಗ್ಗೆ ಅಥವಾ ಈಗಿನ ಪ್ರಧಾನಿ ಬಗ್ಗೆ ಸಿನಿಮಾ ಮಾಡುತ್ತಿದ್ದರೆ ಅದನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ.

ಸೆನ್ಸಾರ್‌ ಸರ್ಟಿಫಿಕೆಟ್‌ ಸಿಕ್ಕ ಬಳಿಕವಷ್ಟೇ ಟ್ರೇಲರ್‌ ರಿಲೀಸ್‌ ಮಾಡಿದ್ದೇವೆ. ಇದೊಂದು ಪುಸ್ತಕ ಆಧಾರಿತ ಚಿತ್ರ. ಅಷ್ಟಕ್ಕೂ ಪುಸ್ತಕ ಬರೆದವರು ಹೊರಗಿನವರಾರೂ ಅಲ್ಲ. ಸಂಜಯ್‌ ಬಾರು ಮಾಜಿ ಪ್ರಧಾನಿ ಮನೋಮೋಹನ್‌ ಸಿಂಗ್‌ ಅವರ ಮೀಡಿಯಾ ಅಡ್ವೈಸರ್‌. ಅದೂ ಅಲ್ಲದೆ ಸಿಂಗ್‌ ಕೇವಲ ಕಾಂಗ್ರೆಸ್‌ ಪ್ರಧಾನಿ ಅಲ್ಲ, ಇಡೀ ದೇಶದ ಪ್ರಧಾನಿ. ನಾನು ಅವರ ಕಾರ್ಯ ಹೇಗಿತ್ತು ಎಂದು ಪ್ರಾಮಾಣಿಕವಾಗಿ ಬಿಂಬಿಸಲು ಹೊರಟಿದ್ದೇನೆ. ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಧಾನಿ ಮನಮೋಹನ ಸಿಂಗ್‌. ಈ ಸಿನಿಮಾ ಬಳಿಕ ಅವರ ನೆನಪುಗಳು ಮತ್ತಷ್ಟುಶಾಶ್ವತವಾಗುತ್ತವೆ.

ಸಿನಿಮಾದ ಟ್ರೇಲರ್‌ ನಿಜವಾದ ಪ್ರಧಾನಿ ಯಾರು ಎಂದು ಗೊಂದಲಕ್ಕೆ ಒಳಗಾಗುವ ರೀತಿ ಇದೆಯಲ್ಲ? ಅಲ್ಲದೆ ಸಿನಿಮಾದಲ್ಲಿ ಸಿಂಗ್‌ ಅವರನ್ನು ಒಬ್ಬ ದುರ್ಬಲ ಪ್ರಧಾನಿ ಎಂದೋ ಅಥವಾ ಗಾಂಧಿ ಕುಟುಂಬದ ವಿಧೇಯರೆಂದೋ ಬಿಂಬಿಸಿರುವ ಹಾಗಿದೆ.

ನನ್ನ ತಾಯಿ ಪೋಸ್ಟರ್‌ ನೋಡಿ. ‘ಓ ಮನಮೋಹನ್‌ ಸಿಂಗ್‌!’ ಎಂದು ಅಚ್ಚರಿಪಟ್ಟರು. ಇಲ್ಲ ಅಮ್ಮ ಅದು ನಾನು ಎಂದರೆ ‘ಏ ನಿನಗೇನು ಹುಚ್ಚಾ!’ ಎಂದಿದ್ದರು. ವಾಸ್ತವವನ್ನೇ ಸಿನಿಮಾ ಮಾಡಿದ್ದೇವೆ. ಸಂಜಯ್‌ ಬಾರು ಪುಸ್ತಕದಲ್ಲಿ ಬಿಂಬಿಸಿದಂತೆ ಸಿನಿಮಾದಲ್ಲಿ ತೋರಿಸಲಾಗಿದೆ. ಮನಮೋಹನ್‌ ಸಿಂಗ್‌ ಅವರು ಶಕ್ತಿ ಮೀರಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಅವರ ಸುತ್ತ ಇದ್ದ ಜನ ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರು. ಪ್ರಧಾನಿ ಕಾರ್ಯಾಲಯದಲ್ಲಿ ಏನೆಲ್ಲಾ ಆಗುತ್ತದೆ, ಹೈಕಮಾಂಡ್‌ನಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ತಿಳಿಯುವ ಅಧಿಕಾರ ವೀಕ್ಷಕರಿಗಿದೆ.

ನ್ಯೂಕ್ಲಿಯರ್‌ ಒಪ್ಪಂದ, ಕಾಶ್ಮೀರ ವಿವಾದ ಸಂದರ್ಭದಲ್ಲಿ ಮನಮೋಹನ ಸಿಂಗ್‌ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ ಎಂದೂ ಸಿನಿಮಾದಲ್ಲಿದೆ. ಅದೂ ಅಲ್ಲದೆ ಇತ್ತೀಚೆಗೆ ಮನಮೋಹನ್‌ ಸಿಂಗ್‌ ತಮ್ಮ ಪುಸ್ತಕ ಬಿಡುಗಡೆ ವೇಳೆ ‘ನಾನೊಬ್ಬ ಆಕ್ಸಿಡೆಂಟಲ್‌ ಹಣಕಾಸು ಸಚಿವ ಕೂಡ’ ಎಂದು ಹೇಳಿಕೊಂಡಿದ್ದಾರೆ.

ಹಾಗಾಗಿ ಅವರೇ ತಮ್ಮನ್ನು ತಾವು ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಎಂದು ಕರೆದುಕೊಂಡಿದ್ದಾರೆ. ನನ್ನ ಪ್ರಕಾರ ಅದೊಂದು ಗ್ರೇಟ್‌ ಟೈಟಲ್‌. ಮನಮೋಹನ್‌ ಸಿಂಗ್‌ ಅವರಿಗೆ ನೇರವಾಗಿ ಹೇಳುತ್ತೇನೆ, ನೀವು ಸಿನಿಮಾ ನೋಡಿದರೆ ನಿಜಕ್ಕೂ ಹೆಮ್ಮೆ ಪಡುತ್ತೀರಿ, ನನ್ನ ಜೊತೆ ಕುಳಿತು ಒಂದು ಕಪ್‌ ಕಾಫಿ ಕುಡಿಯುತ್ತೀರಿ ಎಂಬುದು ನನ್ನ ನಂಬಿಕೆ.

ಸಿನಿಮಾದಲ್ಲಿ ಸೋನಿಯಾಗಾಂಧಿ ಅವರನ್ನು ಸ್ವಾರ್ಥ ರಾಜಕಾರಣಿ ಎಂದೋ, ರಾಷ್ಟ್ರೀಯ ಹಿತಾಸಕ್ತಿ ಇಲ್ಲದ ವ್ಯಕ್ತಿ ಎಂದೋ ನಕಾರಾತ್ಮಕವಾಗಿ ಬಿಂಬಿಸಿಲ್ಲವೇ?

ಇಲ್ಲ. ಸಿನಿಮಾವನ್ನು ನೋಡುವ ದೃಷ್ಟಿಯಲ್ಲಿ ಅದು ಅಡಗಿದೆ. ಅಂದಹಾಗೆ ನಾವೇನೂ ನಮಗನಿಸಿದಂತೆ ಸ್ಕಿ್ರಪ್ಟ್‌ ಬರೆದಿಲ್ಲ. ಇದೊಂದು ಪುಸ್ತಕ ಆಧಾರಿತ ಚಿತ್ರ. ಅದರಾಚೆಗೆ ನಾವೇನನ್ನೂ ಬಿಂಬಿಸಿಲ್ಲ. ಮೂಲ ಪುಸ್ತಕದಲ್ಲೇ ಸೋನಿಯಾ ಗಾಂಧಿಯವರನ್ನು ರಿಮೋಟ್‌ ಕಂಟ್ರೋಲರ್‌ ಎಂದು ಎಂದು ಹೇಳಲಾಗಿದೆ.

ಒನ್‌ ಸೈಡ್‌ ರಿಯಾಲಿಟಿ ನೋಡಿ ಸಿನಿಮಾ ಮಾಡಿದ್ದೀರಿ ಎಂದೆನಿಸುವುದಿಲ್ಲವೇ? ಅಲ್ಲದೆ ಚುನಾವಣೆ ಹತ್ತಿರ ಇರುವಾಗ ಈ ಸಿನಿಮಾ ಬಿಡುಗಡೆ ಮಾಡುತ್ತಿರುವುದು ಏಕೆ?

ನಾವು ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ದೇಶದಲ್ಲಿ ಬದುಕುತ್ತಿದ್ದೇವೆ. ಪುಸ್ತಕ ಬಿಡುಗಡೆಯಾಗಿದ್ದು 2014ರಲ್ಲಿ. ಈಗ 2019. ನೈಜ ಜೀವನದಲ್ಲಿ ನನಗೂ ಮನಮೋಹನಸಿಂಗ್‌ ಅವರಿಗೂ ಸಾಕಷ್ಟುಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನತೆ ಇದೆ. ಆದರೆ ಸಿನಿಮಾದಲ್ಲಿ ನಮ್ಮ ಅಭಿಪ್ರಾಯ ಖಂಡಿತ ಇಲ್ಲ.

ಸಿನಿಮಾ ಬಿಡುಗಡೆಯನ್ನು ಗಳಿಗೆ ನೋಡಿ ಮಾಡುತ್ತಿಲ್ಲ. ಚುನಾವಣೆಗೂ ನನಗೂ ಸಂಬಂಧ ಇಲ್ಲ. ಇನ್ನೊಂದು ವಿಷಯ ಎಂದರೆ, ಸಿನಿಮಾ ನೋಡಿದ ಜನ ಮಾಜಿ ಪ್ರಧಾನಿಯ ಅಭಿಮಾನಿಯಾಗುವುದರಲ್ಲಿ ಸಂಶಯವಿಲ್ಲ. ದುರ್ಬಲ ವ್ಯಕ್ತಿ ಎಂದೆನಿಸಿದರೂ ಜನರನ್ನು ಆಕರ್ಷಿಸುವ ಪಾತ್ರ ಅದು. ಅವರಿಗೆ ಪ್ರಬಲವಾದ ಇಚ್ಛಾಶಕ್ತಿ ಇದೆ. ಸಿನಿಮಾದಲ್ಲಿ ಅವರ ಪ್ರಾಮಾಣಿಕತೆ, ನಿಖರತೆಯನ್ನು ತೋರಿಸಲಾಗಿದೆ. ಅದು ತಿಂಗಳಾನುಗಟ್ಟಲೆ ಜನರ ಮನಸ್ಸಿನಲ್ಲಿ ಉಳಿಯಲಿದೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಪಾತ್ರ ಮಾಡಲು ನಿಮ್ಮ ಸಿದ್ಧತೆ ಹೇಗಿತ್ತು? ಅವರನ್ನು ಭೇಟಿಯಾಗಿದ್ದಿರಾ?

ಈ ಪಾತ್ರ ಮಾಡಲು ನಾನು ಯಾವುತ್ತೂ ಧ್ಯಾನ ಮಾಡಿಲ್ಲ. ಮೊದಲಿಗೆ ನಿರ್ಮಾಪಕರು ಈ ಸಿನಿಮಾ ಮಾಡುವಂತೆ ಕೇಳಿಕೊಂಡಾಗ ಖಂಡಿತ ಸಾಧ್ಯವಿಲ್ಲ ಎಂದಿದ್ದೆ. ಒಂದು ದಿನ ಮನೆಯಲ್ಲಿ ಕೂತಿದ್ದೆ. ಟೀವಿಯಲ್ಲಿ ಮನಮೋಹನ್‌ ಸಿಂಗ್‌ ನಡೆದುಹೋಗುತ್ತಿರುವುದನ್ನು ನೋಡಿದೆ. ಅವರಂತೆ ನಡೆಯುವ ಪ್ರಯತ್ನ ಮಾಡಿದೆ.

ಒಂದು ವಾರ ಪ್ರಯತ್ನಿಸಿದರೂ ಬರಲಿಲ್ಲ. ಆಗ ಇದೊಂದು ಚಾಲೆಂಜಿಂಗ್‌ ಪಾತ್ರ ಎನಿಸಿತು. ಇದು ಗಾಂಧಿ, ಇಂದಿರಾಗಾಂಧಿ, ಭಗತ್‌ ಸಿಂಗ್‌ ಪಾತ್ರ ಮಾಡಿದಂತಲ್ಲ. ಏಕೆಂದರೆ ಗಾಂಧೀಜಿಯನ್ನು ಈಗಿನವರಾರ‍ಯರೂ ನೋಡಿಲ್ಲ. ಆದರೆ ಮನಮೋಹನಸಿಂಗ್‌ ಅವರನ್ನು ದಿನನಿತ್ಯ ಜನ ನೋಡ್ತಾರೆ. ಹಾಗಾಗಿ ಅದೊಂದು ಚಾಲೆಂಜ್‌. ಹಾಗಾಗಿ ರಾತ್ರಿ ಹಗಲು ಅವರ ವಿಡಿಯೋ ನೋಡಿ ಪ್ರಾಕ್ಟೀಸ್‌ ಮಾಡಲು ಆರಂಭಿಸಿದೆ. ಅಲ್ಲದಕ್ಕಿಂತ ಕಷ್ಟವಾಗಿದ್ದು ಅವರ ಧ್ವನಿ.

ಮನಮೋಹನ್‌ ಸಿಂಗ್‌ ಅವರೊಂದಿಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತವರ ಕುಟುಂಬ ಹೇಗಿತ್ತು ಎಂಬುದೇ ಸಿನಿಮಾದ ಕಥಾಹಂದರವೇ?

ಬಹುಶಃ ಇರಬಹುದು. ಕಾರಣ ಆ ಪುಸ್ತಕದಲ್ಲಿ ಅದೇ ಇದೆ. ಸಂಜಯ್‌ ಬಾರು ಮತ್ತವರ ಪುಸ್ತಕದಲ್ಲಿರುವ ಹೊರತಾಗಿ ಬೇರೇನೂ ಈ ಸಿನಿಮಾದಲ್ಲಿಲ್ಲ. ನಿಜ ಹೇಳಬೇಕೆಂದರೆ ಸಿನಿಮಾದಲ್ಲಿ ಸಾಕಷ್ಟುಹಾಸ್ಯವೂ ಇದೆ. ಸಂಜಯ್‌ ಬಾರು ಮತ್ತು ಮನಮೋಹನ್‌ ಸಿಂಗ್‌ ನಡುವಿನ ಮಾತುಕತೆಯಲ್ಲಿ ನೀವದನ್ನು ಕಾಣಬಹುದು. ಸುಮ್ಮನೆ ವಿವಾದ ಮಾಡಲಾಗುತ್ತಿದೆ ಅಷ್ಟೆ.

ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರ ಇದೆಯೇ?

ಇಲ್ಲ.

ಟ್ರೇಲರ್‌ನಲ್ಲಿ ಸಿಂಗ್‌ ರಾಜೀನಾಮೆ ನೀಡುವುದಾಗಿ ಹೇಳ್ತಾರೆ. ಅದಕ್ಕೆ ಸೋನಿಯಾ ಗಾಂಧಿ ಅದ್ಹೇಗೆ ರಾಜೀನಾಮೆ ನೀಡುತ್ತೀರಿ ಎಂದು ಹೇಳುವ ದೃಶ್ಯ ಇದೆ. ಇದು ನಿಜವಾಗಿ ನಡೆದಿದ್ದೇ?

ಹಾಗಂತ ಪುಸ್ತಕದಲ್ಲಿದೆ. ನಾನು ಈ ಬಗ್ಗೆ ರೀಸಚ್‌ರ್‍ ಕೂಡ ಮಾಡಿದ್ದೇನೆ. 2012ರ ಸಮಯದಲ್ಲಿ ಮನಮೋಹನ ಸಿಂಗ್‌ ತುಂಬಾ ಅಪ್ಸೆಟ್‌ ಆಗಿದ್ದರು. ಅಣ್ಣಾ ಹಜಾರೆ ಅವರೊಂದಿಗೂ ಈ ಬಗ್ಗೆ ಮಾತನಾಡಿದ್ದೆ. ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಕ್ಯಾಮೆರಾ ಇಟ್ಟು ದಾಖಲಿಸಲು ಸಾಧ್ಯವಿಲ್ಲ.

ನಂಬಲರ್ಹ ಮೂಲಗಳಿಂದ ಪಡೆಯಲಾಗುತ್ತದೆ. ನನಗೆ ಜನ ಗೌರ ತೋರಬೇಕೆಂದರೆ ನಾನು ಎಲ್ಲರನ್ನೂ ಗೌರದಿಂದ ಕಾಣಬೇಕು ಎಂಬ ಸಿದ್ಧಾಂತದವನು ನಾನು. ಅಂಥದ್ಧೇ ಸಿದ್ಧಾಂತದ ಮೇಲೆ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನಿಮಾ ಮಾಡಿದ್ದೇನೆ. ಖಂಡಿತ ಇದು ಭಾರತದ ಆಧುನಿಕ ಸಿನಿಮಾಗಳಲ್ಲಿ ಐತಿಹಾಸಿಕವಾಗಿ ಉಳಿಯಲಿದೆ.

ಎಫ್‌ಟಿಐಐಗೆ ರಾಜೀನಾಮೆ ನೀಡಿದ್ದಕ್ಕೂ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಸಿನಿಮಾಗೂ ಸಂಬಂಧ ಇದೆಯಾ?

ಇಲ್ಲ. ಈ ಸಿನಿಮಾಗೂ ನಾನು ರಾಜೀನಾಮೆ ನೀಡಿದ್ದಕ್ಕೂ ಯಾವುದೇ ಸಂಬಂಧ ಇಲ್ಲ. ಅಂತಾರಾಷ್ಟ್ರೀಯ ಅಸೈನ್‌ಮೆಂಟ್‌ ಇರುವುದರಿಂದ ಎರಡನ್ನೂ ನಿಭಾಯಿಸಲು ಕಷ್ಟಎಂದು ಸ್ಮೃತಿ ಇರಾನಿ ಬಳಿ ನನ್ನ ರಾಜೀನಾಮೆ ನೀಡಲು ಹೋದಾಗ ಮೊದಲಿಗೆ ಅವರು ಒಪ್ಪಲಿಲ್ಲ. ಆದರೆ ನಾನು 9 ತಿಂಗಳು ಈ ದೇಶ ಬಿಟ್ಟು ಹೋಗಬೇಕಾಗಿತ್ತು. ಹಾಗಾಗಿ ರಾಜೀನಾಮೆ ನೀಡಿದೆ.

-ಅನುಪಮ್ ಖೇರ್ , ಬಾಲಿವುಡ್ ನಟ,ನಿರ್ದೇಶಕ