Asianet Suvarna News Asianet Suvarna News

ಫ್ರಂಟ್'ಲೈನ್: ಕಲ್ಲುಗಳ ನಡುವೆ ದೇಶಭಕ್ತನ ಬದುಕು

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಎಂಬ ಹಳ್ಳಿಯಲ್ಲಿ ಕಡುಬಡತನದ ಬದುಕಿನ ಕಷ್ಟಕಾರ್ಪಣ್ಯಗಳನ್ನು ಎದುರಿಸಿದ ದೇಹ ಈಗ ಭಾರತದ ಗಡಿಯಲ್ಲಿ ನಿತ್ಯವೂ ಬೀಳುವ ಕಲ್ಲುಗಳ ನೋವನ್ನೂ ಸಹಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಮಧ್ಯಭಾಗದ ಡೊಡಾ ಪ್ರದೇಶದಲ್ಲಿ ಗಡಿ ಕಾಯುತ್ತಿರುವ ಮಹಾಂತೇಶ ಬಾಣಕರ ನಿತ್ಯವೂ ಸವಾಲುಗಳಲ್ಲೇ ನಡೆಯುತ್ತಿರುವ ತಮ್ಮ ಬದುಕಿನ ಚಿತ್ರಣವನ್ನು ಮುಂದಿಟ್ಟಿದ್ದಾರೆ.

terrorist attack frontline article by mahantesh banakar 28 nov 2016

- ಮಹಾಂತೇಶ ಬಾಣಕರ

ಸೈನಿಕರ ಒಂದೇ ಗುರಿ ಒಂದೇ ಧ್ಯೇಯ ನಮ್ಮ ಭಾರತ ಮಾತೆ ಸದಾ ಸುರಕ್ಷಿತಳಾಗಿ, ಜಯದ ಮಾಲೆ ಹಾಕಿಕೊಂಡೇ ನಗುತಿರಬೇಕು. ಎಲ್ಲ ಸೈನಿಕರಂತೆ ನಾನೂ ಇದನ್ನು ಜವಾಬ್ದಾರಿ ಎಂಬಂತೆ ಹೊತ್ತು ದೇಶದ ರಕ್ಷಣೆ­ಯಲ್ಲಿ ಭಾಗಿಯಾಗಿದ್ದೇನೆ. ದೇಶ ರಕ್ಷಣೆ ವಿಷಯದಲ್ಲಿ ಯಾವುದೇ ಮುಲಾ­ಜಿಲ್ಲ. ನೆಮ್ಮದಿ ಕೆಡಿಸಲು ಬಂದ ಶತ್ರು ಯಾರೇ ಇದ್ದರೂ ಸರಿ. ತಾಯಿ ರಕ್ಷಣೆ ನಿಶ್ಚಿತ ಎಂದು ನಾವೇ ಹೇಳಿಕೊಂಡ ಮಾತುಗಳು ಸದಾ ಕಾಲ ಕಿವಿಯಲ್ಲಿ ಗುಂಯ್‌ಗುಡುತ್ತಿರುತ್ತವೆ. ಆ ಸಂದರ್ಭದಲ್ಲಿ -40 ಡಿಗ್ರಿ ಉಷ್ಣಾಂಶದಲ್ಲಿಯೂ ನಮ್ಮ ರಕ್ತ 40 ಡಿಗ್ರಿ ಉಷ್ಣಾಂಶದಲ್ಲಿ ಕುದಿಯುತ್ತಿರುತ್ತದೆ. ಇದು ಕೇವಲ ಮಾತಲ್ಲ. ನಿಜವಾಗಿಯೂ ನಮ್ಮ ದೇಶ ಭಕ್ತಿ! 

ಸೈನ್ಯಕ್ಕೆ ಸೇರಿ 12 ವರ್ಷಗಳಲ್ಲಿ ಹತ್ತಾರು ಸ್ಥಳ­ಗಳಲ್ಲಿ ಗಡಿ ಕಾಯುವ ಕೆಲಸ ಹೊತ್ತಿದ್ದೇನೆ. ಈ ಪೈಕಿ ಜಮ್ಮು ಮತ್ತು ಕಾಶ್ಮೀರದ ಮಧ್ಯಭಾಗದ ಡೊಡಾ ಪ್ರದೇಶದಲ್ಲಿ ಭಯೋತ್ಪಾದಕರ ದಾಳಿ ಮಾತ್ರ­ವಲ್ಲದೆ, ದೇಶದೊಳಗಿನ ಭಯೋತ್ಪಾದಕ ಬೆಂಬ­ಲಿಗರ ದಾಳಿಯನ್ನೂ ಎದುರಿಸಿದ್ದೇನೆ. ಡೊಡಾ ಪ್ರದೇಶದಲ್ಲಿ ನಮ್ಮ ಕ್ಯಾಂಪಿನ ಮೇಲೆ ಪಹರೆ ನಡೆಸುತ್ತಿದ್ದ ಸ್ಥಳದಲ್ಲಿ ಕಲ್ಲಿನ ದಾಳಿ ಸದಾ ಕಾಲ ನಡೆಯುತ್ತಿತ್ತು. ಈ ಪರಿಸ್ಥಿತಿ ಈಗಲೂ ಮುಂದು­ವರಿದಿದೆಯಾದರೂ, ಕಳೆದ 6 ತಿಂಗಳಿನಿಂದ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆಯೆಂಬುದು ಸಂತಸದ ಸಂಗತಿ. ಈ ಪ್ರದೇಶದಲ್ಲಿ 4 ವರ್ಷಗಳ ಕಾಲ ದೇಶ ರಕ್ಷಣೆಯಲ್ಲಿ ಭಾಗಿಯಾಗಿದ್ದೇನೆ. 

ಡೊಡಾದಲ್ಲಿನ ಶಿಖರದ ಮೇಲೆ ನಾವೆಲ್ಲ ಗಡಿ ಭದ್ರತೆಗೆ ನಿಲ್ಲುತ್ತಿದ್ದೆವು. ಆ ಸಂದರ್ಭದಲ್ಲಿ ನಮ್ಮ ಮೇಲೆ ಸದಾ ಕಾಲ ಕಲ್ಲಿನ ಸುರಿಮಳೆಯಾಗುತ್ತಿತ್ತು. ಅವರ ಉದ್ದೇಶ ಕಲ್ಲು ಹೊಡೆದವರತ್ತ ನಮ್ಮ ಚಿತ್ತ ಹರಿಸಿ ಗಡಿಯೊಳಗೆ ನುಸುಳುವುದು. ಹೀಗಾಗಿಯೇ ದೇಶ ರಕ್ಷಣೆಯ ಸೇವೆಯಲ್ಲಿ ನಾವು ಕಲ್ಲಿಗೆ ಕಿಮ್ಮತ್ತೇ ನೀಡಲಿಲ್ಲ. ಕಲ್ಲುಗಳು ಬೆನ್ನಿಗೆ, ಕಾಲಿಗೆ ಹಾಗೂ ತಲೆಗೆ ಬೀಳುತ್ತಿದ್ದವು. ಆದರೆ ನಾವು ಕರ್ತವ್ಯದಿಂದ ಹಿಂದೆ ಸರಿಯುತ್ತಿರಲೇ ಇಲ್ಲ. ಕಲ್ಲು ಹೊಡೆಯುವ ಶತ್ರುಗಳಿಗೆ ಬೆನ್ನು ಕೊಟ್ಟು ತಾಯಿಯನ್ನು ರಕ್ಷಿಸಲು ಎದೆಗಾರಿಕೆಯಿಂದ ಹೋರಾಡುತ್ತಿದ್ದೆವು. ನಮ್ಮ ಸಾಮರ್ಥ್ಯಕ್ಕೆ ಎದುರಾಳಿಗಳಿಗೆ ಏನೂ ಮಾಡಿಕೊಳ್ಳಲಾಗುತ್ತಿರಲಿಲ್ಲ.

ಒಂದು ದಿನ ಬೆಳಗಿನ ಜಾವವೇ ಹಿಂದೆಂದಿಗಿಂ­ತಲೂ ಹೆಚ್ಚಾಗಿ ಕಲ್ಲುಗಳು ನಮ್ಮ ಶಿಬಿರದ ಮೇಲೆ ಬೀಳಲಾರಂಭಿಸಿದವು. ಭಯೋತ್ಪಾದಕರು ಒಳ ನುಗ್ಗಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ಆಗಲೇ ಅಂದಾಜಾಗಿ ಹೋಗಿತ್ತು. ಅದಕ್ಕಾಗಿಯೇ ಕಲ್ಲುಗಳು ಹೆಚ್ಚು ಬೀಳುತ್ತಿದ್ದವು. ದೊಡ್ಡ ಕಲ್ಲುಗಳು ತೂರಿ ಬರಲಾರಂಭಿಸಿದಾಗ ಇನ್ನಷ್ಟುಜಾಗೃತರಾಗಿ ಕಾವಲು ಕೂತೆವು. ಎರಡೂ ಕಡೆಯಿಂದ ಆಗಬಹು­ದಾದ ದಾಳಿಯನ್ನು ಎದುರಿಸುವುದು ನಮ್ಮ ಗುರಿಯಾಗಿತ್ತು. ಸ್ವಲ್ಪ ಹೊತ್ತಿನ ನಂತರ ಕಲ್ಲುಗಳು ಬೀಳುವುದು ನಿಂತು ಹೋದವು. ನಂತರ ಮತ್ತೆ ಆರಂಭವಾದವು. ಹೇಗಾದರೂ ಮಾಡಿ ನಮ್ಮೆಲ್ಲರ ಗಮನ ಕಲ್ಲು ಎಸೆಯುವವರತ್ತ ಕೇಂದ್ರೀಕರಿಸಿ, ನಮ್ಮ ಮೇಲೆ ದಾಳಿ ಮಾಡಿ ದೇಶದೊಳಗೆ ನುಗ್ಗುವುದು ಭಯೋತ್ಪಾದಕರ ಉದ್ದೇಶವಾಗಿತ್ತು. 

ನಾವೂ ಅವರನ್ನು ಎದುರಿಸಲು ಯೋಜನೆ ಸಿದ್ಧಮಾಡಿಕೊಂಡೆವು. ನಾನು ಮತ್ತು ಇನ್ನು ಮೂವರು ಸೇರಿ ಕಲ್ಲು ಎಸೆಯುವವರತ್ತ ಗಮನ ಹರಿಸಿದೆವು. ಉಳಿದವರಿಗೆ ‘ನೀವು ಗಡಿಯಲ್ಲಿರಿ' ಎಂದು ಹೇಳಿ ಎರಡು ಗುಂಪುಗಳಾಗಿ ಕವಲೊಡೆದೆವು. ನಾವು ಗಡಿಭಾಗದಲ್ಲಿ ನಿಂತ ಕೆಲವೇ ಕ್ಷಣಗಳಲ್ಲಿ ನಾಲ್ವರ ಮೇಲೆ ಶತ್ರು ರಾಷ್ಟ್ರದ ಎಂಟತ್ತು ಭಯೋತ್ಪಾದಕರಿಂದ ದಾಳಿ ನಡೆದೇ ಬಿಟ್ಟಿತು. ಕ್ಷಣಾರ್ಧದಲ್ಲಿ ನನ್ನ ಇಬ್ಬರು ಸಹ ಸೈನಿಕರಿಗೆ ಗುಂಡು ತಗುಲಿ ನೆತ್ತರು ಹರಿಯಿತು. ನಾನು ಕೂದಲೆಳೆಯಲ್ಲಿ ಶತ್ರುಗಳ ಗುಂಡಿನಿಂದ ಪಾರಾದೆ. ಅದು ನನಗೆ ಬಡಿದಿದ್ದಿರೆ, ನನ್ನ ಮುಖಕ್ಕೆ ಬೀಳುತ್ತಿತ್ತು. ಆದರೆ ನನಗೆ ಭಯವಾಗಲಿಲ್ಲ. ಬದಲಾಗಿ ಪ್ರತೀಕಾರದ ಆಕ್ರೋಶ ಹುಟ್ಟಿತು. ಅತ್ತ ಭಯೋತ್ಪಾದಕರ ದಾಳಿ ನಡೆಯುತ್ತಿದ್ದಂತೆಯೇ, ಇತ್ತ ಕಲ್ಲಿನ ದಾಳಿಯೂ ನಮ್ಮ ಮೇಲೆ ಮತ್ತಷ್ಟುಜೋರಾಯಿತು. ಆದರೆ ನಮಗೆ ಅದು ಕಲ್ಲುಗಳ ದಾಳಿಯಾಗಿರಲಿಲ್ಲ, ಹೂವಿನ ದಾಳಿಯಾಗಿತ್ತು. ಏಕೆಂದರೆ ಅದಕ್ಕೆ ಬೆದರಿ ನಾವು ಶತ್ರುಗಳನ್ನು ಒಳಗೆ ಬರಲು ಬಿಡುವ ಹಾಗಿರಲಿಲ್ಲ. ಬಿಟ್ಟರೆ ದೇಶಕ್ಕೇ ಆಪತ್ತು. ಹಿಂದಿನಿಂದ ಕಲ್ಲುಗಳು ಬೆನ್ನಿಗೆ, ತಲೆಗೆ, ಕಾಲಿಗೆ ಬೀಳುತ್ತಿದ್ದರೆ, ನಮ್ಮ ಗಮನ ಮಾತ್ರ ಶತ್ರು ನಾಶದತ್ತಲೇ ಇತ್ತು. ನಂತರ ಯಾವ ಸೈನಿಕರಿಗೂ ಗುಂಡು ತಗಲದಂತೆ ಎಚ್ಚರವಹಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದೆವು. ಶತ್ರುಗಳನ್ನು ಹೊಡೆದುರುಳಿಸು­ತ್ತಲೇ ನಮ್ಮ ಮೇಲೆ ಕಲ್ಲು ಎಸೆಯುವವರೂ ನಾಪತ್ತೆಯಾಗಿದ್ದರು. ಶಸ್ತ್ರಸಜ್ಜಿತರಾಗಿದ್ದ ಶತ್ರುಗಳ ಬಳಿ ಮದ್ದು ಗುಂಡುಗಳು ಭರಪೂರ ಇತ್ತು. ಆದರೆ, ನಮ್ಮ ದೇಶಭಕ್ತಿಯ ಪರಾಕಾಷ್ಠೆ ಮುಂದೆ ನಮಗೆ ಅವೆಲ್ಲ ತೃಣಸಮಾನ. ನಮ್ಮ ಸಹಚರರ ಬಲಿ ಪಡೆದ ಆಕ್ರೋಶ ಹಾಗೂ ದೇಶಕ್ಕೆ ಆಪತ್ತು ತರುವ ಅವರ ದುರುದ್ದೇಶ ನಮ್ಮನ್ನು ಸದಾ ಕಾಲ ಜಾಗೃತರನ್ನಾ­ಗಿಸಿರುತ್ತದೆ. ಶತ್ರುಗಳು ಎದುರು ನಿಂತು ನೇರವಾಗಿ ಯುದ್ಧ ಮಾಡುವುದಿಲ್ಲ. ಬದಲಾಗಿ ನಮ್ಮ ಏಕಾಗ್ರತೆಯನ್ನು ಬೇರೆಡೆ ಸೆಳೆದು ಇಲ್ಲವೇ, ನಾವು ಮೈಮರೆಯುವಂತೆ ಮಾಡಿ ನಮ್ಮ ಮೇಲೆ ಯುದ್ಧ ಮಾಡುತ್ತಾರೆ. ಹೀಗಾಗಿ ಗಡಿಯಲ್ಲಿರುವ ನಾವೆಲ್ಲ ಕ್ಷಣಕಾಲ ಕೂಡ ಮೈ ಮರೆಯುವುದಿಲ್ಲ. 

ಕೆಲವು ದಿನಗಳ ನಂತರ ರಾತ್ರಿಯ ವೇಳೆ ಇದೇ ರೀತಿ ಮತ್ತೊಮ್ಮೆ ಶತ್ರುಗಳು ದಾಳಿ ಮಾಡಿದರು. ಆ ಸಂದರ್ಭದಲ್ಲಿ ಎರಡು ಕಡೆಯಿಂದ ಏಕಕಾಲಕ್ಕೆ ದಾಳಿ ನಡೆಯಿತು. ಇತ್ತ ಕಲ್ಲೆಸೆಯುವವರು ಹಾಗೂ ಭಯೋತ್ಪಾದಕರು ಒಮ್ಮೆಲೇ ನಮ್ಮ ಮೇಲೆ ದಾಳಿ ಮಾಡಿದರು. ಹಿಂದಿನ ದಾಳಿಯಲ್ಲಿ ಸಹಚರರನ್ನು ಕಳೆದುಕೊಂಡ ದುಃಖ ಇನ್ನೂ ಹಸಿಯಾಗಿದ್ದ ಕಾರಣ, ನಮ್ಮ ಆಕ್ರೋಶ ನಮಗೆ ಮತ್ತಷ್ಟುಜಾಗೃತಿ ಹಾಗೂ ಶಕ್ತಿ ನೀಡಿತು. ಆ ಹೋರಾಟದಲ್ಲಿ ಯಾವ ಸೈನಿಕರಿಗೂ ಶತ್ರುವಿನ ಒಂದೂ ಗುಂಡು ತಗುಲದಂತೆ ಹೋರಾಡಿದೆವು. ಆದರೆ, ಕಲ್ಲುಗಳು ಮಾತ್ರ ನಮ್ಮ ಮೇಲೆ ಬೀಳುತ್ತಲೇ ಇದ್ದವು. ನಾವು ಬೆದರದೆ ಕೇವಲ ಅರ್ಧ ಗಂಟೆಯಲ್ಲಿ ಶತ್ರುಗಳ ಆಟ ಉಡುಗಿಸಿದೆವು. ಈ ಬಾರಿಯೂ ಶತ್ರುಗಳ ನಾಶವಾದ ಕೂಡಲೇ ಕಲ್ಲುಗಳು ಬೀಳುವುದೂ ನಿಂತು ಹೋಯಿತು.

ಅಲ್ಲಿ ಶತ್ರುಗಳಿಗಿಂತ ನಮ್ಮನ್ನು ಹೆಚ್ಚು ಕಾಡುವುದು ಭಯೋತ್ಪಾದಕ ಬೆಂಬಲಿಗರ ಕಲ್ಲುಗಳು. ಯಾವ ಸಂದರ್ಭದಲ್ಲಿ ಎಲ್ಲಿಂದ ಕಲ್ಲುಗಳು ತೂರಿ ಬರುತ್ತವೆ, ಯಾರಿಗೆ ಎಲ್ಲಿ ಬಡಿದು ನೋವು ಮಾಡುತ್ತವೆ ಎಂಬುದು ತಿಳಿಯುವುದಿಲ್ಲ. ಸುಮಾರು ಮೈನಸ್‌ 20ರಿಂದ 30 ಡಿಗ್ರಿಯ ಚಳಿಗೂ ನಾವು ನಿಂತ ನೆಲದಿಂದ ಕದಲುತ್ತಿರಲಿಲ್ಲ. ಅದರೆ, ಕೆಲವು ಸಂದರ್ಭಗಳಲ್ಲಿ ಈ ಕಲ್ಲುಗಳೇ ನಮ್ಮನ್ನು ಹೆಚ್ಚು ಕಾಡುತ್ತಿದ್ದವು. ಎಲ್ಲಕ್ಕಿಂತ ಬೇಸರದ ಸಂಗತಿ ಎಂದರೆ, ದೇಶದೊಳಗಿನಿಂದಲೂ ಕಲ್ಲುಗಳು ಬರುತ್ತಿದ್ದವಲ್ಲ. ಅದು ನಮಗೆ ಮತ್ತಷ್ಟುದುಃಖ ನೀಡುತ್ತಿತ್ತು. ಕೆಲವು ಸಂದರ್ಭದಲ್ಲಿ ನಮ್ಮ ದೇಶಾಭಿಮಾನ ಅವರಲ್ಲಿ ಸಾಸಿವೆಯಷ್ಟು ಕೂಡ ಇಲ್ಲವಲ್ಲ ಎಂದು ಅವರ ದೇಶ ವಿರೋಧಿ ಚಟುವಟಿಕೆಗೆ ಕಣ್ಣೀರು ಹಾಕಿದ್ದೇವೆ. ಆದರೆ, ದೇಶ ರಕ್ಷಣೆಯಲ್ಲಿ ಮಾತ್ರ ಯಾವುದೇ ರಾಜಿ ಹಾಗೂ ಮುಲಾಜು ನೋಡಲಿಲ್ಲ. ನಾನು ಸೇವೆಗೈದ ನಾಲ್ಕು ವರ್ಷವೂ ನಮ್ಮ ಮೇಲೆ ಕಲ್ಲಿನ ದಾಳಿ ನಡೆಯುತ್ತಲೇ ಇತ್ತು.

ಹಲವು ಬಾರಿ ಸಮಯಕ್ಕೆ ಸರಿಯಾಗಿ ಊಟ ಬರುತ್ತಿರಲಿಲ್ಲ. ಕುಡಿಯಲು ಸಮರ್ಪಕ ನೀರಿಲ್ಲ. ದೇಹ ಕೊರೆಯುವ ಚಳಿ, ಶತ್ರುಗಳ ವಿವಿಧ ರೀತಿಯ ದಾಳಿಗಳು. ದೇಶಭಕ್ತಿಯ ಸೇವೆಯಲ್ಲಿ ಇವೆಲ್ಲ ನಮಗೆ ನೋವು ಹಾಗೂ ಸಂಕಟಗಳಂತೆ ಕಾಣಲೇ ಇಲ್ಲ. ಬಡವರ ಮಕ್ಕಳ ಹೊಟ್ಟೆಪಾಡಿನ ಉದ್ಯೋಗವಿದು ಎಂದು ಕೆಲವರು ಹೇಳುತ್ತಾರೆ. ಆದರೆ, ನನ್ನ ಪ್ರಕಾರ ದೇವರೇ ನಮಗೆ ದೇಶ ಸೇವೆ ಮಾಡಲು ಕಲ್ಪಿಸಿರುವ ಅವಕಾಶ. ನಾವು ರಜೆ ಸಿಕ್ಕಾಗ ತಾಯಿ ಹಾಗೂ ಮಡದಿ ನೋಡಲು ಎಷ್ಟುಸಂತಸದಿಂದ ಹೋಗುತ್ತೇವೆಯೋ ಅಷ್ಟೇ ಸಂತಸದಿಂದ ಮರಳಿ ಭಾರತ ಮಾತೆಯ ಸೇವೆಗೆ ಅಣಿಯಾಗುತ್ತೇವೆ. ಇದು ಕೇವಲ ಮಾತಲ್ಲ. ನನ್ನಂತೆ ಪ್ರತಿಯೊಬ್ಬ ಸೈನಿಕರ ಅಂತರಾಳದ ಮಾತು. 

ದೇಶ ಸೇವೆಗಾಗಿ ಬಂದವರ ನಡುವಿನ ಒಗ್ಗಟ್ಟು ಎಂಥವರಿಗೂ ಹೊಟ್ಟೆಕಿಚ್ಚು ತರಿಸುತ್ತದೆ. ನಾವು ನಮ್ಮ ಕುಟುಂಬಗಳನ್ನು ಬಿಟ್ಟು ಬಂದಿದ್ದೇವೆ ಎಂಬ ನೋವು ನಮ್ಮನ್ನು ಎಂದೂ ಕಾಡುವುದಿಲ್ಲ. ಏಕೆಂದರೆ, ನಾವೆಲ್ಲ ಸಹೋದರರಂತೆ ಇಲ್ಲಿ ಬದುಕುತ್ತಿರುತ್ತೇವೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತ ನೋವು ಹಂಚಿಕೊಳ್ಳುತ್ತಿರುತ್ತೇವೆ. ನಾನು ಗಡಿಯಲ್ಲಿ ಕಾಯುತ್ತಿರುವಾಗ ಶತ್ರುಗಳ ದಾಳಿಗಳು ನಮ್ಮ ಬಲಿಗಾಗಿ ಬರುತ್ತಿದ್ದರೆ, ಎಷ್ಟೋ ಸಲ ನಮ್ಮ ಸಹಚರರಿಂದ ರಕ್ಷಣೆಗೊಳಪಟ್ಟಿರುತ್ತೇವೆ. ಸದಾ ಕಾಲ ಜೊತೆಯಲ್ಲಿಯೇ ಇರುವಾಗ ಸಣ್ಣ ವೈಮ­ನಸ್ಸು ಬಂದರೂ ನಮ್ಮ ಕಾರ್ಯಕ್ಕೆ ಕಂಟಕ. ಹೀಗಾಗಿ ನಮ್ಮ ನಡುವೆ ಇಂತಹ ಯಾವ ವೈಮನಸ್ಸು ಬಂದಿಲ್ಲ, ಬರುವುದಿಲ್ಲ. ಏಕೆಂದರೆ, ನಾವೆಲ್ಲರೂ ದೇಶ ರಕ್ಷಕರು.

ನಿವೃತ್ತನಾಗಿ ಸೈನಿಕ ಶಾಲೆ ತೆರೆಯುವ ಬಯಕೆ:
ಸೇವೆ ಮುಗಿಸಿಕೊಂಡು ನಿವೃತ್ತಿ ಹೊಂದಿದ ನಂತರ, ಸೈನಿಕ ಶಾಲೆ ತೆರೆಯಬೇಕೆಂಬ ಬಯಕೆಯಿದೆ. ಆ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆಯೊಂದಿಗೆ ದೇಶಾಭಿಮಾನ ತುಂಬಬೇಕು. ಸೈನ್ಯದಲ್ಲಿ ಸೇರಲು ಆಸಕ್ತಿ ಇದ್ದವರಿಗೆ ಪ್ರವೇಶ ನೀಡಿ, ದೇಶಕ್ಕಾಗಿ ಸೇವೆ ಸಲ್ಲಿಸುವಂತೆ ಪ್ರೇರೇಪಿಸುತ್ತೇನೆ. ಅವರಿಗೆ ಸೈನ್ಯಕ್ಕೆ ಸೇರಲು ಬೇಕಾದ ಎಲ್ಲ ತರಬೇತಿಗಳನ್ನು ಶಾಲೆಯಲ್ಲಿ ನೀಡುತ್ತೇನೆ. ಸಮಾಜದಲ್ಲಿ ವಯೋವೃದ್ಧ ಪೋಷಕರನ್ನು ಹೊರ ಹಾಕುವ ಹೃದಯ ವಿದ್ರಾವಕ ಸಂಗತಿಗಳು ಹೆಚ್ಚಾಗುತ್ತಿವೆ. ಇದು ಬಹಳ ದುಃಖ ಹಾಗೂ ಖೇದಕರ ಸಂಗತಿ. ಹೀಗಾಗಿ ನಾನು ತೆರೆಯುವ ಶಾಲೆಯಲ್ಲಿ ದೇಶ, ತಾಯಿ ಹಾಗೂ ತಂದೆ ದೇವರ ಸಮ, ಅವರನ್ನು ಯಾವಾಗಲೂ ಪೂಜನೀಯ ದೃಷ್ಟಿಯಿಂದಲೇ ಕಾಣಬೇಕು ಹಾಗೂ ಗೌರವಿಸಿ, ಪೂಜಿಸಬೇಕೆಂಬ ಮನೋಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಪ್ರಯತ್ನ ಮಾಡುತ್ತೇನೆ.

ದೇಶಭಕ್ತಿ ತಲೆಗೆ ತುಂಬಿದ ಶಿಕ್ಷಕಿ:
ನಾನು ಮಹಾಂತೇಶ ಬಾಣಕರ. ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಎಂಬ ಹಳ್ಳಿಯವನು. 18 ವರ್ಷ ಮುಗಿಯುತ್ತಿದ್ದಂತೆಯೇ 2005ರಲ್ಲಿ ಸೈನ್ಯಕ್ಕೆ ಸೇರಿದೆ. ನನ್ನದು ಬಡ ಕುಟುಂಬ. ತಾಯಿ ಕಲ್ಲವ್ವ ಹಾಗೂ ತಂದೆ ಭರಮಪ್ಪ ಗಾರೆ ಕೆಲಸ ಮಾಡಿ ನನ್ನನ್ನು ಹಾಗೂ ಸಹೋದರಿಯನ್ನು ಸಲಹುತ್ತಿದ್ದರು. ನಾನು ಎಲ್ಲರಂತೆ ದೊಡ್ಡ ವ್ಯಕ್ತಿಯಾಗಬೇಕೆಂಬ ಕನಸಿತ್ತಾದರೂ, ವಿದ್ಯೆ ಮಾತ್ರ ತಲೆಗೆ ಹತ್ತುತ್ತಿರಲಿಲ್ಲ. ಶಾಲೆಯ ಕೊನೆಯ ಸಾಲು ಕಾಯಂ ಆಗಿತ್ತು. ಆದರೆ, ನಾನು 5ನೇ ತರಗತಿಯಲ್ಲಿದ್ದ ಸಂದರ್ಭದಲ್ಲಿ ನನ್ನ ಅದೃಷ್ಟವೇ ಬದಲಾಯಿತು. ಎಂಎಸ್‌ ಪಾಟೀಲ ಎಂಬ ಶಿಕ್ಷಕಿ, ಖಾಲಿ ಇದ್ದ ತಲೆಗೆ ವಿದ್ಯೆ ತುರುಕಿದರು. ಎಲ್ಲರಂತೆ ನಾನು ಮೊದಲನೇ ಸಾಲಿನಲ್ಲಿ ಕೂಡುವ ವಿದ್ಯಾರ್ಥಿಯಾದೆ. ಅವರ ಪಾಠದಿಂದ ಪ್ರೇರೇಪಿತನಾದ ನನ್ನಲ್ಲಿ ದೇಶಭಕ್ತಿ ಮೂಡಿತು. ಆವಾಗಿನಿಂದಲೇ ನನ್ನ ದೇಹದಾಢ್ರ್ಯತೆ ಕುರಿತು ಗಮನ ಹರಿಸಿದೆ. ಪ್ರತಿದಿನ ವ್ಯಾಯಾಮ ಮಾಡುವುದನ್ನು ರೂಢಿ ಮಾಡಿಕೊಂಡೆ. ಆಟೋಟಗಳಲ್ಲಿ ಭಾಗವಹಿಸತೊಡಗಿದೆ. ಪರಿಣಾಮವಾಗಿ ರಾಜ್ಯಮಟ್ಟದ ಕ್ರೀಡೆಗಳಲ್ಲಿಯೂ ಭಾಗವಹಿಸಿದೆ. ಎತ್ತರ ಜಿಗಿತ, ಜಾವಲಿನ್‌ ಎಸೆತ ಹಾಗೂ ಓಟ ನನ್ನ ಪ್ರಮುಖ ಕ್ರೀಡೆಗಳಾದವು. ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಕ್ರೀಡೆಗಳಲ್ಲಿ ಗೆದ್ದೆ. ಹೀಗಾಗಿ ಸೈನ್ಯ ಸೇರುವ ಗುರಿಯನ್ನು ಸರಳವಾಗಿ ಮುಟ್ಟಿದೆ.

(ನಿರೂಪಣೆ: ಹೊನ್ನಪ್ಪ ಲಕ್ಕಮ್ಮನವರ, ಕನ್ನಡಪ್ರಭ)

Follow Us:
Download App:
  • android
  • ios