ಜಮ್ಮುವಿನಿಂದ ಕೇವಲ 20 ಕಿಮೀ ದೂರದಲ್ಲಿರುವ ನಗರೋಟಾದಲ್ಲಿರುವ ಸೇನಾ ನೆಲೆಯು ಗಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಶ್ರೀನಗರ(ನ. 29): ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಮಂಗಳವಾರ ಬೆಳಗ್ಗೆ 5:30ರ ವೇಳೆಯಲ್ಲಿ ಉಗ್ರರು ನಗರೋಟಾದ ಭಾರತೀಯ ಸೇನಾ ಶಿಬಿರದ ಮೇಲೆ ಗ್ರೆನೇಡ್ ದಾಳಿ ನಡೆಸಿ ಒಬ್ಬ ಯೋಧನ ಬಲಿತೆಗೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಇಬ್ಬರು ಉಗ್ರರನ್ನು ಹತ್ಯೆಗೈದಿದ್ದಾರೆ. ಸದ್ಯ ಮೂಲಗಳ ಪ್ರಕಾರ ಮೂವರು ಸೂಸೈಡ್ ಬಾಂಬರ್'ಗಳು ಈ ದಾಳಿ ನಡೆಸಿದ್ದು, ಇನ್ನೋರ್ವ ಉಗ್ರ ಉಳಿದುಕೊಂಡಿರುವ ಶಂಕೆ ಇದೆ.
ಇಂದಿನ ದಾಳಿ ಘಟನೆಯಲ್ಲಿ ಓರ್ವ ಜೂನಿಯರ್ ಕಮಿಷನ್ಡ್ ಅಧಿಕಾರಿ ಹಾಗೂ ಮತ್ತೊಬ್ಬ ಸೈನಿಕನಿಗೆ ಗಾಯವಾಗಿರುವ ಬಗ್ಗೆ ಮಾಹಿತಿ ಬಂದಿದೆ. ಸದ್ಯ, ಮುಂಜಾಗ್ರತಾ ಕ್ರಮವಾಗಿ ನಗರೋಟಾದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.. ಅಲ್ಲದೆ ಹೆಚ್ಚುವರಿ ಭದ್ರತ ಸಿಬ್ಬಂದಿಗಳನ್ನು ಸ್ಥಳಕ್ಕೆ ನಿಯೋಜಿಸಲಾಗಿದ್ದು, ಯೋಧರು ನಗ್ರೋತ ಪ್ರದೇಶವನ್ನು ಸುತ್ತುವರಿದಿದ್ದಾರೆ.
ಜಮ್ಮುವಿನಿಂದ ಕೇವಲ 20 ಕಿಮೀ ದೂರದಲ್ಲಿರುವ ನಗರೋಟಾದಲ್ಲಿರುವ ಸೇನಾ ನೆಲೆಯು ಗಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸೇನೆಯ 16 ಕಾರ್ಪ್ಸ್'ನ ಮುಖ್ಯ ಕಚೇರಿಯೂ ಆಗಿದೆ. ಈ ಹಿನ್ನೆಲೆಯಲ್ಲಿ ಉಗ್ರಗಾಮಿಗಳು ಈ ಸೇನಾ ನೆಲೆಯನ್ನು ಟಾರ್ಗೆಟ್ ಆಗಿಸಿ ದಾಳಿ ಎಸಗಿರುವ ಸಾಧ್ಯತೆ ಇದೆ.
ಬಿಎಸ್'ಎಫ್ ಹೋರಾಟ:
ಮತ್ತೊಂದು ಪ್ರಕರಣದಲ್ಲಿ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರರ ಗುಂಪಿನೊಂದಿಗೆ ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕರು ಗುಂಡಿನ ಚಕಮಕಿಯಲ್ಲಿ ತೊಡಗಿದ್ದಾರೆ. ಸಾಂಬಾ ಸೆಕ್ಟರ್'ನ ರಾಮಗಡ್ ಬಳಿ ಈ ಘಟನೆ ವರದಿಯಾಗಿದೆ. ಕಳೆದ ಕೆಲ ವಾರಗಳಿಂದ ಉಗ್ರರ ದಾಳಿ ಹಾಗೂ ಒಳನುಸುಳುವಿಕೆ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ.
