Asianet Suvarna News Asianet Suvarna News

‘ಶಬರಿಮಲೆಯಲ್ಲಿ ಕುತೂಹಲ’

ಶಬರಿಮಲೆ ದೇಗುಲದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಅದಕ್ಕೆ ಕಾರಣವಾಗಿರುವುದು ಅತ್ಯಂತ ಮಹತ್ವಪೂರ್ಣವಾದ ಸುಪ್ರೀಂ ತೀರ್ಪಿನ ಬಳಿಕ ನಾಳೆ ಮಹಿಳೆಯರ ಪ್ರವೇಶವಾಗುತ್ತಾ ಎನ್ನುವ ವಿಚಾರವಾಗಿ.

Tension Rise Over Womens Entry Yo Sabarimala Temple
Author
Bengaluru, First Published Oct 16, 2018, 7:34 AM IST

ಶಬರಿಮಲೆ/ತಿರುವನಂತಪುರ :  ಪುರಾಣ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಸುಪ್ರೀಂ ಕೋರ್ಟ್‌ ಪ್ರವೇಶಾವಕಾಶ ಕಲ್ಪಿಸಿದ ಬಳಿಕ ಇದೇ ಮೊದಲ ಬಾರಿ ದೇಗುಲದ ಬಾಗಿಲು ಅಕ್ಟೋಬರ್‌ 17ರಂದು (ಬುಧವಾರ) ತೆರೆಯಲಿದೆ.

ಈ ಹಿನ್ನೆಲೆಯಲ್ಲಿ ಅಂದು ದೇವಾಲಯ ಪ್ರವೇಶಕ್ಕೆ ಪ್ರಗತಿಪರ ಮಹಿಳೆಯರು ಹಾಗೂ ಸಂಘಟನೆಗಳ ಸದಸ್ಯರು ತುದಿಗಾಲಲ್ಲಿ ನಿಂತಿದ್ದರೆ, ಇದನ್ನು ತಡೆಯಲು ತಾವು ಟೊಂಕ ಕಟ್ಟಿನಿಲ್ಲುವುದಾಗಿ ಸಂಪ್ರದಾಯವಾದಿ ಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು, ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ದೇವಾಲಯದ ಪ್ರದೇಶದಲ್ಲಿ ಭಾರಿ ಪ್ರಮಾಣದ ಕೋಲಾಹಲ ಏರ್ಪಡುವ ಭೀತಿ ಉಂಟಾಗಿದೆ. ಇಲ್ಲಿನ ಪರಿಸ್ಥಿತಿ ಕೇರಳದ ವಿವಿಧೆಡೆ ಪರಿಣಾಮ ಬೀರುವ ಸಾಧ್ಯತೆ ಕೂಡ ಇದೆ. ಹೀಗಾಗಿ ಬುಧವಾರ ಏನಾಗಬಹುದು ಎಂಬ ಭಾರೀ ಕುತೂಹಲ ಮಾಡಿದೆ.

ಈ ಹಿನ್ನೆಲೆಯಲ್ಲಿ ಶಬರಿಮಲೆ ದೇವಾಲಯದ ಸುತ್ತಮುತ್ತಲ ಪರಿಸರದಲ್ಲಿ ಭಾರಿ ಪ್ರಮಾಣದ ಬಿಗಿ ಪೊಲೀಸ್‌ ಬಂದೋಬಸ್‌್ತ ಹಮ್ಮಿಕೊಳ್ಳಲಾಗಿದೆ. ಆದರೆ ಈವರೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ಸಂಬಂಧ ಯಾವುದೇ ವಿಶೇಷ ವ್ಯವಸ್ಥೆಗಳನ್ನು ದೇವಾಲಯದ ಆಡಳಿತ ಮಂಡಳಿ ಮಾಡಿಕೊಂಡಿಲ್ಲ ಎಂದು ಮೂಲಗಳು ಹೇಳಿವೆ.

ಮಾಸಿಕ ಪೂಜೆ ಅಂಗವಾಗಿ ಅಕ್ಟೋಬರ್‌ 17ರಂದು ದೇವಾಲಯದ ಬಾಗಿಲು ತೆರೆಯಲಿದ್ದು, ಅಕ್ಟೋಬರ್‌ 22ರಂದು ಮುಚ್ಚಲಿದೆ. ಭಕ್ತರಿಗೆ 5 ದಿವಸ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಮಲಯಾಳಂ ಮಾಸ ‘ತುಲಾ’ ಅಂಗವಾಗಿ ಈ ವೇಳೆ ಪೂಜೆ-ಪುನಸ್ಕಾರಗಳು ಏರ್ಪಡಲಿವೆ.

ಇಂದು ಸಭೆ:  ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಿದ್ದರಿಂದ ಉದ್ಭವವಾಗಿರುವ ವಿಷಯಗಳ ಕುರಿತಂತೆ ಚರ್ಚಿಸಲು, ದೇಗುಲದ ನಿರ್ವಹಣೆ ಮಾಡುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ), ಮಂಗಳವಾರ ಮಹತ್ವದ ಸಭೆಯೊಂದನ್ನು ಆಯೋಜಿಸಿದೆ.

ಈ ಸಭೆಗೆ ದೇಗುಲದ ಅರ್ಚಕರು, ವಿವಿಧ ಧಾರ್ಮಿಕ ಸಂಘಟನೆಗಳು, ಅಯ್ಯಪ್ಪ ಭಕ್ತರ ಸಂಘಟನೆ, ಪಂದಳಂ ರಾಜಮನೆತನದ ಸದಸ್ಯರು, ವಿವಿಧ ಹಿಂದೂ ಸಂಘಟನೆಗಳು ಹಾಗೂ ಸಂಬಂಧ ಪಟ್ಟಎಲ್ಲರಿಗೂ ಆಹ್ವಾನ ನೀಡಲಾಗಿದೆ. ತಿರುವನಂತಪುರದ ದೇವಸ್ವಂ ಮಂಡಳಿ ಕಚೇರಿಯಲ್ಲಿ ಈ ಸಭೆ ಆಯೋಜಿಸಲಾಗಿದೆ.

ಸುಪ್ರೀಂಕೋರ್ಟ್‌ ಆದೇಶವನ್ನು ಪಾಲಿಸುವುದು ಹೇಗೆ? ಪಾಲಿಸದೇ ಇದ್ದರೆ ಮಂದೆ ಆಗುವ ತೊಂದರೆ, ಪಾಲಿಸಿದರೆ ಭಕ್ತರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರುವ ನಿಟ್ಟಿನಲ್ಲಿ ಟಿಡಿಬಿ ಈ ಸಭೆಯನ್ನು ಆಯೋಜಿಸಿದೆ. ಆದರೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿರೋಧಿಸುವ ರಾಜಮನೆತನದವರು ಈವರೆಗೂ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.

Follow Us:
Download App:
  • android
  • ios