ಹೆಲ್ಮೆಟ್ ಧರಿಸುವವರಿಗೆ 10 ಕಿವಿಮಾತು
- ಭಾಗ್ಯ ನಂಜುಂಡಸ್ವಾಮಿ
1. ಮೊದಲು ಕೂದಲ ಬುಡದಲ್ಲಿನ ಹೊಟ್ಟನ್ನು ನಿರ್ಮೂಲನೆ ಮಾಡಿ. ಒಂದು ಚಮಚ ಮೊಸರಿಗೆ, ಎರಡು ಚಮಚದಷ್ಟು ಅಲೊವೆರಾ ರಸವನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ ಸುಮಾರು ಅರ್ಧ ಗಂಟೆಯಷ್ಟು ಬಿಡಬೇಕು. ನಂತರ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಈ ರೀತಿ ವಾರಕ್ಕೆರಡು ಸಲ ಮಾಡಿದರೆ ಡ್ಯಾಂಡ್ರ್ ನಿವಾರಣೆ ಆಗುತ್ತದೆ. ಹೆಲ್ಮೆಟ್ ಧರಿಸಿದಾಗ ಕೂದಲು ಉದುರೋದು ನಿಲ್ಲುತ್ತದೆ.
2. ತಲೆಯಲ್ಲಿ ತುರಿಕೆಯಿದ್ದರೆ 1 ಚಮಚ ವಿನಿಗರ್ ಅನ್ನು 1 ಚಮಚ ನೀರಿನೊಂದಿಗೆ ಬೆರೆಸಿ, ತಲೆಗೆ ಸ್ಪ್ರೇ ಮಾಡಿ, ಹತ್ತು ನಿಮಿಷದ ನಂತರ ವಾಶ್ ಮಾಡಿದರೆ ಸಮಸ್ಯೆ ಕಾಡುವುದಿಲ್ಲ.
3. ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಹೆಲ್ಮೆಟ್ ಕಾಯಂ ಆಗಿ ಧರಿಸಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಮೆದೋಗ್ರಂಥಿಗಳ ಸ್ರಾವದಿಂದಾಗಿ, ಹೆಲ್ಮೆಟ್ ಧರಿಸಿದಾಗ ಕೂದಲಿನಲ್ಲಿ ಧೂಳು ಮತ್ತು ಕೊಳೆಯಿದ್ದರೆ ಕಿರಿಕಿರಿ ಆಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ತಲೆಸ್ನಾನ ಮಾಡಿ, ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ನೀರಿನಾಂಶದ ಕೂದಲನ್ನು ನೈಸರ್ಗಿಕವಾಗಿ ಒಣಗಿಸಿಕೊಳ್ಳುವುದು ಒಳ್ಳೆಯದು.
4. ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸುವುದರಿಂದ ಬೊಕ್ಕತಲೆ ಸಮಸ್ಯೆಯಿಂದ ಪಾರಾಗಬಹುದು. ಹಲವು ಸಂದರ್ಭದಲ್ಲಿ ಅನ್‌ಸೈಜ್ ಹೆಲ್ಮೆಟ್ ಧರಿಸುವುದರಿಂದ ಕೂದಲು ಹಿಂದಕ್ಕೆ ಎಳೆದಂತೆ ಭಾಸವಾಗುತ್ತದೆ. ಇದೇ ಕೂದಲುದುರಲು ಮೊದಲ ಕಾರಣ. ಅವಸರವನ್ನು ಬದಿಗಿಟ್ಟು, ಕಾಳಜಿ ವಹಿಸಿ ಹೆಲ್ಮೆಟ್ ಧರಿಸಿ.
5. ಕೇವಲ ಕೂದಲನ್ನು ಶುಚಿಯಾಗಿಟ್ಟುಗೊಂಡರೆ ಸಾಲದು, ಧರಿಸುವ ಹೆಲ್ಮೆಟ್ ಅನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೆಲ್ಮೆಟ್ ಧರಿಸಿದಾಗ ಬೆವರುವುದರಿಂದ, ಹೆಲ್ಮೆಟ್‌ನ ಒಳಪದರವೂ ಒದ್ದೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಧರಿಸಿದ ಹೆಲ್ಮೆಟ್ ಅನ್ನು ಸೂಕ್ತವಾಗಿ ಗಾಳಿಯಾಡುವ ಸ್ಥಳದಲ್ಲಿಡುವುದು ಉತ್ತಮ. ಬೆವರಿನ ವಾಸನೆಯನ್ನು ಈ ಮೂಲಕ ತಡೆಗಟ್ಟಬಹುದು.
6. ಹೆಲ್ಮೆಟ್ ಧರಿಸಿ ಗಾಡಿ ಓಡಿಸುವಾಗ ಮಧ್ಯೆ ಬ್ರೇಕ್ ಸಿಕ್ಕರೆ ಹೆಲ್ಮೆಟ್ ಅನ್ನು ತೆಗೆದಿಟ್ಟುಕೊಳ್ಳಿ. ಇದರಿಂದ, ಕೂದಲಿಗೂ ಗಾಳಿಯಾಡಿದಂತಾಗುತ್ತದೆ. ಹೆಲ್ಮೆಟ್ ಕೂಡ ಏರ್ ಫ್ರೀಯಾಗುತ್ತದೆ.
7. ಹೆಲ್ಮೆಟ್ ಧರಿಸಿದಾಗ ಒಳ ಪದರವು ಬೆವರಿನಿಂದ ಕೂಡಿರುವುದರಿಂದ ಇದಕ್ಕೆ ಬ್ಯಾಕ್ಟೀರಿಯಾ ಹಾಗೂ ಬೂಸ್ಟ್ ಅಟ್ಯಾಕ್ ಆಗುವ ಸಂಭವ ಜಾಸ್ತಿ. ಹಾಗಾಗಿ ಆ್ಯಂಟಿ ಬ್ಯಾಕ್ಟೀರಿಯಲ್ ಸಲೂಷನ್ ಅನ್ನು ವಾರಕ್ಕೊಮ್ಮೆಯಾದರೂ ಸಿಂಪಡಿಸಿ ಸೂರ್ಯನ ಶಾಖಕ್ಕೆ ಇಟ್ಟು ಡ್ರೈ ಮಾಡುವುದರಿಂದ ಹೆಲ್ಮೆಟ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
8. ಹೆಲ್ಮೆಟ್ ಅನ್ನು ಇಡುವಾಗ, ತಲೆಕೆಳಗಾಗಿ ಅಂದರೆ, ಓಪನ್ ಇರುವ ಭಾಗವನ್ನು ಮೇಲ್ಮುಖವಾಗಿ ಇಡುವುದರಿಂದ ಅದರೊಳಗೆ ಗಾಳಿಯಾಡಿ, ಹೆಲ್ಮೆಟ್ ಸುರಕ್ಷಿತವಾಗಿ ಹೆಚ್ಚು ಕಾಲ ಬಾಳಿಕೆ ಬರುವುದರೊಂದಿಗೆ ಕೂದಲಿಗೂ ಯಾವುದೇ ಹಾನಿ ಆಗದಂತೆ ತಡೆಯಬಹುದು.
9. ಹೆಲ್ಮೆಟ್‌ನ ಒಳ ಪದರಕ್ಕೆ ಸುವಾಸನೆಯುಕ್ತವಾದ ಸ್ಪ್ರೇಯನ್ನು ಹಾಕಬಾರದು. ಇದರಿಂದಾಗಿ ಕೂದಲಿಗೆ ಇನ್ನೂ ಹಾನಿಯಾಗುತ್ತದೆ. ರಾಸಾಯನಿಕಗಳು ಕೂದಲೊಂದಿಗೆ ಬೆರೆತು ಡ್ರೈ ಮಾಡುತ್ತವೆ. ಬಿಳಿಕೂದಲಿನ ಸಮಸ್ಯೆಯೂ ಬರಬಹುದು.
10. ಉತ್ತಮ ಗುಣಮಟ್ಟದ ಹೆಲ್ಮೆಟ್ ಖರೀದಿಸುವುದರಿಂದ, ಕೂದಲಿನ ಸಮಸ್ಯೆಯಿಂದ ಪಾರಾಗಬಹುದು.
