ಪರ, ವಿರೋಧ ಅಭಿಪ್ರಾಯಗಳಿಂದ ಮಹತ್ವ ಪಡೆದುಕೊಂಡಿದ್ದ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂಗಳ ಸುಲಿಗೆಗೆ ಕಡಿವಾಣ ಹಾಕುವ ಉದ್ದೇಶದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ -2017’ ಅನ್ನು ಜಂಟಿ ಸಲಹಾ ಸಮಿತಿ ಪರಾಮರ್ಶೆಗೆ ಒಪ್ಪಿಸಲು ವಿಧಾನಸಭೆ ಮಂಗಳವಾರ ನಿರ್ಧರಿಸಿತು.
ಬೆಂಗಳೂರು (ಜೂ.21): ಪರ, ವಿರೋಧ ಅಭಿಪ್ರಾಯಗಳಿಂದ ಮಹತ್ವ ಪಡೆದುಕೊಂಡಿದ್ದ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ಸುಲಿಗೆಗೆ ಕಡಿವಾಣ ಹಾಕುವ ಉದ್ದೇಶದ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ -2017’ ಅನ್ನು ಜಂಟಿ ಸಲಹಾ ಸಮಿತಿ ಪರಾಮರ್ಶೆಗೆ ಒಪ್ಪಿಸಲು ವಿಧಾನಸಭೆ ಮಂಗಳವಾರ ನಿರ್ಧರಿಸಿತು.
ವೈದ್ಯಕೀಯ ಚಿಕಿತ್ಸೆ ಸೇವಾ ವಲಯವಾಗಿ ಉಳಿಯದೆ ವ್ಯಾಪಾರದ ದಂಧೆಯಾಗಿ ಬದಲಾಗಿರುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜನಸಾಮಾನ್ಯರ ಸುಲಿಗೆಗೆ ಬ್ರೇಕ್ ಹಾಕಿ, ಪ್ರತಿಯೊಂದು ಚಿಕಿತ್ಸೆಗೆ ತಜ್ಞರ ಸಮಿತಿ ಶಿಫಾರಸ್ಸಿನಂತೆ ದರ ನಿಗದಿ ಮಾಡುವ ವಿಧೇಯಕದ ಸದಾಶಯಕ್ಕೆ ಸದನ ಸಂಪೂರ್ಣ ಸಹಮತ ವ್ಯಕ್ತಪಡಿಸಿತು. ಆದರೆ, ವಿಧೇಯಕದ ಸಾಧಕ -ಬಾಧಕಗಳ ಮತ್ತೊಂದು ಸುತ್ತಿನ ಪರಾಮರ್ಶೆ ನಡೆಸಲು ಜಂಟಿ ಸಲಹಾ ಸಮಿತಿಗೆ ಒಪ್ಪಿಸಬೇಕೆಂಬ ಸಲಹೆಗೆ ಸರಕಾರ ಸಮ್ಮತಿ ಸೂಚಿಸಿತು.
2007ರಲ್ಲಿ ಜಾರಿಗೆ ಬಂದಿರುವ ಈ ಸಂಬಂಧದ ಕಾಯಿದೆ ಬಲಪಡಿಸಿ ಖಾಸಗಿ ಆಸ್ಪತ್ರೆಗಳು ವಿಧಿಸುವ ದರದ ಮೇಲೆ ಹತೋಟಿ ಸಾಧಿಸಿ, ಸಾರ್ವಜನಿಕರ ಹಿತಾಸಕ್ತಿ ಕಾಯಲು ತಿದ್ದುಪಡಿ ತರುವ ಸರಕಾರದ ಪ್ರಸ್ತಾವನೆಯನ್ನು ಪ್ರತಿಪಕ್ಷ ಬಿಜೆಪಿ ಸಾರಾಸಗಟಾಗಿ ವಿರೋಧಿಸಲಿಲ್ಲ. ಆದರೆ, ಈ ಕಾಯಿದೆ ಜಾರಿಯ ಪರಿಣಾಮಗಳ ಬಗ್ಗೆ ಕೆಲವು ಸಂಶಯ ವ್ಯಕ್ತಪಡಿಸಿತು ಮತ್ತು ಸಾಧಕ -ಬಾಧಕಗಳ ಸಮಗ್ರ ಪರಾಮರ್ಶೆ ನಡೆಯಬೇಕು ಎಂದು ಪಟ್ಟುಹಿಡಿಯಿತು. ಪ್ರತಿಪಕ್ಷದ ಬೇಡಿಕೆಗೆ ಮಣಿದ ಸರಕಾರ ತನ್ನ ಹೆಜ್ಜೆ ಹಿಂದೆ ಸರಿಸದಿದ್ದರೂ, ಜಂಟಿ ಸಲಹಾ ಸಮಿತಿ ಪರಿಶೀಲನೆಗೆ ಒಪ್ಪಿಸಲು ಸಮ್ಮತಿಸಿತು. ಒಂದು ತಿಂಗಳ ಕಾಲಮಿತಿಯೊಳಗೆ ಈ ಪರಿಶೀಲನೆ ಕಾರ್ಯ ಮುಗಿಯಬೇಕು ಎಂದು ಸರಕಾರ ಬಯಸಿತು.
ಇದರೊಂದಿಗೆ, ಕಳೆದ ವಾರ ಮಂಡನೆಯಾಗಿದ್ದ ವಿಧೇಯಕವನ್ನು ವಿರೋಧಿಸಿ ಬೀದಿಗಿಳಿದಿದ್ದ ಖಾಸಗಿ ಆಸ್ಪತ್ರೆ ವೈದ್ಯರು ತುಸು ನಿರಾಳರಾಗಿದ್ದಾರೆ. ಆದರೆ, ಸರಕಾರದ ಈ ದಿಟ್ಟ ತೀರ್ಮಾನ ಜಾರಿಯಾಗುವ ಆಶಾವಾದದಲ್ಲಿದ್ದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ನಿರಾಶೆಯಾಗಿದೆ. ಮುಂದಿನ ನವೆಂಬರ್ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವರೆಗೆ ಪ್ರಸ್ತಾವಿತ ವಿಧೇಯಕ ಮುಂದೂಡಿಕೆ ಖಚಿತವಾಗಿದೆ.
ಸದನ ಸಹಮತ: ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅಧ್ಯಕ್ಷತೆಯ ಸಮಿತಿ ಶಿಫಾರಸ್ಸಿನಂತೆ ರೂಪಿಸಲಾಗಿರುವ ವಿಧೇಯಕದ ಆಶಯ ಮತ್ತು ಉದ್ದೇಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ಕುಮಾರ್ ಸುಮಾರು ಒಂದೂವರೆ ತಾಸು ಸುದೀರ್ಘ ಕಾಲ ಸದನಕ್ಕೆ ವಿವರಿಸಿದರು. ನಂತರವೂ ಸದನದಲ್ಲಿ ದೀರ್ಘಾವಧಿ ಚರ್ಚೆ ನಡೆಯಿತು. ಸಚಿವರಾದಿಯಾಗಿ ಹಲವು ಸದಸ್ಯರು ಪಕ್ಷಬೇಧವಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿರುವ ಸುಲಿಗೆ ಬಗ್ಗೆ ನೋವು, ಅತೃಪ್ತಿ ತೋಡಿಕೊಂಡರು. ಇಂತಹ ಕಾಯಿದೆ ಅಗತ್ಯ ಕುರಿತಂತೆ ಯಾರೊಬ್ಬರಿಂದಲೂ ಆಕ್ಷೇಪ ಬರಲಿಲ್ಲ. ಆದರೆ, ತರಾತುರಿ ಬೇಡ. ಜಂಟಿ ಸಲಹಾ ಸಮಿತಿ ಮೂಲಕ ಚರ್ಚೆ ನಡೆಯಲಿ ಎಂಬುದು ಸದನ ಅಭಿಪ್ರಾಯಪಟ್ಟಿತು. ಸಿಎಂ ಜತೆ ಸಮಾಲೋಚನೆ ನಡೆಸಿ ಈ ಅಭಿಪ್ರಾಯವನ್ನು ಆರೋಗ್ಯ ಸಚಿವ ರಮೇಶ್ಕುಮಾರ್ ಅವರೂ ಒಪ್ಪಿದರು.
ಸಚಿವರ ಸಮರ್ಥನೆ ಏನು?
1. ಸರಕಾರಿ ಆಸ್ಪತ್ರೆಗಳ ವೈದ್ಯರ ನಿಯಂತ್ರಣಕ್ಕೆ ಈಗಾಗಲೇ ಎಲ್ಲ ವ್ಯವಸ್ಥೆ ಇದೆ. ಸೇವಾ ನಿಯಮಾವಳಿಗಳ ವ್ಯಾಪ್ತಿಯಲ್ಲಿದ್ದಾರೆ. ಇದು ಖಾಸಗಿ ಆಸ್ಪತ್ರೆಗಳ ವೈದ್ಯರ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ. ಆದರೆ, ಸರಕಾರದ ಸದಾಶಯದ ವಿರುದ್ಧ ವೈದ್ಯ ಸಿಬ್ಬಂದಿಯನ್ನು ತಪ್ಪುದಾರಿಗೆಳೆದು ಎತ್ತಿಕಟ್ಟುವ ಕೆಲಸವನ್ನು ಕಾರ್ಪೊರೇಟ್ ಆಸ್ಪತ್ರೆಗಳು ಮಾಡುತ್ತಿವೆ.
2. ಖಾಸಗಿ ಆಸ್ಪತ್ರೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲು ಮಾಡುವುದನ್ನು ಕೇಳಬಾರದು ಎಂದಾದರೆ ಸರಕಾರ ಏಕಿರಬೇಕು. ಜನರ ಹಿತ ಕಾಯುವುದು ಸರಕಾರದ ಜವಾಬ್ದಾರಿಯೇ ಹೊರತು, ಕಾರ್ಪೊರೇಟ್ ಹಿಡಿತದಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಿಕೊಡುವುದಲ್ಲ.
3. ನಕಲಿ ಹಾಗೂ ಮನಸೋಇಚ್ಛೆ ಬಿಲ್ ಮಾಡಿ ಹಣ ಗಳಿಸುತ್ತಿರುವ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳೇ ರಾಜ್ಯದ 349 ಖಾಸಗಿ ಆಸ್ಪತ್ರೆಗಳನ್ನು ಕಪ್ಪುಪಟ್ಟಿಗೆ ಸೇರಿಸಿವೆ.
4. ಸರಕಾರದ ವಿವಿಧ ವಿಮಾ ಯೋಜನೆಗಳ ಸುಮಾರು ಒಂದು ಸಾವಿರ ಕೋಟಿ ರೂ. ಹಣದಲ್ಲಿ ಶೇ.80 ಹಣ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದೆ. ಸಾರ್ವಜನಿಕ ತೆರಿಗೆ ಹಣದ ಈ ದುರ್ವಿನಿಯೋಗ ತಪ್ಪಿಸುವುದು ಸರಕಾರದ ಜವಾಬ್ದಾರಿ.
5. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದರವನ್ನು ಸರಕಾರ ಏಕಪಕ್ಷೀಯವಾಗಿ ನಿಗದಿ ಮಾಡಲ್ಲ. ಅದಕ್ಕಾಗಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳನ್ನೂ ಒಳಗೊಂಡ ಸಮಿತಿ ಇರುತ್ತದೆ.
