ದೇವರಿಗೆ ದಿಗ್ಬಂಧನ ವಿಧಿಸಿದ ಗ್ರಾಮಸ್ಥರು

First Published 22, Feb 2018, 12:13 PM IST
Temple Close In Belagavi
Highlights

ದೇವಸ್ಥಾನಕ್ಕೆ ದಾನವಾಗಿ ಬಂದಿದ್ದ ಗಂಟೆಗಳನ್ನು ಕದ್ದಿ ರುವ ಕಳ್ಳರನ್ನು ದೇವರೇ ಒಂಬತ್ತು ದಿನದೊಳಗೆ ಹಿಡಿದು ಶಿಕ್ಷಿಸಬೇಕು. ಅಲ್ಲಿವರೆಗೆ ದೇವರಿಗೆ ಪೂಜೆ,ಪುನಸ್ಕಾರ ನಡೆಸುವುದಿಲ್ಲ ಎಂದು ಹೇಳಿ ಗ್ರಾಮಸ್ಥರು ದೇವಸ್ಥಾನಕ್ಕೇ ಬಾಗಿಲು ಜಡಿದ ವಿಚಿತ್ರ ಘಟನೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ : ದೇವಸ್ಥಾನಕ್ಕೆ ದಾನವಾಗಿ ಬಂದಿದ್ದ ಗಂಟೆಗಳನ್ನು ಕದ್ದಿ ರುವ ಕಳ್ಳರನ್ನು ದೇವರೇ ಒಂಬತ್ತು ದಿನದೊಳಗೆ ಹಿಡಿದು ಶಿಕ್ಷಿಸಬೇಕು. ಅಲ್ಲಿವರೆಗೆ ದೇವರಿಗೆ ಪೂಜೆ,ಪುನಸ್ಕಾರ ನಡೆಸುವುದಿಲ್ಲ ಎಂದು ಹೇಳಿ ಗ್ರಾಮಸ್ಥರು ದೇವಸ್ಥಾನಕ್ಕೇ ಬಾಗಿಲು ಜಡಿದ ವಿಚಿತ್ರ ಘಟನೆ ಬೆಳಗಾವಿ ತಾಲೂಕಿನ ಅಗಸಗಾ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿಯಿಂದ 12 ಕಿ.ಮೀ ದೂರದಲ್ಲಿರುವ ಅಗಸಗಾದ ಗ್ರಾಮ ದೇವತೆ ಮಸಾಯಿದೇವಿ (ಮಸನ ಕೂವಾ) ದೇವಸ್ಥಾನದಲ್ಲಿ ಫೆ.17ರಂದು ದುಷ್ಕರ್ಮಿಗಳು ದೇವಿಗೆ ಹರಕೆಯಾಗಿ ಸಲ್ಲಿಸಿದ್ದ ಗಂಟೆಗಳನ್ನು ಕದ್ದೊಯ್ದಿದ್ದಾರೆ. ಈ ರೀತಿಯ ಕಳ್ಳತನ ನಡೆದದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಗಂಟೆ ಕದ್ದವನನ್ನು ನೀನೇ (ದೇವರೇ) ಹಿಡಿದು ತರಬೇಕು ಮತ್ತು ಗಂಟೆಗಳನ್ನು ವಾಪಸ್ ದೇವಸ್ಥಾನಕ್ಕೆ ತರಿಸಿಕೊಳ್ಳಬೇಕು ಎಂದು ದೇವರಿಗೆ ಮೊರೆ ಇಟ್ಟಿದ್ದಾರೆ.

ಜತೆಗೆ, ಇದಕ್ಕಾಗಿ ದೇವರಿಗೆ 9 ದಿನಗಳ ಕಾಲಾವಕಾಶವನ್ನೂ ನೀಡಿದ್ದಾರೆ. ಅಲ್ಲಿಯವರೆಗೆ ದೇವಸ್ಥಾನಕ್ಕೆ ಯಾರೂ ಭೇಟಿ ನೀಡುವುದಾಗಲಿ, ದೀಪ ಹಚ್ಚುವುದು, ಕರ್ಪೂರ ಬೆಳಗುವುದಾಗಲಿ ಮಾಡುವುದಿಲ್ಲ ಎಂಬ ನಿರ್ಧಾರ ಮಾಡಿದ್ದಾರೆ. ಅದರಂತೆ ದೇವಸ್ಥಾನದ ಬಾಗಿಲಿಗೆ ಸರಪಳಿಯಿಂದ ಬಿಗಿದು ದೇವರಿಗೇ ದಿಗ್ಬಂಧನ ವಿಧಿಸಿದ್ದಾರೆ.

loader