ಹೈದ್ರಾಬಾದ್ : ತೆಲುಗು ಟಿವಿ ನಟಿ ನಾಗ ಝಾನ್ಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪವಿತ್ರ ಬಂಧನ  ಧಾರಾವಾಹಿಯಲ್ಲಿ ನಟಿಸಿದ್ದು ಝಾನ್ಸಿ ಫೆಬ್ವರಿ 5 ರಂದು ಹೈದ್ರಾಬಾದ್ ನ ನಗರ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

 ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದು, ತಕ್ಷಣವೇ ಆಕೆಯನ್ನು ಇಲ್ಲಿನ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  ಆದರೆ ಅಷ್ಟರಲ್ಲೇ ಆಕೆ ಕೊನೆಯುಸಿರೆಳೆದಿದ್ದಾಗಿ ವೈದ್ಯರು ಘೋಷಿಸಿದರು. 

ಆಕೆ ಆತ್ಮಹತ್ಯೆಗೆ ಶರಣಾಗಿರುವ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಸ್ಥಳದಲ್ಲಿದ್ದ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆದ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

ಮೇಲ್ನೋಟಕ್ಕೆ ಆತ್ಮಹತ್ಯೆಗೆ ಲವ್ ಫೆಲ್ಯೂರ್ ಕಾರಣವಿರಬಹುದೆಂದು ಶಂಕಿಸಲಾಗಿದೆ.  ಕಳೆದ 6 ತಿಂಗಳಿನಿಂದ ಸೂರ್ಯ ಎನ್ನುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆದರೆ ಆಕೆಯ ಕುಟುಂಬದಲ್ಲಿ ಈ ಬಗ್ಗೆ ಸಾಕಷ್ಟು ವಿರೋಧವಿತ್ತು.  ಆಕೆಯ ಗೆಳೆಯ ಹಾಗೂ ಕುಟುಂಬದವರ ನಡುವೆ ಜಗಳವೂ ನಡೆದಿತ್ತು. ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.