2500 ಕೋಟಿ ರು. ಮೌಲ್ಯದ ಸೃಜನ್‌ ಸ್ವಯಂಸೇವಾ ಸಂಸ್ಥೆಯ ಭಾರೀ ಪ್ರಮಾಣದ ಹಗರಣದಲ್ಲಿ ಪ್ರಮುಖ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ಅವರು ಕೆಲವು ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡು  ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್  ಆರೋಪಿಸಿದ್ದಾರೆ.

ಪಟನಾ: ಜೆಡಿಯು ಹಾಗೂ ಆರ್‌ಜೆಡಿ ಮತ್ತೆ ಒಂದಾಗಬಹುದು ಎಂಬ ಗುಸುಗುಸು ಎದ್ದಿರುವ ನಡುವೆಯೇ ಅಂಥ ಸಾಧ್ಯತೆ ಇಲ್ಲ ಎಂಬಂತಹ ಹೊಸ ಬಾಂಬ್‌ ಅನ್ನು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಸಿಡಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಹಾಗೂ ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಅವರು 2500 ಕೋಟಿ ರು. ಮೌಲ್ಯದ ಸೃಜನ್‌ ಸ್ವಯಂಸೇವಾ ಸಂಸ್ಥೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಕೆಲವು ದಾಖಲೆಗಳನ್ನು ಆಧಾರವಾಗಿ ಇಟ್ಟುಕೊಂಡು ಆರೋಪಿಸಿದ್ದಾರೆ.

ಗುರುವಾರ ಈ ಕುರಿತ ಬ್ಯಾಂಕ್‌ ಸ್ಟೇಟ್‌ಮೆಂಟ್‌ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿರುವ ಅವರು. ಸುಶೀಲ್‌ ಮೋದಿ ಅವರ ಸೋದರಿ ರೇಖಾ ಹಾಗೂ ಬಂಧು ಊರ್ವಶಿ ಅವರು ಬಹುಕೋಟಿ ಸೃಜನ್‌ ಹಗರಣದ ಫಲಾನುಭವಿಗಳು. ಇವರು ಕೋಟ್ಯಂತರ ರುಪಾಯಿಗಳನ್ನು ಇದರಲ್ಲಿ ಸಂಪಾದಿಸಿದ್ದಾರೆ. ಇವೆಲ್ಲ ಸುಶೀಲ್‌ ಮೋದಿ ಹಾಗೂ ನಿತೀಶ್‌ಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಈ ಮೂಲಕ ಹಗರಣಕ್ಕೆ ಪರೋಕ್ಷ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸಿಬಿಐ ಹಾಗೂ ತನಿಖಾ ಸಂಸ್ಥೆಗಳ ಮೌನವೇಕೆ ಎಂದವರು ಪ್ರಶ್ನಿಸಿದರು.

ಏನಿದು ಹಗರಣ?: ಸೃಜನ್‌ ಎಂಬುದು ಮಹಿಳಾ ಅಭಿವೃದ್ಧಿ ಹಾಗೂ ವೃತ್ತಿಪರ ತರಬೇತಿ ಸ್ವಯಂಸೇವಾ ಸಂಸ್ಥೆಯಾಗಿದೆ. ಸರ್ಕಾರ ಹಾಗೂ ಕೆಲ ಬ್ಯಾಂಕ್‌ ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮವಾಗಿ ಸರ್ಕಾರದ ಅನುದಾನವನ್ನು ಪಡೆದುಕೊಂಡು ಅದನ್ನು ಇನ್ನಾರಿಗೋ ಸಾಲವಾಗಿ ನೀಡುತ್ತಿತ್ತು ಎಂದು ಆರೋಪಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥೆ ಮನೋರಮಾ ದೇವಿ ಕಳೆದ ವರ್ಷ ನಿಧನಳಾದ ಬಳಿಕ, ಸಾಲ ಪಡೆದವರು ಮರುಪಾವತಿಸದೇ ಕೈಎತ್ತಿದರು. ಆಗ ಈ ಹಗರಣ ಬೆಳಕಿಗೆ ಬಂತು. 2004ರಿಂದಲೇ ಈ ವ್ಯವಹಾರ ನಡೆಯುತ್ತಿತ್ತು ಎಂದು ದೂರಲಾಗಿದೆ. ಈ ಹಗರಣವು 2013ರಲ್ಲಿ ವಿತ್ತ ಸಚಿವರಾಗಿದ್ದ ಸುಶೀಲ್‌ ಮೋದಿಗೆ ಗೊತ್ತಿತ್ತು ಎಂಬುದು ಆರ್‌ಜೆಡಿ ಆರೋಪ.