ಕೌಲಾಲಂಪುರ: ಆನ್‌ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಟಗಳನ್ನು ಆಡಿ ವಿಶ್ವದಾದ್ಯಂತ ನೂರಾರು ಮಕ್ಕಳು, ಯುವಕರು ಸಾವನ್ನಪ್ಪಿ ದ ಘಟನೆಗಳ ಬೆನ್ನಲ್ಲೇ, ವಿದ್ಯಾರ್ಥಿನಿಯೊಬ್ಬಳು ಫೋಟೋ ಷೇರ್ ಮಾಡಲು ಇರುವ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಆನ್‌ಲೈನ್ ಸಮೀಕ್ಷೆ ನಡೆಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಮಲೇಷ್ಯಾದಲ್ಲಿ ನಡೆದಿದೆ. 

ಹೀಗಾಗಿ ಮತ್ತೊಮ್ಮೆ ಪೋಷಕರು ತಮ್ಮ ಮಕ್ಕಳ ಸಾಮಾಜಿಕ ಜಾಲ ತಾಣದ ಮೇಲೆ ಹದ್ದಿನಗಣ್ಣಿಡುವ ಪರಿಸ್ಥಿತಿ ಎದುರಾಗಿದೆ. ಮಲೇಷ್ಯಾದ ಸರವಾಕ್ ರಾಜ್ಯದ 16 ವರ್ಷ ವಿದ್ಯಾರ್ಥಿನಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ‘ ಅತ್ಯಂತ ಮಹತ್ವದ ವಿಷಯ. ನನಗೆ ಸಾವು/ ಬದುಕಿನ ವಿಷಯದಲ್ಲಿ ಸಹಾಯ ಮಾಡಿ’ ಎಂದು ಪೋಸ್ಟ್ ಒಂದನ್ನು ಮಾಡಿದ್ದಳು. ಆಕೆಯ ಪೋಸ್ಟ್ ನೋಡಿದ ಆಕೆ ಹಿಂಬಾಲಕರ ಪೈಕಿ ಶೇ. 69 ರಷ್ಟು ಜನ ಸಾಯುವ ಬಗ್ಗೆ ಸಲಹೆ ನೀಡಿದ್ದರಂತೆ. 

ಈ ಹಿನ್ನೆ ಲೆಯಲ್ಲಿ ವಿದ್ಯಾರ್ಥಿನಿ ಮನೆಯ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ನಡುವೆ ವಿದ್ಯಾರ್ಥಿನಿಗೆ ಆತ್ಮಹತ್ಯೆಗೆ ಸಲಹೆ ನೀಡಿದವರು, ಆತ್ಮಹತ್ಯೆಗೆ ಉತ್ತೇಜನ ನೀಡಿದ ಆರೋಪಕ್ಕೆ ತುತ್ತಾಗುವುದಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.