ಚಂಢಿಗಡ್(ಸೆ.14): ಪಂಜಾಬ್ ನಲ್ಲಿ ಐಟಿ ಉದ್ಯಮದಿಂದ ಬೇಸತ್ತ ಸುಮಾರು 186 ಟೆಕ್ಕಿಗಳು, ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪೊಲೀಸ್ ಇಲಾಖೆ ಸೇರಿದ್ದಾರೆ. ಎಂಟೆಕ್, ಬಿಟೆಕ್ ಮತ್ತಿತರ ಉನ್ನತ ವ್ಯಾಸಾಂಗ ಮಾಡಿರುವ ಈ 186 ಜನ, ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಪೇದೆಗಳಾಗಿ ನೇಮಕಗೊಂಡಿದ್ದಾರೆ.

ಒಟ್ಟು 257 ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿದ್ದು, ಈ ಪೈಕಿ 167 ಜನರನ್ನು ಐಟಿ ವಿಂಗ್ ಮತ್ತು 90 ಜನರನ್ನು ಗೂಢಚಾರ ವಿಭಾಗಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಎಲ್ಲರಿಗೂ ತಿಂಗಳಿಗೆ 10 ಸಾವಿರ ರೂ. ವೇತನ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಶಿಶ್ ಶರ್ಮಾ ಎಂಬ ಅಭ್ಯರ್ಥಿ, ಕಳೆದ ಎರಡು ವರ್ಷಗಳಿಂದ ಐಟಿಯಲ್ಲಿ ಕೆಲಸ ಮಾಡಿದ್ದರೂ ಉದ್ಯೋಗ ಭದ್ರತೆ ಇಲ್ಲವಾಗಿತ್ತು. ಈ ಕಾರಣಕ್ಕೆ ಸರ್ಕಾರಿ ಉದ್ಯೋಗಕ್ಕೆ ಕಾಯುತ್ತಿದ್ದ ನಾನು, ಪೊಲೀಸ್ ಇಲಾಖೆಗೆ ಅರ್ಜಿ ಹಾಕಿ ಪೇದೆ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅದರಂತೆ ಈ ಬಾರಿ ಪೇದೆ ಹುದ್ದೆಗೆ ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ, 6 ಎಂಟೆಕ್ ಪದವಿಧರರು, 180 ಬಿಟೆಕ್ ಮತ್ತು ಇನ್ನೂ ಹಲವರು ಎಂಎಸ್ ಸಿ ಮತ್ತಿತರ ಉನ್ನತ ಪದವಿ ಪಡೆದವರಾಗಿದ್ದಾರೆ ಎಂದು ತರಬೇತಿ ಕೇಂದ್ರದ ಮುಖ್ಯಸ್ಥ ರಾಜಪಾಲ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ.