ಲಕ್ನೋ(ಸೆ.29): ಸೂಚನೆ ನೀಡಿದರೂ ಕಾರು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೇ ಪೊಲೀಸ್ ಪೇದೆಯೋರ್ವ ಗುಂಡು ಹಾರಿಸಿದ ಪರಿಣಾಮ, ಆ್ಯಪಲ್ ಸಂಸ್ಥೆಯ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ನಿನ್ನೆ ತಡರಾತ್ರಿ ಘಟನೆ ಸಂಭವಿಸಿದ್ದು, ಹತ್ಯೆಯಾದ ಯುವಕನನ್ನು ಆ್ಯಪಲ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ವಿವೇಕ್ ತಿವಾರಿ ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭದಲ್ಲಿ ವಿವೇಕ್ ತಿವಾರಿ ತಮ್ಮ ಸಹೋದ್ಯೋಗಿ ಸನಾ ಖಾನ್ ಜೊತೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಪೊಲೀಸರು ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದು, ಇದರಿಂದ ಹೆದರಿದ ತಿವಾರಿ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. 

ಈ ವೇಳೆ ಅನುಮಾನಗೊಂಡು ಪೇದೆ ಪ್ರಶಾಂತ್ ಚೌದರಿ ಕಾರಿನ ಬೆನ್ನು ಹತ್ತಿದ್ದಾರೆ. ಈ ವೇಳೆ ತಿವಾರಿ ಕಾರು ಪೊಲೀಸ್ ಪೇದೆಗಳ ಬೈಕ್ ಗೆ ಢಿಕ್ಕಿ ಹೊಡಿದೆದೆ. ಬಳಿಕ ಆಕ್ರೋಶಗೊಂಡ ಪೇದೆ ಚೌದರಿ ತಿವಾರಿ ಮೇಲೆ ಗುಂಡು ಹಾರಿಸಿದ್ದು, ಗುಂಡೇಟು ತಗುಲುತ್ತಿದ್ದಂತೆಯೇ ತಿವಾರಿ ಅಂಡರ್ ಪಾಸ್ ಪಿಲ್ಲರ್ ಗೆ ಕಾರು ಡಿಕ್ಕಿ ಹೊಡೆಸಿದ್ದಾರೆ.

ಈ ವೇಳೆ ತಿವಾರಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಸಂಬಂಧ ತಿವಾರಿ ಸಹೋದ್ಯೋಗಿ ಸನಾ ಖಾನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಆಕೆ ನೀಡಿದ ದೂರಿನ ಮೇರೆಗೆ ಪೇದೆ ಪ್ರಶಾಂತ್ ಚೌದರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಒಟ್ಟು ಇಬ್ಬರು ಪೇದೆಗಳನ್ನು ಬಂಧಿಸಲಾಗಿದೆ.

ಇನ್ನು ತಮ್ಮ ಪತಿಯ ಮೇಲೆ ಪೊಲೀಸರ ಗುಂಡಿನ ದಾಳಿ ಬಗ್ಗೆ ಮಾತನಾಡಿರುವ ತಿವಾರಿ ಪತ್ನಿ ಕಲ್ಪನಾ ತಿವಾರಿ ಅವರು, ನನ್ನ ಗಂಡ ಉಗ್ರಗಾಮಿಯಲ್ಲ. ಆತನ ಮೇಲೆ ಗುಂಡು ಹಾರಿಸುವ ಹಕ್ಕು ಪೊಲೀಸರಿಗೆ ಇಲ್ಲ. ಪ್ರಕರಣ ಸಂಬಂಧ ಸಿಎಂ ಯೋಗಿ ಆದಿತ್ಯಾನಾಥ್ ಅವರು ಮಧ್ಯ ಪ್ರವೇಶ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು  ಆಗ್ರಹಿಸಿದ್ದಾರೆ.

ಇನ್ನು ಆ್ಯಪಲ್ ಉದ್ಯೋಗಿಯ ಮೇಲಿನ ಪೊಲೀಸರ ಗುಂಡಿನ ದಾಳಿ ಎನ್ ಕೌಂಟರ್ ಅಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ. ಆದರೆ ಘಟನೆಯ ಸತ್ಯಾಸತ್ಯತೆ ಅರಿಯಲು ಸಿಬಿಐ ತನಿಖೆಗೆ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ.