ವಿದ್ಯಾರ್ಥಿಯ ಎಲ್.ಸಿ. (ಲೀವಿಂಗ್ ಸರ್ಟಿಫಿಕೇಟ್) ಸೇರಿದಂತೆ ಇತರ ದಾಖಲೆಗಳನ್ನು ಆತ ಕೋರ್ಸಿನಿಂದ ಹಿಂತೆಗೆದ 7 ದಿನದೊಳಗೆ ನೀಡಬೇಕು. ಶುಲ್ಕವನ್ನೂ ಇದೇ ಅವಧಿಯಲ್ಲಿ ಮರಳಿಸಬೇಕು ಎಂದು ಎಐಸಿಟಿಇ ತಿಳಿಸಿದೆ.

ನವದೆಹಲಿ(ಮಾ.30): ಒಂದು ಕೋರ್ಸ್‌ನಲ್ಲಿ ಪ್ರವೇಶ ಪಡೆದರೂ ಹಾಜರಾಗದೇ ಹೋದರೆ ಅಥವಾ ಕೋರ್ಸನ್ನು ಅರ್ಧಕ್ಕೇ ಬಿಟ್ಟುಬಿಟ್ಟರೆ ಅಂಥ ವಿದ್ಯಾರ್ಥಿಗಳು ಕಟ್ಟಿದ್ದ ಶುಲ್ಕವನ್ನು ವಾಪಸು ನೀಡಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹೇಳಿದೆ.

ಒಂದು ವೇಳೆ ವಿದ್ಯಾರ್ಥಿ ಶೈಕ್ಷಣಿಕ ವರ್ಷದ ಅರ್ಧದಲ್ಲೇ ಕೋರ್ಸು ತ್ಯಜಿಸಿದರೆ ಸಂಸ್ಕರಣಾ ಶುಲ್ಕವಾಗಿ 1 ಸಾವಿರ ರುಪಾಯಿ, ಆವರೆಗೆ ವಿದ್ಯಾರ್ಥಿ ಇದ್ದ ಹಾಸ್ಟೆಲ್ ಶುಲ್ಕ ಹಾಗೂ ಮಾಸಿಕ ಶುಲ್ಕವನ್ನು ಪಡೆದು ಬಾಕಿ ಶುಲ್ಕ ವಾಪಸ್ ಮಾಡಬೇಕು ಎಂದು ಎಐಸಿಟಿಇ ಸೂಚಿಸಿದೆ ಹಾಗೂ ಈ ನಿರ್ಣಯವು ಬರುವ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗಲಿದೆ.

ಇದರ ಜೊತೆಗೆ ಆ ವಿದ್ಯಾರ್ಥಿಯ ಎಲ್.ಸಿ. (ಲೀವಿಂಗ್ ಸರ್ಟಿಫಿಕೇಟ್) ಸೇರಿದಂತೆ ಇತರ ದಾಖಲೆಗಳನ್ನು ಆತ ಕೋರ್ಸಿನಿಂದ ಹಿಂತೆಗೆದ 7 ದಿನದೊಳಗೆ ನೀಡಬೇಕು. ಶುಲ್ಕವನ್ನೂ ಇದೇ ಅವಧಿಯಲ್ಲಿ ಮರಳಿಸಬೇಕು ಎಂದು ಎಐಸಿಟಿಇ ತಿಳಿಸಿದೆ.